ಗೋರಖ್‌ಪುರಕ್ಕೆ ಬುಲ್ಡೋಜರ್ ಕಳಿಸ್ತೀವಿ ಎಂದ ಅಖಿಲೇಶ್ ಬೆದರಿಕೆಗೆ ಯೋಗಿ ಆದಿತ್ಯನಾಥ್ ತಿರುಗೇಟು
"ಎಲ್ಲರ ಕೈಗಳು ಬುಲ್ಡೋಜರ್‌ಗೆ ಹೊಂದಿಕೊಳ್ಳುವುದಿಲ್ಲ. ಅದಕ್ಕೆ 'ದಿಲ್ ಮತ್ತು ದಿಮಾಗ್' (ಹೃದಯ ಮತ್ತು ಮನಸ್ಸು) ಎರಡೂ ಬೇಕಾಗುತ್ತದೆ. ಬುಲ್ಡೋಜರ್‌ನಂತಹ ಸಾಮರ್ಥ್ಯ ಮತ್ತು ದೃಢಸಂಕಲ್ಪ ಹೊಂದಿರುವವರಿಗೆ ಮಾತ್ರ ಅದನ್ನು ನಿರ್ವಹಿಸಬಹುದು. ಗಲಭೆಕೋರರ ಮುಂದೆ ಕುಣಿದು ಕುಪ್ಪಳಿಸುವವರು ಬುಲ್ಡೋಜರ್ ಮುಂದೆ ನಿಲ್ಲಲಾರರು" ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಲಕ್ನೋ ಸೆಪ್ಟೆಂಬರ್ 04: ರಾಜ್ಯದಲ್ಲಿ ಅಪರಾಧಗಳ ಆರೋಪ ಹೊತ್ತಿರುವ ವ್ಯಕ್ತಿಗಳ ವಿರುದ್ಧ ಬುಲ್ಡೋಜರ್‌ಗಳ ವಿವಾದಾತ್ಮಕ ಬಳಕೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಮತ್ತು ಸಮಾಜವಾದಿ ಪಕ್ಷದ (SP) ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ನಡುವೆ ತೀವ್ರ ಮಾತಿನ ಸಮರ ನಡೆದಿದೆ. ಮಂಗಳವಾರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಖಿಲೇಶ್ ಯಾದವ್, 2027 ರಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ, ರಾಜ್ಯದ ಎಲ್ಲಾ ಬುಲ್ಡೋಜರ್‌ಗಳನ್ನು ಯೋಗಿ ಆದಿತ್ಯನಾಥ್ ಅವರ ತವರು ಕ್ಷೇತ್ರವಾದ ಗೋರಖ್‌ಪುರ ಕಡೆಗೆ ನಿರ್ದೇಶಿಸಲಾಗುವುದು ಎಂದು ಹೇಳಿದ್ದು ವಾಕ್ಸಮರಕ್ಕೆ ಕಾರಣ.
2027ರಲ್ಲಿ ಸಮಾಜವಾದಿ ಸರ್ಕಾರ ರಚನೆಯಾದ ತಕ್ಷಣ ಇಡೀ ರಾಜ್ಯದ ಬುಲ್ಡೋಜರ್‌ಗಳು ಗೋರಖ್‌ಪುರದತ್ತ ಮುಖ ಮಾಡಲಿವೆ ಎಂದು ಯಾದವ್ ಹೇಳಿದ್ದಾರೆ.
ಬುಧವಾರದ ಪ್ರತಿದಾಳಿಯಲ್ಲಿ, ಯೋಗಿ ಆದಿತ್ಯನಾಥ್ ಅವರು ಅಖಿಲೇಶ್ ಯಾದವ್ ಅವರ ಬೆದರಿಕೆಯನ್ನು ತಳ್ಳಿ ಹಾಕಿದ್ದು, ಬುಲ್ಡೋಜರ್ ಅನ್ನು ಓಡಿಸಲು ಧೈರ್ಯ, ಬುದ್ಧಿಶಕ್ತಿ ಮತ್ತು ದೃಢಸಂಕಲ್ಪ ಬೇಕು, ಅದು ಅಖಿಲೇಶ್ಗೆ ಇಲ್ಲ ಎಂದಿದ್ದಾರೆ.
पहले तो ‘चाचा-भतीजे’ एरिया बांटकर वसूली करते थे।
बाद में चाचा को धक्का देकर बाहर कर दिया जाता था… pic.twitter.com/py1ioTNaLe
— Yogi Adityanath (@myogiadityanath) September 4, 2024
“ಎಲ್ಲರ ಕೈಗಳು ಬುಲ್ಡೋಜರ್‌ಗೆ ಹೊಂದಿಕೊಳ್ಳುವುದಿಲ್ಲ. ಅದಕ್ಕೆ ‘ದಿಲ್ ಮತ್ತು ದಿಮಾಗ್’ (ಹೃದಯ ಮತ್ತು ಮನಸ್ಸು) ಎರಡೂ ಬೇಕಾಗುತ್ತದೆ. ಬುಲ್ಡೋಜರ್‌ನಂತಹ ಸಾಮರ್ಥ್ಯ ಮತ್ತು ದೃಢಸಂಕಲ್ಪ ಹೊಂದಿರುವವರಿಗೆ ಮಾತ್ರ ಅದನ್ನು ನಿರ್ವಹಿಸಬಹುದು. ಗಲಭೆಕೋರರ ಮುಂದೆ ಕುಣಿದು ಕುಪ್ಪಳಿಸುವವರು ಬುಲ್ಡೋಜರ್ ಮುಂದೆ ನಿಲ್ಲಲಾರರು” ಎಂದು ಹೊಸದಾಗಿ ಆಯ್ಕೆಯಾದ ಸರ್ಕಾರಿ ನೌಕರರಿಗೆ ನೇಮಕಾತಿ ಪತ್ರಗಳನ್ನು ವಿತರಿಸುವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆದಿತ್ಯನಾಥ್ ಹೇಳಿದ್ದಾರೆ.
ಅಖಿಲೇಶ್ ಅವರ ‘ಟಿಪ್ಪು’ ಎಂಬ ಅಡ್ಡಹೆಸರನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದ ಆದಿತ್ಯನಾಥ್, ಟಿಪ್ಪು ಈಗ ‘ಸುಲ್ತಾನ್’ ಆಗಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
2017ರಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ಮುನ್ನ ಉತ್ತರ ಪ್ರದೇಶ ಕಾನೂನು ಬಾಹಿರವಾಗಿ ನಲುಗಿ ಹೋಗಿತ್ತು ಎಂದು ಆರೋಪಿಸಿ ಎಸ್‌ಪಿಯ ಹಿಂದಿನ ಆಡಳಿತದ ದಾಖಲೆಯನ್ನು ಆದಿತ್ಯನಾಥ್ ಟೀಕಿಸಿದರು. ಅಖಿಲೇಶ್ ಯಾದವ್ ಮತ್ತು ಅವರ ಮಾವ ಶಿವಪಾಲ್ ಯಾದವ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಸುಲಿಗೆಯಲ್ಲಿ ತೊಡಗಿದ್ದರು. ‘ಚಾಚಾ-ಭತೀಜಾ’ (ಮಾವ-ಸೋದರಳಿಯ) ನಡುವೆ ಹಣ ವಸೂಲಿ ಮಾಡುವಲ್ಲಿ ಪೈಪೋಟಿ ಏರ್ಪಟ್ಟಿತ್ತು ಎಂದು ಆರೋಪಿಸಿದರು.
ಇದನ್ನೂ ಓದಿ: Haryana election: ಕಾಂಗ್ರೆಸ್ ಅಭ್ಯರ್ಥಿಗಳಾಗಿ ವಿನೇಶ್ ಫೋಗಟ್ ಜುಲಾನಾ, ಬಜರಂಗ್ ಪುನಿಯಾ ಬದ್ಲಿಯಿಂದ ಸ್ಪರ್ಧೆ ಸಾಧ್ಯತೆ
ಯುಪಿ ಅಧೀನ ಸೇವೆಗಳ ಆಯ್ಕೆ ಆಯೋಗದಿಂದ ಆಯ್ಕೆಯಾದ ಜೂನಿಯರ್ ಇಂಜಿನಿಯರ್‌ಗಳು, ಫೋರ್‌ಮ್ಯಾನ್ ಮತ್ತು ಕಂಪ್ಯೂಟರ್ ಆಪರೇಟರ್‌ಗಳಿಗೆ ನೇಮಕಾತಿ ಪತ್ರ ವಿತರಣೆಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, “ಈ ಸಮಯದಲ್ಲಿ ಕೆಲವು ನರಭಕ್ಷಕ ತೋಳಗಳು ವಿವಿಧ ಜಿಲ್ಲೆಗಳಲ್ಲಿ ವಿನಾಶವನ್ನು ಸೃಷ್ಟಿಸುತ್ತಿರುವುದನ್ನು ನಾನು ನೋಡುತ್ತಿದ್ದೇನೆ. 2017 ರ ಮೊದಲು ರಾಜ್ಯದಲ್ಲಿ ಹೆಚ್ಚು ಕಡಿಮೆ ಇದೇ ಪರಿಸ್ಥಿತಿ ಇತ್ತು” ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ