ಚಿಕಿತ್ಸೆ ಫಲಕಾರಿಯಾಗದೆ ಮಗಳು ಸಾವು, ಅಳಿಯನನ್ನೇ ಅಪಹರಿಸಿ ಕೊಂದ ಕುಟುಂಬ

ಉದಯಪುರದಲ್ಲಿ ಚಿಕಿತ್ಸೆ ಫಲಿಸದೆ ಮಗಳು ಮೃತಪಟ್ಟಿದ್ದಕ್ಕೆ ಆಕ್ರೋಶಗೊಂಡ ಕುಟುಂಬ, ಆಕೆಯ ಅಳಿಯ ಪಿಂಟೂಲಾಲ್ ವಡೇರಾನನ್ನು ಅಪಹರಿಸಿ ಹತ್ಯೆ ಮಾಡಿದೆ. ಮಗಳ ಸಾವಿಗೆ ಅಳಿಯನೇ ಕಾರಣ ಎಂಬ ಅನುಮಾನದ ಮೇಲೆ, ಶಸ್ತ್ರಾಸ್ತ್ರಗಳೊಂದಿಗೆ ಗ್ರಾಮಕ್ಕೆ ನುಗ್ಗಿದ ಸಂಬಂಧಿಕರು, ಪಿಂಟೂಲಾಲ್‌ನನ್ನು ಕದ್ದು ಅಮಾನುಷವಾಗಿ ಕೊಂದಿದ್ದಾರೆ. ಈ ಸೇಡಿನ ಹತ್ಯೆ ಪ್ರಕರಣದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಚಿಕಿತ್ಸೆ ಫಲಕಾರಿಯಾಗದೆ ಮಗಳು ಸಾವು, ಅಳಿಯನನ್ನೇ ಅಪಹರಿಸಿ ಕೊಂದ ಕುಟುಂಬ
ಸಾಂದರ್ಭಿಕ ಚಿತ್ರ
Image Credit source: ipleaders

Updated on: Apr 30, 2026 | 11:42 AM

ಉದಯಪುರ, ಏಪ್ರಿಲ್ 30:ಚಿಕಿತ್ಸೆ ಫಲಕಾರಿಯಾಗದೆ ಮಗಳು ಸತ್ತಿದ್ದಕ್ಕೆ, ಆಕೆಯ ಕುಟುಂಬದವರು ಅಳಿಯನನ್ನು ಅಪಹರಿಸಿ ಹತ್ಯೆ(Murder) ಮಾಡಿರುವ ಘಟನೆ ಉದಯಪುರದಲ್ಲಿ ನಡೆದಿದೆ. ಚೋಖಲಬಾರ ಗ್ರಾಮದ ಪಿಂಟೂಲಾಲ್ ವಡೇರಾ ಅವರ ಪತ್ನಿ ಪರು (25) ಏಪ್ರಿಲ್ 28 ರಂದು ಉದಯಪುರದ ಆಸ್ಪತ್ರೆಯಲ್ಲಿ ನಿಧನರಾದರು.

ಏಪ್ರಿಲ್ 24 ರಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಾಗ, ಆಕೆಯ ತವರು ಮನೆಯಾದ ಅಂಬಾವಿ ಗ್ರಾಮದ ಕುಟುಂಬಸ್ಥರು ಆಕ್ರೋಶಗೊಂಡಿದ್ದಾರೆ.

ಮಗಳ ಸಾವಿನ ಸುದ್ದಿ ತಿಳಿದು ಪಿಂಟೂಲಾಲ್ ಕುಟುಂಬಕ್ಕೆ ಮಾಹಿತಿ ನೀಡಿದ ಬೆನ್ನಲ್ಲೇ, ಮಂಗಳವಾರ ಸಂಜೆ ಆಕೆಯ ಸಂಬಂಧಿಕರು ಶಸ್ತ್ರಾಸ್ತ್ರಗಳೊಂದಿಗೆ ಚೋಖಲಬಾರ ಗ್ರಾಮಕ್ಕೆ ನುಗ್ಗಿದ್ದಾರೆ. ಅಳಿಯನ ಕುಟುಂಬವೇ ಮಗಳ ಕೊಲೆ ಮಾಡಿದೆ ಎಂದು ಆರೋಪಿಸಿದ ಆ ಗುಂಪು, ಪಿಂಟೂಲಾಲ್ ಮನೆಯನ್ನು ಧ್ವಂಸ ಮಾಡಿ ಗ್ರಾಮದಲ್ಲಿ ಭೀತಿಯ ವಾತಾವರಣ ಸೃಷ್ಟಿಸಿತು.

ಮತ್ತಷ್ಟು ಓದಿ: ಟ್ರಂಪ್ ಹತ್ಯೆ ಯತ್ನ: ಶ್ವೇತಭವನದಲ್ಲಿ ಗುಂಡು ಹಾರಿಸಿದ ಶೂಟರ್ ವಿರುದ್ಧ ಅಧಿಕೃತ ದೂರು ದಾಖಲು, ದೋಷಿ ಸಾಬೀತಾದರೆ ಜೀವಾವಧಿ ಶಿಕ್ಷೆ

ಗ್ರಾಮಸ್ಥರ ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ಬಂದಿದ್ದರೂ, ಪರಿಸ್ಥಿತಿ ನಿಯಂತ್ರಣಕ್ಕೆ ಸಿಗಲಿಲ್ಲ. ಪ್ರಾಣಭಯದಿಂದ ಪಿಂಟೂಲಾಲ್ ಮತ್ತು ಅವರ ಕುಟುಂಬಸ್ಥರು ಸ್ಥಳದಿಂದ ಪಲಾಯನ ಮಾಡಿದರು. ಆದರೆ, ಮರುದಿನ ಬೆಳಿಗ್ಗೆ ಪತ್ನಿಯ ಸಹೋದರ ಕರಣ್ ತನ್ನ ಸಹಚರರೊಂದಿಗೆ ಮರಳಿ ಬಂದು, ಪತಿಯನ್ನು ಬಂದೂಕು ತೋರಿಸಿ ಎಲ್ಲರ ಸಮ್ಮುಖದಲ್ಲೇ ಅಪಹರಿಸಿ ಅಂಬಾವಿಗೆ ಕರೆದೊಯ್ದರು.

ಪೊಲೀಸರು ಮಧ್ಯಪ್ರವೇಶಿಸಿ ಆತನನ್ನು ರಕ್ಷಿಸುವ ಮೊದಲೇ, 26 ವರ್ಷದ ಪಿಂಟೂಲಾಲ್ ಅವರನ್ನು ಮಹಿಳೆಯ ಕುಟುಂಬಸ್ಥರು ಅಮಾನುಷವಾಗಿ ಹತ್ಯೆ ಮಾಡಿದ್ದಾರೆ. ಮಗಳ ಸಾವಿಗೆ ಅಳಿಯನೇ ಕಾರಣ ಎಂಬ ಅನುಮಾನದ ಮೇಲೆ ನಡೆದ ಈ ಸೇಡಿನ ಹತ್ಯೆಯು ಈಗ ದೊಡ್ಡ ಕಾನೂನು ಸಮರಕ್ಕೆ ದಾರಿ ಮಾಡಿಕೊಟ್ಟಿದೆ.

ಪ್ರದೇಶದಲ್ಲಿ ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹತ್ಯೆಯಲ್ಲಿ ಭಾಗಿಯಾದವರಿಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us