ಅದು 1998ರ ಮೇ 11. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ನೇತೃತ್ವದ ಭಾರತ ಸರ್ಕಾರ ರಾಜಸ್ಥಾನದ ಪೋಖ್ರಾನ್ನಲ್ಲಿ ಪರಮಾಣು ಪರೀಕ್ಷೆಯನ್ನು ನಡೆಸುವ ಮೂಲಕ ಇಡೀ ಪ್ರಪಂಚವನ್ನೇ ಅಚ್ಚರಿಗೊಳಿಸಿತ್ತು. ಈ ಅಣ್ವಸ್ತ್ರ ಪರೀಕ್ಷೆ (Nuclear tests) ಬಗ್ಗೆ ಭಾರತ ಬಹಳ ಗೌಪ್ಯತೆಯನ್ನು ಕಾಪಾಡಿಕೊಂಡಿದ್ದರಿಂದ ಭಾರತದ ಈ ನಡೆ ಇಡೀ ಜಗತ್ತಿಗೆ ಅಚ್ಚರಿ ಉಂಟುಮಾಡಿತ್ತು. ಆಗ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ವೈಜ್ಞಾನಿಕ ಸಲಹೆಗಾರರಾಗಿದ್ದ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ (Abdul Kalam) ಅವರು ಭಾರತ ನಡೆಸಿದ ಅಣ್ವಸ್ತ್ರ ಪರೀಕ್ಷೆಯ ನೇತೃತ್ವ ವಹಿಸಿಕೊಂಡಿದ್ದರು. ಆದರೆ, ಆ ಅಣ್ವಸ್ತ್ರ ಪರೀಕ್ಷೆಗೆ ಇಸ್ರೇಲ್ ಒಂದನ್ನು ಹೊರತುಪಡಿಸಿ ಉಕ್ರೇನ್ ಸೇರಿದಂತೆ ಎಲ್ಲ ದೇಶಗಳೂ ವಿರೋಧ ವ್ಯಕ್ತಪಡಿಸಿದ್ದವು. ಇದೀಗ ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ್ದು, ರಷ್ಯಾದ ಅಧ್ಯಕ್ಷರ ಜೊತೆ ಈ ಕುರಿತು ಮಾತನಾಡಿ, ಮಧ್ಯ ಪ್ರವೇಶ ಮಾಡುವಂತೆ ಭಾರತಕ್ಕೆ ಉಕ್ರೇನ್ ಮನವಿ ಮಾಡಿದೆ.
ರಷ್ಯಾದ ಪಡೆಗಳು ಉಕ್ರೇನ್ನನ್ನು ಮಿಲಿಟರೈಸ್ ಮಾಡಲು ಉಕ್ರೇನ್ ವಿರುದ್ಧ ವಿಶೇಷ ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಉಕ್ರೇನಿಯನ್ ಸರ್ಕಾರವು ರಷ್ಯಾದ ಮನವೊಲಿಸಿ, ಈ ಯುದ್ಧದಲ್ಲಿ ಮಧ್ಯ ಪ್ರವೇಶಿಸಲು ಜಗತ್ತಿನ ಎಲ್ಲಾ ಪ್ರಮುಖ ದೇಶಗಳಿಗೆ ಮನವಿ ಮಾಡುತ್ತಿದೆ. ಉಕ್ರೇನ್ ಗಂಭೀರ ಬಿಕ್ಕಟ್ಟನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ವೊಲೊಡಿಮಿರ್ ಝೆಲೆನ್ಸ್ಕಿ ನೇತೃತ್ವದ ಸರ್ಕಾರವು ಭಾರತ ಮತ್ತು ರಷ್ಯಾ ದೇಶಗಳ ನಡುವಿನ ವಿಶೇಷ ಬಾಂಧವ್ಯವನ್ನು ಗಮನದಲ್ಲಿಟ್ಟುಕೊಂಡು ಭಾರತ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸುವಂತೆ ಮನವಿ ಮಾಡಿದೆ. ಇಂದು ಭಾರತದಲ್ಲಿನ ಉಕ್ರೇನ್ ರಾಯಭಾರಿ ಇಗೊರ್ ಪೊಲಿಖಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಕುರಿತು ಒತ್ತಾಯಿಸಿದ್ದಾರೆ.
ಆದರೆ, ಇದೀಗ ಭಾರತದ ಸಹಾಯಹಸ್ತಕ್ಕೆ ಕಾದಿರುವ ಉಕ್ರೇನ್ ಈ ಮೊದಲು ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರಲಿಲ್ಲ ಎಂಬುದನ್ನು ನಾವು ಗಮನಿಸಬೇಕು. ಉಕ್ರೇನ್ ಮತ್ತು ಭಾರತದ ನಡುವಿನ ಸಂಬಂಧವು ಸಾಕಷ್ಟು ಏರಿಳಿತಗಳನ್ನು ಕಂಡಿದೆ. ವಿಶೇಷವಾಗಿ ಭಾರತವು ಪರಮಾಣು ಪರೀಕ್ಷೆ ಮಾಡಲು ನಿರ್ಧರಿಸಿದಾಗ ಭಾರತದ ವಿರುದ್ಧ ಇದೇ ಉಕ್ರೇನ್ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸಹಿ ಹಾಕುವ ಮೂಲಕ ಭಾರತದ ಕೈಬಿಟ್ಟಿತ್ತು.
1998ರಲ್ಲಿ ಭಾರತ ಪರಮಾಣು ಪರೀಕ್ಷೆಗಳನ್ನು ನಡೆಸಿದಾಗ ಅದಕ್ಕೆ ತೀವ್ರವಾಗಿ ವಿರೋಧಿಸಿದ್ದ ಉಕ್ರೇನ್ ಆ ಪರಮಾಣು ಪರೀಕ್ಷೆಯ ನಂತರ ಭದ್ರತಾ ಮಂಡಳಿಯಲ್ಲಿ ಭಾರತದ ಕ್ರಮಗಳನ್ನು ಖಂಡಿಸಿತ್ತು. ಆಗ ಭಾರತದ ಬೆಂಬಲಕ್ಕೆ ನಿಂತಿದ್ದು ಇಸ್ರೇಲ್ ಮಾತ್ರ. 1998 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಭಾರತ ಸರ್ಕಾರ 5 ಪರಮಾಣು ಪರೀಕ್ಷೆಗಳನ್ನು ನಡೆಸಲು ನಿರ್ಧರಿಸುವ ಮೂಲಕ ಇಡೀ ಜಗತ್ತನ್ನು ಬೆರಗುಗೊಳಿಸಿತು. ಆಪರೇಷನ್ ಶಕ್ತಿ ಎಂಬ ಪರಮಾಣು ಪರೀಕ್ಷೆಗಳು ಭಾರತವನ್ನು ಕೇವಲ ಪರಮಾಣು ಶಕ್ತಿಯನ್ನಾಗಿ ಮಾಡದೆ, ದೇಶದ ದೀರ್ಘಾವಧಿಯ ಭದ್ರತಾ ಹಿತಾಸಕ್ತಿಗಳನ್ನು ಖಾತರಿಪಡಿಸುವ ಹಾದಿಯಲ್ಲಿ ಮುಖ್ಯ ಪಾತ್ರ ವಹಿಸಿತ್ತು.
ಆದರೆ, ಭಾರತದ ಪರಮಾಣು ಪರೀಕ್ಷೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದ ಉಕ್ರೇನ್, ಇತರ 25 ದೇಶಗಳೊಂದಿಗೆ ಭಾರತದ ಭದ್ರತಾ ಹಿತಾಸಕ್ತಿಗಳ ವಿರುದ್ಧ ನಿಂತಿತ್ತು. ಭಾರತ ನಡೆಸಿದ ಪರಮಾಣು ಪರೀಕ್ಷೆಗಳನ್ನು ಖಂಡಿಸಿದ ಯುಎನ್ ರೆಸಲ್ಯೂಶನ್ 1172ರ ಪರವಾಗಿ ಉಕ್ರೇನ್ ಸಹ ಸಹಿ ಹಾಕಿತ್ತು. ಭಾರತದ ಪರಮಾಣು ಪರೀಕ್ಷೆಗಳ ನಂತರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು 1172ರ ನಿರ್ಣಯವನ್ನು ಅಂಗೀಕರಿಸಿತು. ಆ ಮೂಲಕ ಭಾರತವು ಹೆಚ್ಚಿನ ಪರಮಾಣು ಪರೀಕ್ಷೆಗಳಿಂದ ದೂರವಿರಲು ಒತ್ತಾಯಿಸಿತು. ಹಾಗೇ, ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣ ರಹಿತ (NPT) ಮತ್ತು ಸಮಗ್ರ ಪರಮಾಣು-ಪರೀಕ್ಷೆ-ನಿಷೇಧದ ಒಪ್ಪಂದಕ್ಕೆ (CTBT) ಕರೆ ನೀಡಿತು ಎಂದು Opindia ವಿಶ್ಲೇಷಣೆ ಮಾಡಿದೆ.
ಇದೀಗ ರಷ್ಯನ್ನರ ಆಕ್ರಮಣದಿಂದಾಗಿ ಉಕ್ರೇನ್ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ. ಉಕ್ರೇನ್ ತನ್ನ ಮಿತ್ರರಾಷ್ಟ್ರವಾಗಿ ಪ್ರಬಲ ದೇಶಗಳಿಲ್ಲದೆ ಹತಾಶವಾಗಿದೆ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಇನ್ನು ಮುಂದೆ ಜಾಗತಿಕ ಪ್ರಾಬಲ್ಯವನ್ನು ಅನುಭವಿಸುವುದಿಲ್ಲ ಅಥವಾ ಪ್ರಪಂಚದ ಉಳಿದ ಭಾಗಗಳಿಂದ ಗೌರವವನ್ನು ಪಡೆಯುವುದಿಲ್ಲ. ಭಾರತದ ಭದ್ರತೆ ಮತ್ತು ಕಾರ್ಯತಂತ್ರದ ಉದ್ದೇಶಗಳಿಗೆ ವಿರುದ್ಧವಾದ ನಿಲುವನ್ನು ತೆಗೆದುಕೊಂಡ 22 ವರ್ಷಗಳ ನಂತರ ಉಕ್ರೇನ್ ಇಂದು ಭಾರತ ರಷ್ಯಾದ ವಿರುದ್ಧ ತನಗೆ ಬೆನ್ನೆಲುಬಾಗಿ ನಿಂತು ಸಹಾಯ ಮಾಡಬೇಕೆಂದು ಬಯಸುತ್ತಿದೆ. 22 ವರ್ಷಗಳ ಹಿಂದೆ ಭಾರತದ ವಿರುದ್ಧ ವಿಶ್ವ ಸಂಸ್ಥೆಯಲ್ಲಿ ಮತ ಚಲಾಯಿಸಿದ್ದ ಉಕ್ರೇನ್ ಇದೀಗ ಭಾರತದ ಸಹಾಯ ಬೇಡುತ್ತಿದೆ.
ಭಾರತದಲ್ಲಿ 1998ರ ಮೇ 11 ಮತ್ತು 13ರಂದು ರಾಜಸ್ಥಾನದ ಪೋಖ್ರಾನ್ ಪರಮಾಣು ಸ್ಥಳದಲ್ಲಿ 5 ಪರಮಾಣು ಪರೀಕ್ಷೆಗಳನ್ನು ನಡೆಸಲಾಯಿತು. ಇದು ಎರಡನೇ ಭಾರತೀಯ ಪರಮಾಣು ಪರೀಕ್ಷೆಯಾಗಿತ್ತು. ಮೊದಲ ಪರೀಕ್ಷೆಯನ್ನು ಮೇ 1974ರಲ್ಲಿ ಮಾಡಲಾಯಿತು. ಅದರ ಕೋಡ್ ಹೆಸರು ಸ್ಮೈಲಿಂಗ್ ಬುದ್ಧ ಎಂದಾಗಿತ್ತು. ಮೇ 11ರಂದು ಪರಮಾಣು ಪರೀಕ್ಷೆಯಲ್ಲಿ 15 ಕಿಲೋಟನ್ನಷ್ಟು ವಿದಳನ ಉಪಕರಣಗಳು ಮತ್ತು 0.2 ಕಿಲೋಟನ್ ಸಹಾಯಕ ಉಪಕರಣಗಳು ಸೇರಿದ್ದವು. ಈ ಅಣ್ವಸ್ತ್ರ ಪರೀಕ್ಷೆ ನಂತರ, ಜಪಾನ್ ಮತ್ತು ಅಮೆರಿಕ ಸೇರಿದಂತೆ ಪ್ರಮುಖ ದೇಶಗಳು ಭಾರತದ ವಿರುದ್ಧ ಹಲವಾರು ನಿರ್ಬಂಧಗಳನ್ನು ವಿಧಿಸಿದವು. ಇಸ್ರೇಲ್ ಮಾತ್ರ ಆಗ ಭಾರತದ ಬೆಂಬಲಕ್ಕೆ ನಿಂತಿತ್ತು ಎಂಬುದನ್ನು ನಾವು ನೆನಪಿಸಿಕೊಳ್ಳಬಹುದು.
ಇದನ್ನೂ ಓದಿ: Russia-Ukraine War: ಕೈವ್ ಬಳಿ 14 ಜನರಿದ್ದ ಉಕ್ರೇನ್ ಯುದ್ಧ ವಿಮಾನವನ್ನು ಹೊಡೆದುರುಳಿಸಿದ ರಷ್ಯಾ ಸೇನೆ
ರಷ್ಯಾದ ಮಿಲಿಟರಿ ಕಾರ್ಯಾಚರಣೆಯಿಂದ ತಲ್ಲಣಗೊಂಡಿರುವ ಉಕ್ರೇನ್ ಜನ ಅಗತ್ಯ ಸಾಮಗ್ರಿಗಳ ದಾಸ್ತಾನಿಗೆ ಮುಂದಾಗಿದ್ದಾರೆ
Published On - 8:54 pm, Thu, 24 February 22