ದೆಹಲಿ: ರಾಷ್ಟ್ರದ ರಾಜಧಾನಿ ದೆಹಲಿಯ ಆಸ್ಪಕ್ರೆಗಳಲ್ಲಿ ಕೊವಿಡ್ ರೋಗಿಗಳಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗುತ್ತಿಲ್ಲ. ಅದೇ ವೇಳೆ ಸೇನಾ ನೆಲೆಯ ಆಸ್ಪಕ್ರೆ ಮತ್ತು ಡಿಆರ್ಡಿಒ ಆಸ್ಪತ್ರೆಯಲ್ಲಿಯೂ ಹಾಸಿಗೆ ಸಿಗುತ್ತಿಲ್ಲ. ಕಳೆದ ರಾತ್ರಿ ಕೊವಿಡ್ ರೋಗಿಯಾಗಿದ್ದ ನಿವೃತ್ತ ಬ್ರಿಗೇಡಿಯರ್ ರಾಶ್ಪಲ್ ಸಿಂಗ್ ಪಾರ್ಮರ್ ಅವರಿಗೆ ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಬೆಡ್ ಸಿಗಲಿಲ್ಲ. ಹಾಗಾಗಿ ಅವರ ಮಗ ರಾತ್ರೋರಾತ್ರಿ ದೆಹಲಿಯಿಂದ ಚಂಡೀಗಢಕ್ಕೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ಇಂಡಿಯನ್
ಎಕ್ಸ್ಪ್ರೆಸ್ ಪತ್ರಿಕೆ ವರದಿ ಮಾಡಿದೆ.
ನವದೆಹಲಿಯ ಪಶ್ಚಿಮ್ ವಿಹಾರ್ ನಿವಾಸಿಯಾಗಿದ್ದ ಬ್ರಿಗೇಡಿಯರ್ ರಾಶ್ಪಲ್ ಸಿಂಗ್ ಪಾರ್ಮರ್ ಅವರಿಗೆ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಾಗಲೀ, ಸೇನಾ ನೆಲೆಯಲ್ಲಿರುವ ಆಸ್ಪತ್ರೆಯಲ್ಲಾಗಲೀ ಬೆಡ್ ಸಿಕ್ಕಿರಲಿಲ್ಲ . ಈ ಬಗ್ಗೆ ದಿ ಇಂಡಿಯನ್ ಎಕ್ಸ್ಪ್ರೆಸ್ ಜತೆ ಮಾತನಾಡಿದ ಮೊಹಾಲಿಯಲ್ಲಿರುವ ಮಾಜಿ ಯೋಧರ ದೂರು ಕೇಂದ್ರದ ಅಧ್ಯಕ್ಷ ಹಾಗೂ ಪಾರ್ಮರ್ ಅವರ ಹಿರಿಯ ಸಹೋದ್ಯೋಗಿಯೂ ಆಗಿರುವ ಲೆ.ಕರ್ನಲ್.ಎಸ್.ಎಸ್ ಸೋಹಿ (ನಿವೃತ್ತ), ಯಾವುದೇ ಆಸ್ಪತ್ರೆಯಲ್ಲಿ ಅವರಿಗೆ ಬೆಡ್ ಸಿಗಲಿಲ್ಲ. ಸೇನಾ ನೆಲೆಯಲ್ಲಿರುವ ಆಸ್ಪತ್ರೆಯಲ್ಲಿಯೂ ಬೆಡ್ ಸಿಗದೇ ಇದ್ದಾಗ ವಿಮಾನ ನಿಲ್ದಾಣದ ಬಳಿ ಇರುವ ಡಿಆರ್ಡಿಒ ಆಸ್ಪತ್ರೆಗೆ ಕರೆದೊಯ್ದಿದ್ದಾನೆ ಅವರ ಮಗ. ಅಲ್ಲಿ ಎಲ್ಲ ದಾಖಲೆಗಳನ್ನು ತೋರಿಸಿದರೂ ಬೆಡ್ ಸಿಗಲಿಲ್ಲ. ಖಾಸಗಿ ಆಸ್ಪತ್ರೆಗಳಿಗೆ ಅಲೆದರೂ ಪ್ರಯೋಜನವಾಗಲಿಲ್ಲ. ಆಮೇಲೆ ಕುಟುಂಬದ ಸದಸ್ಯರು ಆಕ್ಸಿಜನ್ ಸಿಲಿಂಡರ್ ಸಂಗ್ರಹಿಸಿ ರಾಶ್ಪಲ್ ಅವರನ್ನು ಚಂಡೀಗಢದಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ಸಿದ್ಧತೆ ನಡೆಸಿದ್ದಾರೆ. ಆದಾಗ್ಯೂ ಚಂಡೀಗಢ ತಲುಪುವ ಮುನ್ನ ಮಾರ್ಗ ಮಧ್ಯೆ ರಾಶ್ ಪಲ್ ಮೃತಪಟ್ಟಿದ್ದಾರೆ ಎಂದಿದ್ದಾರೆ.
ಹಿರಿಯರಿಗೆ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ ಮತ್ತು ಹಾಸಿಗೆ ಪಡೆಯಲು ಇಲ್ಲಿಂದ ಅಲ್ಲಿಗೆ ಓಡಬೇಕಾದ ಪರಿಸ್ಥಿತಿ ಬಂದಿರುವುದು ವಿಷಾದನೀಯ. ಈ ತುರ್ತು ಪರಿಸ್ಥಿತಿಯಲ್ಲಿ ಮಿಲಿಟರಿ ಆಸ್ಪತ್ರೆಗಳು ಅಗತ್ಯ ಸೌಲಭ್ಯಗಳನ್ನು ಪೂರೈಸಬೇಕು. ನಾಗರಿಕರಿಗಾಗಿ ಸೇವಾ ಆಸ್ಪತ್ರೆಗಳನ್ನು ತೆರೆಯಲಾಗುತ್ತಿದೆ. ಯಾರಿಗೂ ಚಿಕಿತ್ಸೆ ನೀಡುವುದಕ್ಕೆ ನಮಗೆ ಯಾವುದೇ ಆಕ್ಷೇಪವಿಲ್ಲ, ಆದರೆ ಕನಿಷ್ಠ ಹಿರಿಯರಿಗೆ ಚಿಕಿತ್ಸೆ ನಿರಾಕರಿಸಬಾರಗದು ಎಂದು ಲೆಫ್ಟಿನೆಂಟ್ ಕರ್ನಲ್ ಸೋಹಿ ಹೇಳಿದರು.
ಬ್ರಿಗೇಡಿಯರ್ ಪಾರ್ಮರ್ ಅವರನ್ನು ಮಾರ್ಚ್ 14, 1971 ರಂದು ಕಾರ್ಪ್ಸ್ ಆಫ್ ಇಎಂಇನಲ್ಲಿ ನಿಯೋಜಿಸಲಾಗಿತ್ತು. ಅವರಿಗೆ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ.
ಕೋವಿಡ್ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಪ್ರದೇಶಗಳಲ್ಲಿ ರಕ್ಷಣಾ ಸೇವೆಗಳು ಸಂಪನ್ಮೂಲಗಳನ್ನು ಹೆಚ್ಚಿಸಿವೆ ಎಂದು ದೆಹಲಿಯ ಸೇನಾ ಪ್ರಧಾನ ಕಚೇರಿಯಲ್ಲಿ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕೊವಿಡ್ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಸೇನಾಪಡೆಗಳು ಸಹಾಯ ನೀಡಬೇಕು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವೈಯಕ್ತಿಕವಾಗಿ ನಿರ್ದೇಶಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಮಾಜಿ ಸೈನಿಕರ ಆರೋಗ್ಯ ಯೋಜನೆಯ (ಇಸಿಎಚ್‌ಎಸ್) ಸದಸ್ಯರಾಗಿರುವವರಿಗೆ ಸಹ ಮಿಲಿಟರಿ ಆಸ್ಪತ್ರೆಗಳಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಅವಕಾಶ ನೀಡಲಾಗುತ್ತಿದೆ. ಈ ಸಮಯದಲ್ಲಿ ವೈದ್ಯಕೀಯ ಸಿಬ್ಬಂದಿಗಳು ತಮ್ಮ ಕರ್ತವ್ಯವನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಿದ್ದಾರೆ. ಅವರನ್ನು ಪ್ರೋತ್ಸಾಹಿಸಬೇಕಾಗಿದೆ ಎಂದು ಅಧಿಕಾರಿ ಹೇಳಿದರು.
ಸಾಮಾನ್ಯ ಗ್ರಹಿಕೆಗೆ ವ್ಯತಿರಿಕ್ತವಾಗಿ, ಪ್ರಸ್ತುತ ಯಾವುದೇ ನಾಗರಿಕರನ್ನು ಸೇನಾ ನೆಲೆಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿಲ್ಲ ಮತ್ತು ಎಲ್ಲಾ ಹಾಸಿಗೆಗಳನ್ನು ಸಿಬ್ಬಂದಿ, ತಜ್ಞರು ಮತ್ತು ಅವರ ಸಂಬಂಧಿಕರಿಗೆ ನೀಡಲಾಗಿದೆ ಅಧಿಕಾರಿ ಹೇಳಿದರು. ವೈದ್ಯಕೀಯ ಸಂಪನ್ಮೂಲಗಳನ್ನು ಹೆಚ್ಚಿಸಲಾಗುತ್ತಿದ್ದು, ಹಿರಿಯರನ್ನು ನೋಡಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸಿಪಿಎಂ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ ಹಿರಿಯ ಪುತ್ರ ಕೊವಿಡ್ ಸೋಂಕಿನಿಂದ ಸಾವು
(Unable to find bed in military hospital retired Brigadier died on the way from Delhi to Chandigarh due to Covid complication)