Russia Vs Ukraine: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆಗೆ ಇಂದು ರಾತ್ರಿ ಮಾತನಾಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ

Russia Vs Ukraine: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆಗೆ ಇಂದು ರಾತ್ರಿ ಮಾತನಾಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್

ಉಕ್ರೇನ್ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಇಂದು (ಫೆ 24) ರಾತ್ರಿ ಮಾತುಕತೆ ನಡೆಸಲಿದ್ದಾರೆ

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Feb 24, 2022 | 10:34 PM

ದೆಹಲಿ: ಉಕ್ರೇನ್ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಇಂದು (ಫೆ 24) ರಾತ್ರಿ ಮಾತುಕತೆ ನಡೆಸಲಿದ್ದಾರೆ. ಈ ಕುರಿತು ಎಎನ್​ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ. ಅಮೆರಿಕ ಮತ್ತು ಯುರೋಪ್​ನ ಹಲವು ದೇಶಗಳ ಪ್ರಬಲ ವಿರೋಧವನ್ನೂ ಲೆಕ್ಕಿಸದೆ ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದೆ.

ಈ ಬಿಕ್ಕಟ್ಟಿನಲ್ಲಿ ಮಧ್ಯಪ್ರವೇಶಿಸಬೇಕೆಂದು ಉಕ್ರೇನ್​ನ ಭಾರತ ರಾಯಭಾರಿ ಈಗೊರ್ ಪೊಲಿಖಾ ವಿನಂತಿಸಿದ್ದರು. ‘ಭಾರತವು ವಿಶ್ವದ ಪ್ರಭಾವಿ ದೇಶ. ನಾವು ಈ ಬಾರಿ ಭಾರತವು ಗಟ್ಟಿದನಿಯಲ್ಲಿ ಮಾತನಾಡಬೇಕೆಂದು ಬಯಸುತ್ತಿದ್ದೇವೆ’ ಎಂದು ಹೇಳಿದ್ದರು. ‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಾಗತಿಕ ಮಟ್ಟದಲ್ಲಿ ಗೌರವವಿದೆ. ಉತ್ತಮ ಪ್ರಭಾವ ಹೊಂದಿರುವ ನರೇಂದ್ರ ಮೋದಿ ಅವರು ಗಟ್ಟಿಯಾಗಿ ಮಾತನಾಡಿದರೆ ಪುಟಿನ್ ಮುಂದಿನ ನಡೆಯ ಬಗ್ಗೆ ಯೋಚಿಸುತ್ತಾರೆ’ ಎಂದರು. ಉಕ್ರೇನ್​ನಲ್ಲಿ ಶಾಂತಿ ನೆಲೆಸಬೇಕೆಂದು ಭಾರತವು ಈಗಾಗಲೇ ಕರೆ ನೀಡಿದೆ. ಮುಂದಿನ ದಿನಗಳಲ್ಲಿ ಇದು ದೊಡ್ಡ ಬಿಕ್ಕಟ್ಟಿನ ಸ್ವರೂಪ ಪಡೆದುಕೊಂಡರೆ ಇಡೀ ಪ್ರದೇಶದಲ್ಲಿ ಶಾಂತಿ ಕಣ್ಮರೆಯಾಗಲಿದ್ದು, ಅಸ್ಥಿರ ವಾತಾವರಣ ನೆಲೆಗೊಳ್ಳಲಿದೆ ಎಂದು ಭಾರತವು ಹೇಳಿತ್ತು.

‘ಉಕ್ರೇನ್​ನಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಸರಿಯಾಗಿ ನಿರ್ವಹಿಸದಿದ್ದರೆ ಇಡೀ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಕದಡುತ್ತದೆ’ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಪ್ರತಿನಿಧಿಯಾಗಿರುವ ಟಿ.ಎಸ್.ತಿರುಮೂರ್ತಿ ಹೇಳಿದ್ದರು. ಉಕ್ರೇನ್​ ಬಿಕ್ಕಟ್ಟಿನಿಂದ ಭಾರತದ ಮೇಲೆ ಆಗುವ ಪರಿಣಾಮದ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ತಮ್ಮ ನಿವಾಸದಲ್ಲಿ ಸಭೆ ನಡೆಸಿ ಚರ್ಚಿಸಿದರು. ಭಾರತದಲ್ಲಿ ಈಗಾಗಲೇ ಕಚ್ಚಾ ತೈಲದ ಬೆಲೆ ಸತತ ಏರಿಕೆ ಕಾಣುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮಾನ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಭೆಯಲ್ಲಿ ಪಾಲ್ಗೊಂಡಿದ್ದರು. ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸುತ್ತಿದ್ದಂತೆಯೇ ಭಾರತೀಯ ಷೇರುಪೇಟೆಯು ತತ್ತರಿಸಿದ್ದು, ಸೆನ್ಸೆಕ್ಸ್ 2700 ಅಂಶಗಳ ಕುಸಿತ ದಾಖಲಿಸಿತು.

ಉಕ್ರೇನ್​ನಲ್ಲಿರುವ ಕರ್ನಾಟಕ ವಿದ್ಯಾರ್ಥಿಗಳ ರಕ್ಷಣೆಗೆ ನೋಡೆಲ್ ಅಧಿಕಾರಿ ನೇಮಕ

ರಷ್ಯಾ-ಉಕ್ರೇನ್ ಸಂಘರ್ಷ (Russia-Ukraine) ವಿಷಮಿಸುತ್ತಿರುವ ಹಿನ್ನೆಲೆಯಲ್ಲಿ ಉಕ್ರೇನ್​ನಲ್ಲಿರುವ ಕರ್ನಾಟಕ ಮೂಲದ ವಿದ್ಯಾರ್ಥಿಗಳ ರಕ್ಷಣೆಗಾಗಿ ಕರ್ನಾಟಕ ಸರ್ಕಾರವು ಅಗತ್ಯ ಕ್ರಮ ತೆಗೆದುಕೊಂಡಿದೆ. ಈ ಕುರಿತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅಧಿಸೂಚನೆ ಹೊರಡಿಸಿದ್ದಾರೆ. ‘ಉಕ್ರೇನ್​ನಲ್ಲಿ ಪ್ರಸ್ತುತ ಮಿಲಿಟರಿ ಕಾನೂನು ಜಾರಿ ಮಾಡಲಾಗಿದೆ. ಮುಂದೇನಾಗಲಿದೆ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಗೊತ್ತಿಲ್ಲ. ಉಕ್ರೇನ್​ನ ವಾಯುಮಾರ್ಗವನ್ನು ಮುಚ್ಚಲಾಗಿದೆ. ವಿಶೇಷ ವಿಮಾನಗಳನ್ನು ರದ್ದುಪಡಿಸಲಾಗಿದೆ. ಹೀಗಾಗಿ ಭಾರತದ ಜನರು ಮತ್ತು ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆಗೆ ಸಮಸ್ಯೆಯಾಗಿದೆ. ಉಕ್ರೇನ್ ರಾಜಧಾನಿ ಕೀವ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಲ್ಲಿರುವ ಎಲ್ಲ ಭಾರತೀಯರನ್ನು ರಕ್ಷಿಸಲು ಯತ್ನಿಸುತ್ತಿದೆ’ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

‘ಕರ್ನಾಟಕದ ಸಾಕಷ್ಟು ವಿದ್ಯಾರ್ಥಿಗಳು ಉಕ್ರೇನ್​ನಲ್ಲಿ ಸಿಲುಕಿದ್ದಾರೆ. ಇವರ ರಕ್ಷಣೆಗಾಗಿ ಮುಖ್ಯಮಂತ್ರಿ ಕಚೇರಿ ಮತ್ತು ಮುಖ್ಯಕಾರ್ಯದರ್ಶಿ ಸತತ ಪ್ರಯತ್ನ ನಡೆಸುತ್ತಿದ್ದಾರೆ. ವಿದೇಶಾಂಗ ವ್ಯವಹಾರಗಳ ಇಲಾಖೆ ಹಾಗೂ ಕೀವ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಮುಖ್ಯಮಂತ್ರಿ ಕಚೇರಿ ಸತತ ಸಂಪರ್ಕದಲ್ಲಿದೆ. ಅಲ್ಲಿನ ವಿದ್ಯಾರ್ಥಿಗಳನ್ನು ಸಂಪರ್ಕಿಸಲು ಮತ್ತು ಅವರಿಗೆ ಸಾಧ್ಯವಿರು ಎಲ್ಲ ನೆರವು ಒದಗಿಸಲು ವಿದೇಶಾಂಗ ವ್ಯವಹಾರಗಳ ಇಲಾಖೆ ಶ್ರಮಿಸುತ್ತಿದೆ. ಇದಕ್ಕಾಗಿ ಭಾರತ ಸರ್ಕಾರವು 24X7 ಕಾರ್ಯನಿರ್ವಹಿಸುವ ಸಹಾಯವಾಣಿಗಳನ್ನು ಆರಂಭಿಸಿದೆ’ ಎಂದು ಹೇಳಿದ್ದಾರೆ.

ಅಗತ್ಯ ಇರುವವರು ಯಾವುದೇ ದಿನ, ಯಾವುದೇ ಸಮಯದಲ್ಲಿ 24X7 ಸಹಾಯವಾಣಿಯನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆಗಳು 080 1070, 080 2234 0676. ಇಮೇಲ್: manoarya@gmail.com, revenuedmkar@gmail.com ಸಂಪರ್ಕಿಸಬಹುದು ಎಂದು ಹೇಳಿದ್ದಾರೆ. ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಇಲಾಖೆಯೂ ನಿಯಂತ್ರಣ ಕೇಂದ್ರ ಸ್ಥಾಪಿಸಿದ್ದು ಸಹಾಯವಾಣಿಗಳನ್ನು ಆರಂಭಿಸಿದೆ. +91 11 2301 2113, +91 11 2301 4104, +91 11 2301 7905. ಟೋಲ್​ಫ್ರೀ ಸಂಖ್ಯೆ 1800 11 8797 (ದೆಹಲಿ). ಇಮೇಲ್: situationroom@mea.gov.in

ಇದನ್ನೂ ಓದಿ: ನಿಮಗಿದು ಗೊತ್ತೇ?; ಭಾರತದ ಸಹಾಯ ಬೇಡುತ್ತಿರುವ ಇದೇ ಉಕ್ರೇನ್ ವಿಶ್ವಸಂಸ್ಥೆಯಲ್ಲಿ 1998ರ ಅಣ್ವಸ್ತ್ರ ಪರೀಕ್ಷೆಯನ್ನು ಖಂಡಿಸಿತ್ತು

ಇದನ್ನೂ ಓದಿ: Russia Ukraine War; ಉಕ್ರೇನ್​ನಲ್ಲಿ ಸಿಲುಕಿರುವ ಮಕ್ಕಳ ಪರದಾಟ ನೋಡಿ ಕಂಗಾಲಾದ ಪೋಷಕರು; ಸುರಕ್ಷಿತವಾಗಿ ಕರೆತರುವಂತೆ ಮನವಿ

Follow us on

Related Stories

Most Read Stories

Click on your DTH Provider to Add TV9 Kannada