ನಾನು ಉದ್ಧವ್ ಠಾಕ್ರೆಯ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ಹೇಳಿ ವಿವಾದಕ್ಕೀಡಾದ ಕೇಂದ್ರ ಸಚಿವ ನಾರಾಯಣ್ ರಾಣೆ

| Updated By: ರಶ್ಮಿ ಕಲ್ಲಕಟ್ಟ

Updated on: Aug 24, 2021 | 11:45 AM

Narayan Rane: ಮುಖ್ಯಮಂತ್ರಿಗೆ ಸ್ವಾತಂತ್ರ್ಯದ ವರ್ಷ ಗೊತ್ತಿಲ್ಲದಿರುವುದು ನಾಚಿಕೆಗೇಡು. ಅವರು ಎಷ್ಟನೇ ವರ್ಷದ ಸ್ವಾತಂತ್ರ್ಯ ಎಂದು ಕೇಳಲು ಹಿಂದೆ ಬಾಗಿದರು. ನಾನು ಅಲ್ಲಿರುತ್ತಿದ್ದರೆ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ರಾಯಗಡದಲ್ಲಿ ಸೋಮವಾರ ಜನ್ ಆಶೀರ್ವಾದ್ ಯಾತ್ರೆಯಲ್ಲಿ ಮಾತನಾಡಿದ ರಾಣೆ ಹೇಳಿದ್ದಾರೆ.

ನಾನು ಉದ್ಧವ್ ಠಾಕ್ರೆಯ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ಹೇಳಿ ವಿವಾದಕ್ಕೀಡಾದ ಕೇಂದ್ರ ಸಚಿವ ನಾರಾಯಣ್ ರಾಣೆ
ನಾರಾಯಣ್ ರಾಣೆ
Follow us on

ಮುಂಬೈ: ಮಹಾರಾಷ್ಟ್ರದ  ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾರತದ ಸ್ವಾತಂತ್ರ್ಯದ ವರ್ಷವನ್ನು ತಪ್ಪಾಗಿ ಹೇಳಿದಾಗ ಅವರ ಕಪಾಳಕ್ಕೆ ಬಾರಿಸಬೇಕು ಎಂದು ಅನಿಸಿತ್ತು ಎಂದು ಕೇಂದ್ರ ಸಚಿವ ನಾರಾಯಣ್ ರಾಣೆ  (Narayan Rane) ಹೇಳಿದ್ದಾರೆ. ಮಹಾರಾಷ್ಟ್ರದ ಮುಖ್ಯಮಂತ್ರಿ ವಿರುದ್ಧದ ರಾಣೆ ಈ ರೀತಿ ಹೇಳಿದ್ದಕ್ಕೆ ಅವರು ಬಂಧನಕ್ಕೊಳಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ನಾಸಿಕ್ ಪೋಲಿಸರ ತಂಡವು ಕೊಂಕಣ ಪ್ರದೇಶದ ಚಿಪ್ಲುನ್‌ಗೆ ಹೊರಟಿದ್ದು ರಾಣೆ ಅಲ್ಲಿದ್ದಾರೆ. ರಾಣೆ ವಿರುದ್ಧ ದೂರಿನ ನಂತರದ ಬೆಳವಣಿಗೆಗಳ ಕುರಿತು ಪೊಲೀಸರಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

“ಮುಖ್ಯಮಂತ್ರಿಗೆ ಸ್ವಾತಂತ್ರ್ಯದ ವರ್ಷ ಗೊತ್ತಿಲ್ಲದಿರುವುದು ನಾಚಿಕೆಗೇಡು. ಅವರು ಎಷ್ಟನೇ ವರ್ಷದ ಸ್ವಾತಂತ್ರ್ಯ ಎಂದು ಕೇಳಲು ಹಿಂದೆ ಬಾಗಿದರು. ನಾನು ಅಲ್ಲಿರುತ್ತಿದ್ದರೆ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ರಾಯಗಡದಲ್ಲಿ ಸೋಮವಾರ ಜನ್ ಆಶೀರ್ವಾದ್ ಯಾತ್ರೆಯಲ್ಲಿ ಮಾತನಾಡಿದ ರಾಣೆ ಹೇಳಿದ್ದಾರೆ.

ರಾಣೆ ಅವರ ಹೇಳಿಕೆಗೆ ಶಿವಸೇನಾ ತೀವ್ರವಾಗಿ ಪ್ರತಿಕ್ರಿಯಿಸಿದೆ. ಶಿವಸೇನಾ ಕಾರ್ಯಕರ್ತರು ಮುಂಬೈ ಮತ್ತು ಇತರ ಸ್ಥಳಗಳಲ್ಲಿ ಹಲವಾರು ಪೋಸ್ಟರ್‌ಗಳನ್ನು ಹಾಕಿದ್ದು ರಾಣೆಯನ್ನು ‘ಕೊಂಬಿಡಿ ಚೋರ್’ (ಕೋಳಿ ಕಳ್ಳ) ಎಂದು ಕರೆದಿದ್ದಾರೆ. ಐದು ದಶಕಗಳ ಹಿಂದೆ ಚೆಂಬೂರಿನಲ್ಲಿ ಅವರು ನಡೆಸುತ್ತಿದ್ದ ಕೋಳಿ ಅಂಗಡಿಯ ಉಲ್ಲೇಖಿಸಿ ಶಿವಸೇನಾ ಈ ರೀತಿ ಹೇಳಿದೆ.

ಶಿವಸೇನಾದ ರತ್ನಗಿರಿ-ಸಿಂಧುದುರ್ಗದ ಸಂಸದ ವಿನಾಯಕ್ ರಾವುತ್ ಅವರು ರಾಣೆ ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದರು. “ಬಿಜೆಪಿ ನಾಯಕತ್ವವನ್ನು ಮೆಚ್ಚಿಸಲು ರಾಣೆ ಶಿವಸೇನಾ ಮತ್ತು ಅದರ ನಾಯಕರ ಮೇಲೆ ದಾಳಿ ಮಾಡುತ್ತಿದ್ದಾರೆ. ಮೋದಿ ನೇತೃತ್ವದ ಸಚಿವಾಲಯಕ್ಕೆ ಸೇರ್ಪಡೆಗೊಂಡ ನಂತರ ಅವರು ಮಾನಸಿಕ ಸಮತೋಲನವನ್ನು ಕಳೆದುಕೊಂಡರು. ಮೋದಿ ಅವರಿಗೆ ಬಾಗಿಲು ತೋರಿಸಬೇಕು” ಎಂದು ರಾವುತ್ ಹೇಳಿದ್ದಾರೆ.

1960 ರ ದಶಕದ ಕೊನೆಯಲ್ಲಿ ಬಾಳ್ ಠಾಕ್ರೆ ನೇತೃತ್ವದ ಮಣ್ಣಿನ ಮಗನ ಪಕ್ಷದ ಜೊತೆ ರಾಣೆ ಮುಂಬೈನಲ್ಲಿ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದರು. ಅವರು 1990 ರಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಸೇನಾ ಶಾಸಕರಾಗಿ ಪ್ರವೇಶಿಸಿದರು.

ಫೆಬ್ರವರಿ 1999 ರಲ್ಲಿ ಅವರು ಮಹಾರಾಷ್ಟ್ರದ 13 ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆ ವರ್ಷದ ನಂತರ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಆಗಿನ ಶಿವಸೇನಾ-ಬಿಜೆಪಿ ಮೈತ್ರಿ ಸೋತಿತ್ತು.
2005 ರಲ್ಲಿ ರಾಣೆ ಠಾಕ್ರೆಯವರೊಂದಿಗೆ ಹೊಂದಾಣಿಕೆ ಮಾಡಲಾಗದ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಶಿವಸೇನಾದಿಂದ ಬೇರೆಯಾದರು.

ಶಿವಸೇನಾ ತೊರೆದ ನಂತರ, ಅವರು ಕಾಂಗ್ರೆಸ್ ಸೇರಿದರು ಮತ್ತು ರಾಜ್ಯ ಕಂದಾಯ ಸಚಿವರಾದರು. ಅವರು 2017 ರಲ್ಲಿ ಕಾಂಗ್ರೆಸ್ ಅನ್ನು ತೊರೆದಿದ್ದರು. ಆರು ತಿಂಗಳಲ್ಲಿ ಉನ್ನತ ಸ್ಥಾನ ನೀಡುವ ಭರವಸೆ ನೀಡಿದ್ದರಿಂದ ತಾನು ಕಾಂಗ್ರೆಸ್ ಗೆ ಸೇರಿದ್ದೆ ಎಂದು ಅವರು ಹೇಳಿದ್ದರು.

ಅವರು ಮಹಾರಾಷ್ಟ್ರ ಸ್ವಾಭಿಮಾನ್ ಪಕ್ಷವನ್ನು ತಮ್ಮ ಇಬ್ಬರು ಪುತ್ರರಾದ ನಿಲೇಶ್ ಮತ್ತು ನಿತೇಶ್ ಅವರ ಪ್ರಮುಖ ಸ್ಥಾನ ನೀಡಿ ಸ್ಥಾಪಿಸಿದರು. ಆದರೆ ನಂತರ ಅದನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದರು.
ಹಲವು ವರ್ಷಗಳಿಂದ ರಾಣೆ ಅವರ ಪ್ರತಿಸ್ಪರ್ಧಿಗಳು ಆತನನ್ನು ಹಲವಾರು ಹಿಂಸಾಚಾರದ ಘಟನೆಗಳಿಗೆ ಲಿಂಕ್ ಮಾಡಿದ್ದಾರೆ. ಕೊಂಕಣದ ಸಿಂಧುದುರ್ಗ ಜಿಲ್ಲೆಯಲ್ಲಿ ಸೇನಾ ಕಾರ್ಯಕರ್ತನ ಕೊಲೆ ಮತ್ತು ಇತರ ಕೆಲವು ಅಪರಾಧಗಳಲ್ಲಿ ರಾಣೆ ಭಾಗಿಯಾಗಿದ್ದಾರೆ ಎಂಬ ಆರೋಪವಿದೆ .

ಇದನ್ನೂ ಓದಿ: Coronavirus cases in India: ದೇಶದಲ್ಲಿ 25,467 ಹೊಸ ಕೊವಿಡ್ ಪ್ರಕರಣ ಪತ್ತೆ, 354 ಸಾವು

ಇದನ್ನೂ ಓದಿ:  ತಲೆಗೂದಲಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದರಿಂದ ಡ್ರಗ್​ ಸೇವನೆ ಪತ್ತೆ ಸುಲಭವಾಯ್ತು: ಸಂದೀಪ್ ಪಾಟೀಲ್

(Union minister Narayan Rane sparked off a row over his remarks about slapping Maharashtra CM Uddhav Thackeray)