‘ಸಂಸತ್ತಿನಲ್ಲಿ ಮಸೂದೆ ಅಂಗೀಕಾರಕ್ಕೆ ಕಾಂಗ್ರೆಸ್ ಅಡ್ಡಿಪಡಿಸಬಾರದು’; ಮಲ್ಲಿಕಾರ್ಜುನ ಖರ್ಗೆಗೆ ಕೇಂದ್ರ ಸಚಿವ ಕಿರಣ್ ರಿಜಿಜು ಪತ್ರ

ಕ್ಷೇತ್ರ ಪುನರ್​ ವಿಂಗಡಣೆ ಹಾಗೂ ಪ್ರಸ್ತಾವಿತ ವಿಧೇಯಕಕ್ಕೆ ಸಂಬಂಧಿಸಿದಂತೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿದ್ದ ಪತ್ರಕ್ಕೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರೆನ್ ರಿಜಿಜು ಇಂದು ಪ್ರತ್ಯುತ್ತರ ನೀಡಿದ್ದಾರೆ. ವಿಧೇಯಕದ ಪ್ರಸ್ತಾಪಗಳ ಕುರಿತು ಚರ್ಚಿಸಲು ಸರ್ಕಾರವು ನಿರಂತರವಾಗಿ ವಿಪಕ್ಷಗಳ ಬೆಂಬಲ ಮತ್ತು ಸಲಹೆಗಳನ್ನು ಕೋರಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಕ್ಟೋಬರ್ 16ರಂದು ಪ್ರಧಾನಿ ಮೋದಿಯವರಿಗೆ 4ನೇ ಬಾರಿಗೆ ಪತ್ರ ಬರೆದಿದ್ದ ಖರ್ಗೆ, ಕ್ಷೇತ್ರ ಪುನರ್​ ವಿಂಗಡಣೆ ಪ್ರಸ್ತಾಪಗಳನ್ನು ಅಂತಿಮಗೊಳಿಸಿ ಸಂಸತ್ತಿನಲ್ಲಿ ಮಂಡಿಸುವ ಮೊದಲು ತಕ್ಷಣವೇ ಸರ್ವಪಕ್ಷ ಸಭೆಯನ್ನು ಕರೆಯುವಂತೆ ಒತ್ತಾಯಿಸಿದ್ದರು.

‘ಸಂಸತ್ತಿನಲ್ಲಿ ಮಸೂದೆ ಅಂಗೀಕಾರಕ್ಕೆ ಕಾಂಗ್ರೆಸ್ ಅಡ್ಡಿಪಡಿಸಬಾರದು’; ಮಲ್ಲಿಕಾರ್ಜುನ ಖರ್ಗೆಗೆ ಕೇಂದ್ರ ಸಚಿವ ಕಿರಣ್ ರಿಜಿಜು ಪತ್ರ
ಕಿರಣ್ ರಿಜಿಜು- ಮಲ್ಲಿಕಾರ್ಜುನ ಖರ್ಗೆ
Image Credit source: PTI

Updated on: Oct 19, 2026 | 7:49 PM

ನವದೆಹಲಿ, ಅಕ್ಟೋಬರ್ 19: ಸಂಸತ್ತಿನಲ್ಲಿ ಮಹತ್ವದ ಮಸೂದೆಗಳನ್ನು ಅಂಗೀಕರಿಸುವ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಪಕ್ಷವು ಅಡ್ಡಿ ಉಂಟುಮಾಡಬಾರದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮನವಿ ಮಾಡಿದ್ದಾರೆ. ಕ್ಷೇತ್ರ ಪುನರ್​ವಿಂಗಡಣೆ ಮಸೂದೆಗೆ ಸಂಬಂಧಿಸಿದಂತೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿದ್ದ ಪತ್ರಕ್ಕೆ ರಿಜಿಜು ಈ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.

ವಿಪಕ್ಷಗಳ ಬೆಂಬಲ ಕೋರಿದ್ದ ಸರ್ಕಾರ:

Loading...

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿರುವ ಸಚಿವ ಕಿರಣ್ ರಿಜಿಜು, “ಕ್ಷೇತ್ರ ಪುನರ್ವಿಂಗಡಣೆ ಮಸೂದೆಯ ಕುರಿತು ಚರ್ಚಿಸಲು ಮತ್ತು ಸಲಹೆಗಳನ್ನು ಪಡೆಯಲು ಸರ್ಕಾರವು ನಿರಂತರವಾಗಿ ವಿರೋಧ ಪಕ್ಷಗಳ ಸಹಕಾರವನ್ನು ಕೋರಿದೆ. ನಾನು ವೈಯಕ್ತಿಕವಾಗಿ ನಿಮ್ಮನ್ನು ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದೆ. ಆದರೆ, ಕಾಂಗ್ರೆಸ್ ಪಕ್ಷವು ಚರ್ಚೆಗೆ ಸೂಕ್ತ ಸಮಯ ನೀಡದ ಕಾರಣ ಇತರ ಪ್ರಮುಖ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಬೇಕಾಯಿತು” ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ‘ಕ್ಷೇತ್ರ ಪುನರ್ ​ವಿಂಗಡಣೆ ಕುರಿತು ಸರ್ವಪಕ್ಷ ಸಭೆ ನಡೆಸಿ’; ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಪತ್ರ

ವಿಧೇಯಕಗಳಿಗೆ ಅಡ್ಡಿಪಡಿಸದಂತೆ ಮನವಿ:

ಮುಂದಿನ ದಿನಗಳಲ್ಲಿ ಬರಲಿರುವ ಪ್ರಮುಖ ಸಾಂವಿಧಾನಿಕ ತಿದ್ದುಪಡಿಗಳು ಹಾಗೂ ಮಸೂದೆಗಳ ವಿಷಯದಲ್ಲಿ ಕಾಂಗ್ರೆಸ್ ಪಕ್ಷವು ಸಂಸತ್ತಿನ ಕಲಾಪಗಳಿಗೆ ಮತ್ತು ಮಸೂದೆ ಅಂಗೀಕಾರಕ್ಕೆ ಅಡ್ಡಿಪಡಿಸಬಾರದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಕಾರಾತ್ಮಕವಾಗಿ ಚರ್ಚಿಸಿ ಸಹಕರಿಸಬೇಕು ಎಂದು ಕಿರಣ್ ರಿಜಿಜು ಮನವಿ ಮಾಡಿದ್ದಾರೆ.


ಮುಂಗಾರು ಅಧಿವೇಶನ ಮುಕ್ತಾಯಗೊಂಡು 64 ದಿನಗಳಾದರೂ ಸಂಸತ್ ಅಧಿವೇಶನವನ್ನು ಅಧಿಕೃತವಾಗಿ ಮರುಆರಂಭಿಸಿಲ್ಲ ಎಂಬ ಖರ್ಗೆ ಅವರ ಆರೋಪಕ್ಕೆ ಉತ್ತರಿಸಿದ ಅವರು, “ಅನಿರ್ದಿಷ್ಟಾವಧಿ ಮುಂದೂಡಿಕೆಯ ನಂತರ ನಿರ್ದಿಷ್ಟ ಸಮಯದಲ್ಲಿಯೇ ಅಧಿವೇಶನವನ್ನು ಮುಕ್ತಾಯಗೊಳಿಸಬೇಕು ಎಂಬ ಸಾಂವಿಧಾನಿಕ ಬಾಧ್ಯತೆಯೇನೂ ಇಲ್ಲ. ಹಿಂದೆ ಕಾಂಗ್ರೆಸ್ ಅವಧಿಯಲ್ಲೂ 80ಕ್ಕೂ ಹೆಚ್ಚು ದಿನಗಳ ಕಾಲ ಅಧಿವೇಶನ ಮುಕ್ತಾಯಗೊಳ್ಳದೆ ಉಳಿದ ಉದಾಹರಣೆಗಳಿವೆ” ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಸಂಪುಟದಲ್ಲಿ ಮಹಿಳಾ ಸಚಿವರಿಲ್ಲ ಎಂದ ಕಿರಣ್ ರಿಜಿಜುಗೆ ಸಿಎಂ ಡಿಕೆ ಶಿವಕುಮಾರ್ ತಿರುಗೇಟು

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಉತ್ತರಿಸಿರುವ ಕಿರಣ್ ರಿಜಿಜು, ಕಾಂಗ್ರೆಸ್‌ನ ಬೆಂಬಲ ಹಾಗೂ ಸಹಕಾರವನ್ನು ಕೋರಿ ತಾವೇ ಖುದ್ದಾಗಿ ಮಾರ್ಚ್ 16, ಮಾರ್ಚ್ 26 ಮತ್ತು ಏಪ್ರಿಲ್ 12ರಂದು ಖರ್ಗೆ ಅವರಿಗೆ ಪತ್ರ ಬರೆದಿರುವುದಾಗಿ ನೆನಪಿಸಿದ್ದಾರೆ. ಜೊತೆಗೆ ಮಾನ್ಸೂನ್ ಅಧಿವೇಶನದ ವೇಳೆ ಖರ್ಗೆ ಅವರೊಂದಿಗೆ ವೈಯಕ್ತಿಕವಾಗಿ ಚರ್ಚಿಸಿದ್ದು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನೂ ಭೇಟಿಯಾಗಿದ್ದಾಗಿ ತಿಳಿಸಿದ್ದಾರೆ. ಆದರೆ, ಹಲವು ಬಾರಿ ಮನವಿ ಮಾಡಿದರೂ ಕಾಂಗ್ರೆಸ್ ಚರ್ಚೆಗೆ ದಿನಾಂಕಗಳನ್ನು ನೀಡಲಿಲ್ಲ. ಹೀಗಾಗಿ ಸರ್ಕಾರವು ಇತರ ರಾಜಕೀಯ ಪಕ್ಷಗಳನ್ನು ಸಂಪರ್ಕಿಸಬೇಕಾಯಿತು ಎಂದು ಅವರು ಆರೋಪಿಸಿದ್ದಾರೆ.

ಕ್ಷೇತ್ರ ಪುನರ್​ ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಬಿಕ್ಕಟ್ಟು:

ಪ್ರಸ್ತಾವಿತ ಕ್ಷೇತ್ರ ಪುನರ್​ ವಿಂಗಡಣೆ ವಿಧೇಯಕವು ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು 850ರವರೆಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಹೊಸ ಜನಗಣತಿ ದತ್ತಾಂಶವನ್ನು ಆಧರಿಸಿ ಕ್ಷೇತ್ರಗಳನ್ನು ಪುನರ್ವಿಂಗಡಿಸುವುದು ಹಾಗೂ ಲೋಕಸಭೆಯಲ್ಲಿ ಶೇ. 33ರಷ್ಟು ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು ಇದು ಸಾಂವಿಧಾನಿಕವಾಗಿ ಅಗತ್ಯ ಎಂದು ಎನ್‌ಡಿಎ ಸರ್ಕಾರ ಪ್ರತಿಪಾದಿಸುತ್ತಿದೆ. ಆದರೆ, ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಒಕ್ಕೂಟವು ಪ್ರಸ್ತುತ ಇರುವ 543 ಸದಸ್ಯ ಬಲದ ಲೋಕಸಭೆಯಲ್ಲೇ ತಕ್ಷಣವೇ ಶೇ. 33 ಮಹಿಳಾ ಮೀಸಲಾತಿಯನ್ನು ಜಾರಿಗೆ ತರಬೇಕು ಮತ್ತು ಅದನ್ನು ಕ್ಷೇತ್ರ ಪುನರ್ ವಿಂಗಡಣೆ ಜೊತೆ ಸೇರಿಸಬಾರದು ಎಂದು ಪಟ್ಟು ಹಿಡಿದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us