ಕರ್ನಾಟಕದ ಶಾಲಾ ಪಠ್ಯಕ್ರಮದಿಂದ ಸಾವರ್ಕರ್, ಹೆಡ್ಗೆವಾರ್ ಪಠ್ಯಕ್ಕೆ ಕೊಕ್; ಈಗ ನಿಮ್ಮ ಸಿದ್ಧಾಂತ ಎಲ್ಲಿ ಹೋಯ್ತು?: ಉದ್ಧವ್ ಠಾಕ್ರೆ ವಿರುದ್ಧ ಫಡ್ನವೀಸ್ ವಾಗ್ದಾಳಿ
ನೀವು ಪುಸ್ತಕದಿಂದ ಹೆಸರನ್ನು ಅಳಿಸಬಹುದು, ಆದರೆ ಅದನ್ನು ಹೃದಯದಿಂದ ಅಳಿಸಲು ಸಾಧ್ಯವಿಲ್ಲ ಎಂದು ನಾನು ಹೇಳಲು ಬಯಸುತ್ತೇನೆ. ನೀವು ದೇಶದ ಸ್ವಾತಂತ್ರ್ಯಕ್ಕೆ ಕೊಡುಗೆ ನೀಡಿದವರ ಹೆಸರನ್ನು ಅಳಿಸಲು ಸಾಧ್ಯವಿಲ್ಲ. ಆದರೆ ನಾನು ಉದ್ಧವ್ ಠಾಕ್ರೆ ಅವರನ್ನು ಕೇಳುತ್ತೇನೆ. ಮಹಾವಿಕಾಸ ಅಘಾಡಿಯಲ್ಲಿ ಕಾಂಗ್ರೆಸ್‌ಗೆ ಹೆಗಲಿಗೆ ಹೆಗಲು ಕೊಟ್ಟು ಕೂತಿರುವವರೇ, ಈಗ ನಿಮ್ಮ ಪ್ರತಿಕ್ರಿಯೆ ಏನು? ಎಂದು ಕೇಳಿದ್ದಾರೆ ಫಡ್ನವೀಸ್.
ದೆಹಲಿ: ಕರ್ನಾಟಕದ (Karnataka) ಶಾಲಾ ಪಠ್ಯಕ್ರಮದಿಂದ ಸಾವರ್ಕರ್ (Savarkar) ಮತ್ತು ಹೆಡ್ಗೆವಾರ್ (Hedgewar) ಕುರಿತ ಪಠ್ಯ ತೆಗೆದುಹಾಕಿರುವ ಕಾಂಗ್ರೆಸ್ ಬಗ್ಗೆ ಮೌನ ವಹಿಸಿದ್ದಕ್ಕಾಗಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fadnavis) ಅವರು ಮಾಜಿ ಮಿತ್ರಪಕ್ಷ, ಶಿವಸೇನಾ (UBT) ನಾಯಕ ಉದ್ಧವ್ ಠಾಕ್ರೆಯನ್ನು (Uddhav Thackeray) ತರಾಟೆಗೆ ತೆಗೆದುಕೊಂಡಿದ್ದಾರೆ. ಎರಡು ತಿಂಗಳ ಹಿಂದೆ ಶಿವಸೇನಾ ನಾಯಕ ಠಾಕ್ರೆ, ಮಾಜಿ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಅವರಿಗೆ ಎಚ್ಚರಿಕೆ ನೀಡಿದ್ದು, ಸಾವರ್ಕರ್ ನಮಗೆ ರೋಲ್ ಮಾಡೆಲ್. ಅವರಿಗೆ ಮಾಡುವ ಅವಮಾನವು ದೇವರಿಗೆ ಮಾಡುವ ಅವಮಾನಕ್ಕೆ ಸಮಾನ ಎಂದು ಹೇಳಿದ್ದರು. ಸಾವರ್ಕರ್ನ್ನು ಅವಮಾನಿಸುವುದನ್ನು ಸಹಿಸಿಕೊಳ್ಳುವುದಿಲ್ಲ. ಸಾವರ್ಕರ್ ಅವರನ್ನು ಕೀಳಾಗಿಸಿದರೆ ವಿರೋಧ ಪಕ್ಷದ ಮೈತ್ರಿಯಲ್ಲಿ ಬಿರುಕು ಮೂಡುತ್ತದೆ ಎಂದು ಠಾಕ್ರೆ ಎಚ್ಚರಿಸಿದ್ದರು. ಇದನ್ನು ಉಲ್ಲೇಖಿಸಿರುವ ಫಡ್ನವೀಸ್, ಉದ್ಧವ್ ಠಾಕ್ರೆ ಅವರು ಅಧಿಕಾರದಲ್ಲಿರುವುದಕ್ಕಾಗಿ ತಮ್ಮ ಸಿದ್ಧಾಂತದಲ್ಲಿ ರಾಜಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ನೀವು ಪುಸ್ತಕದಿಂದ ಹೆಸರನ್ನು ಅಳಿಸಬಹುದು, ಆದರೆ ಅದನ್ನು ಹೃದಯದಿಂದ ಅಳಿಸಲು ಸಾಧ್ಯವಿಲ್ಲ ಎಂದು ನಾನು ಹೇಳಲು ಬಯಸುತ್ತೇನೆ. ನೀವು ದೇಶದ ಸ್ವಾತಂತ್ರ್ಯಕ್ಕೆ ಕೊಡುಗೆ ನೀಡಿದವರ ಹೆಸರನ್ನು ಅಳಿಸಲು ಸಾಧ್ಯವಿಲ್ಲ. ಆದರೆ ನಾನು ಉದ್ಧವ್ ಠಾಕ್ರೆ ಅವರನ್ನು ಕೇಳುತ್ತೇನೆ. ಮಹಾವಿಕಾಸ ಅಘಾಡಿಯಲ್ಲಿ ಕಾಂಗ್ರೆಸ್‌ಗೆ ಹೆಗಲಿಗೆ ಹೆಗಲು ಕೊಟ್ಟು ಕೂತಿರುವವರೇ, ಈಗ ನಿಮ್ಮ ಪ್ರತಿಕ್ರಿಯೆ ಏನು? ಅಧಿಕಾರಕ್ಕಾಗಿ ಮಾತ್ರ ಅಲ್ಪಸಂಖ್ಯಾತ ಸಮುದಾಯಗಳ ಓಲೈಕೆ ನಡೆಯುವುದನ್ನು ನೀವು ಒಪ್ಪಿಕೊಳ್ಳುತ್ತೀರಾ, ವೀರ ಸಾವರ್ಕರ್ ಅವರ ಈ ಅವಮಾನವನ್ನು ಒಪ್ಪಿಕೊಳ್ಳುತ್ತೀರಾ?ಅಥವಾ ಕುರ್ಚಿಗಾಗಿ ಸುಮ್ಮನಾಗುತ್ತೀರಾ?
ನನ್ನ ಪ್ರಶ್ನೆ ಉದ್ಧವ್ ಠಾಕ್ರೆ ಅವರಿಗೆ. ಈಗ ನಿಮ್ಮ ಪ್ರತಿಕ್ರಿಯೆ ಏನು ಎಂದು ನಿಖರವಾಗಿ ಹೇಳಿ. ನೀವು ಯಾರ ಮಡಿಲಲ್ಲಿ ಕುಳಿತಿದ್ದೀರೋ ಅವರು ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಅವರ ಹೆಸರನ್ನು ಅಳಿಸಲು ಹೊರಟಿದ್ದಾರೆ. ಮತಾಂತರವನ್ನು ಸಂಪೂರ್ಣವಾಗಿ ಬೆಂಬಲಿಸಲು ಹೊರಟಿದ್ದಾರೆ. ಈ ಬಗ್ಗೆ ನಿಮ್ಮ ನಿಖರವಾದ ಅಭಿಪ್ರಾಯವನ್ನು ಈಗ ನೀವೇ ಹೇಳಬೇಕು. ಅಧಿಕಾರಕ್ಕಾಗಿ ಈ ರಾಜಿ ಮಾಡಿಕೊಳ್ಳಲಾಗಿದೆಯೇ? ಎಂದು ಫಡ್ನವೀಸ್ ಕೇಳಿದ್ದಾರೆ.
ಬಿಜೆಪಿ ಅಧಿಕಾರದಲ್ಲಿದ್ದಾಗ ಶಾಲಾ ಪಠ್ಯಪುಸ್ತಕಗಳಲ್ಲಿ ಮಾಡಿದ ಬದಲಾವಣೆಗಳನ್ನು ರದ್ದುಗೊಳಿಸುವ ತನ್ನ ಚುನಾವಣಾ ಪ್ರಣಾಳಿಕೆಯ ಭರವಸೆಯಂತೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಗುರುವಾರ ಸಂಪುಟ ನಿರ್ಣಯದಲ್ಲಿ ರಾಜ್ಯದಲ್ಲಿ 6 ರಿಂದ 10 ನೇ ತರಗತಿಯ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಅನುಮೋದನೆ ನೀಡಿದೆ. ಈ ಶೈಕ್ಷಣಿಕ ವರ್ಷಕ್ಕೆ ಆರ್‌ಎಸ್‌ಎಸ್ ಸಂಸ್ಥಾಪಕ ಕೆಬಿ ಹೆಡ್ಗೆವಾರ್ ಮತ್ತು ಹಿಂದುತ್ವ ಸಿದ್ಧಾಂತವಾದಿ ವಿಡಿ ಸಾವರ್ಕರ್ ಅವರ ಅಧ್ಯಾಯಗಳನ್ನು ತೆಗೆದುಹಾಕಲಾಗಿದೆ.
ಇದನ್ನೂ ಓದಿ: Cabinet Meeting: ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿಗೆ ತೀರ್ಮಾನ, ಪಠ್ಯ ಪರಿಷ್ಕರಣೆಗೆ ಅಸ್ತು ಎಂದ ಸಿದ್ದರಾಮಯ್ಯ ಸಂಪುಟ!
ಸಮಾಜ ಸುಧಾರಕಿ ಮತ್ತು ಶಿಕ್ಷಣತಜ್ಞೆ ಸಾವಿತ್ರಿಬಾಯಿ ಫುಲೆ, ಜವಾಹರಲಾಲ್ ನೆಹರು ಮಗಳು ಇಂದಿರಾ ಗಾಂಧಿ ಅವರಿಗೆ ಬರೆದ ಪತ್ರಗಳು ಮತ್ತು ಬಿಆರ್ ಅಂಬೇಡ್ಕರ್ ಬಗ್ಗೆ ಇರುವ ಕವನಗಳ ಅಧ್ಯಾಯಗಳನ್ನು ಸೇರಿಸಲು ಕಾಂಗ್ರೆಸ್ ತೀರ್ಮಾನಿಸಿದೆ.
ಪರಿಷ್ಕರಣೆ ಸಂದರ್ಭದಲ್ಲಿ ಏನನ್ನು ಸೇರಿಸಲಾಗಿದೆ ಮತ್ತು ತೆಗೆದಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ, ಹಿಂದಿನ ಬಿಜೆಪಿ ಸರ್ಕಾರ ಬದಲಾವಣೆ ಮಾಡುವ ಮೊದಲು ಇದ್ದುದನ್ನು ಮಾತ್ರ ನಾವು ಪುನಃಸ್ಥಾಪಿಸಿದ್ದೇವೆ. ಅವರು ಮಾಡಿದ ಬದಲಾವಣೆಗಳನ್ನು ನಾವು ತೆಗೆದುಹಾಕಿದ್ದೇವೆ ಎಂದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ