Delhi Chalo: ಪ್ರತಿಭಟನೆ ಕೊನೆಗೊಳಿಸುವಂತೆ ರೈತರಿಗೆ ಕೇಂದ್ರ ಕೃಷಿ ಸಚಿವ ತೋಮರ್ ಮನವಿ!
ದೆಹಲಿ ಸರ್ಕಾರವು ರೈತರ ಶಾಂತಿಯುತ ಪ್ರತಿಭಟನೆಗೆ ನಿರಂಕಾರಿ ಸಮಾಗಮ ಮೈದಾನದಲ್ಲಿ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ನೂರಾರು ಹೋರಾಟಗಾರರು ಪ್ರತಿಭಟನಾ ಸ್ಥಳಕ್ಕೆ ತಲುಪಿದ್ದು, ಸಾವಿರಾರು ಮಂದಿ ರೈತರು ದೆಹಲಿ ಗಡಿಭಾಗದಲ್ಲಿದ್ದಾರೆ.
ದೆಹಲಿ: ಕೇಂದ್ರ ಸರ್ಕಾರ ಅನುಮೋದಿಸಿರುವ ಕೃಷಿ ಕಾಯ್ದೆಯ ವಿರುದ್ಧ ಹೋರಾಟ ನಡೆಸುತ್ತಿರುವ ರೈತರಿಗೆ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ಕೇಂದ್ರದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಕೇಳಿಕೊಂಡಿದ್ದಾರೆ. ಸರ್ಕಾರವು ರೈತರ ಅಹವಾಲುಗಳನ್ನು ಕೇಳಲು, ವಿಚಾರಗಳನ್ನು ಚರ್ಚಿಸಲು ತಯಾರಿದೆ ಎಂದಿದ್ದಾರೆ.
ಹೊಸ ಕೃಷಿ ಮಸೂದೆಯು ರೈತರಿಗೆ ಅಭಿವೃದ್ಧಿದಾಯಕವಾಗಿದೆ. ಸರ್ಕಾರವು ಹಲವು ರೈತ ಸಂಘಗಳೊಂದಿಗೆ ಈಗಾಗಲೇ ಈ ಬಗ್ಗೆ ಮಾತುಕತೆ ನಡೆಸಿದೆ ಎಂದು ಡಿಸೆಂಬರ್ 3ರಂದು ಮತ್ತೊಂದು ಸುತ್ತಿನ ಮಾತುಕತೆಗೆ ಆಹ್ವಾನಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೇಂದ್ರದ ಕೃಷಿ ಮಸೂದೆಯ ವಿರುದ್ಧ ರೈತಾಪಿ ವರ್ಗದ ಜನರು ಕಳೆದ ಕೆಲವು ದಿನಗಳಿಂದ ಹೋರಾಟ ನಡೆಸುತ್ತಿದ್ದು, ಪ್ರತಿಭಟನೆಯು ಹಿಂಸಾಚಾರದ ಸ್ವರೂಪ ಪಡೆದಿತ್ತು. ನಿನ್ನೆ ದೆಹಲಿ ಸರ್ಕಾರವು ರೈತರ ಶಾಂತಿಯುತ ಪ್ರತಿಭಟನೆಗೆ ದೆಹಲಿಯ ನಿರಂಕಾರಿ ಸಮಾಗಮ ಮೈದಾನದಲ್ಲಿ ಅವಕಾಶ ನೀಡಿ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ನೂರಾರು ಹೋರಾಟಗಾರರು ಪ್ರತಿಭಟನಾ ಸ್ಥಳಕ್ಕೆ ತಲುಪಿದ್ದು, ಸಾವಿರಾರು ಮಂದಿ ರೈತರು ಇನ್ನೂ ದೆಹಲಿ ಗಡಿಭಾಗದಲ್ಲಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ರೈತ ಮುಖಂಡ ದರ್ಶನ್ ಪಾಲ್, ಶುಕ್ರವಾರ ತಡರಾತ್ರಿಯವರೆಗೆ ತಾವು ದೆಹಲಿ ಗಡಿಭಾಗದಲ್ಲೇ ತಂಗುವುದಾಗಿ ತಿಳಿಸಿದ್ದು, ನಿರಂಕಾರಿ ಮೈದಾನಕ್ಕೆ ತೆರಳುವ ಬಗ್ಗೆ ಶನಿವಾರ ತೀರ್ಮಾನಿಸಲಾಗುವುದು ಎಂದು ಹೇಳಿದ್ದಾರೆ.
ದೆಹಲಿ ಚಲೋ ಈಗ ಕೇವಲ ರೈತರ ಪ್ರತಿಭಟನೆಯಾಗಿ ಉಳಿದಿಲ್ಲ, ಜನರ ಚಳುವಳಿಯಾಗಿ ಬದಲಾಗಿದೆ. ಸಮಾಜದ ವಿವಿಧ ಸ್ತರದ ಜನರು ಈ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಪ್ರತಿಭಟನಾ ನಿರತ, ಪಂಜಾಬ್ ಮತ್ತು ಹರ್ಯಾಣದ ರೈತ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
ಉತ್ತರ ಪ್ರದೇಶದಲ್ಲೂ ಪ್ರತಿಭಟನೆಯ ಕಾವು! ರೈತರ ಪ್ರತಿಭಟನೆಯು ಉತ್ತರ ಪ್ರದೇಶದಲ್ಲೂ ನಡೆಯುತ್ತಿದ್ದು, ಲಕ್ನೋ, ಮುಜಾಫರ್ನಗರ್, ಮೀರತ್, ಗೌತಮ್ ಬುದ್ಧ್ ನಗರ್ ಮುಂತಾದ ಕಡೆಗಳಲ್ಲಿ ರೈತರು ಹೋರಾಟಕ್ಕಿಳಿದಿದ್ದಾರೆ. ಬಾವುಟಗಳನ್ನು ಪ್ರದರ್ಶಿಸಿ, ಘೋಷಣೆಗಳನ್ನು ಕೂಗುತ್ತಾ ರಸ್ತೆ ತಡೆ ನಡೆಸಿದ್ದಾರೆ.
ದೆಹಲಿ ಪ್ರವೇಶಕ್ಕೆ ಅನುಮತಿ ಸಿಗದ ಬಗ್ಗೆ ಸಿಟ್ಟಾದ ರೈತರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದರು. ದೆಹಲಿ-ಹರ್ಯಾಣ ಸಿಂಘು ಗಡಿಪ್ರದೇಶದಲ್ಲಿ ರೈತರು, ಕಲ್ಲುತೂರಾಟ ಮಾಡಿದ್ದು, ಬ್ಯಾರಿಕೇಡ್ಗಳನ್ನು ಧ್ವಂಸಗೊಳಿಸಿದ್ದರು. ಈ ಪ್ರಕರಣವನ್ನು ಹತ್ತಿಕ್ಕಲು ಪೊಲೀಸರು ಅಶ್ರುವಾಯು, ಜಲಫಿರಂಗಿಗಳನ್ನು ಪ್ರಯೋಗಿಸಿದ್ದರು.
ಇದೀಗ ದೆಹಲಿ ಸರ್ಕಾರ ರೈತರ ಪ್ರತಿಭಟನೆಗೆ ಅವಕಾಶ ನೀಡಿದೆ. ದೆಹಲಿ ಗೃಹ ಸಚಿವ ಸತ್ಯೇಂದರ್ ಜೈನ್ ಈ ಬಗ್ಗೆ ಮಾತನಾಡಿದ್ದು, ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಹಕ್ಕಿದೆ ಎಂದು ಹೇಳಿದ್ದಾರೆ. ರೈತರನ್ನು ಜೈಲಿಗಟ್ಟುವುದು ಇದಕ್ಕೆ ಪರಿಹಾರವಲ್ಲ, ಅವರ ಕೋರಿಕೆಗಳನ್ನು ಕೇಂದ್ರ ಸರ್ಕಾರ ಪರಿಗಣಿಸಬೇಕು ಎಂದಿದ್ದಾರೆ.
ದೆಹಲಿ ಮೆಟ್ರೋ ಸಂಚಾರ ವ್ಯತ್ಯಯ! ದೆಹಲಿ ಚಲೋ ಪ್ರತಿಭಟನೆಯ ಕಾರಣದಿಂದ ಮೆಟ್ರೋ ಸೇವೆಯಲ್ಲಿ ಶುಕ್ರವಾರ ಸಂಜೆ ವ್ಯತ್ಯಯವಾಗಿತ್ತು. ಬಳಿಕ ಸಂಜೆ 5.35 ಗಂಟೆಯ ನಂತರ ಮೆಟ್ರೊ ರೈಲು ಸೇವೆಗಳು ಎಂದಿನಂತೆ ಇರಲಿದೆ ಎಂದು ದೆಹಲಿ ಮೆಟ್ರೋ ರೈಲು ಕಾರ್ಪರೇಷನ್ (DMRC) ಟ್ವೀಟ್ ಮಾಡಿದೆ. ಶನಿವಾರವೂ ರೈಲು ಸೇವೆ ದಿನನಿತ್ಯದಂತೆ ಇರಲಿದೆ ಎಂದು ತಿಳಿಸಿದೆ. (ಪಿಟಿಐ)
Published On - 12:28 pm, Sat, 28 November 20