ಯುಪಿ ಚುನಾವಣೆಗೆ ಯೋಗಿ ಬಿಗ್ ಗಿಫ್ಟ್: 1 ಕೋಟಿ ಮಹಿಳೆಯರಿಗೆ 1 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ

ಉತ್ತರ ಪ್ರದೇಶ ಸರ್ಕಾರವು 1 ಕೋಟಿ ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕೆ ಆರ್ಥಿಕ ಬೆಂಬಲ ನೀಡಲು 1 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ ಯೋಜನೆಯನ್ನು ಪ್ರಕಟಿಸಿದೆ. ಇದು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸಹಕಾರಿಯಾಗಲಿದ್ದು, ಚುನಾವಣೆಗೂ ಮುನ್ನ ಮಹಿಳಾ ಮತದಾರರನ್ನು ಸೆಳೆಯುವ ಉದ್ದೇಶ ಹೊಂದಿದೆ. ಮೂರು ಕಂತುಗಳಲ್ಲಿ ಹಣ ವಿತರಣೆ ಮತ್ತು ವಿಶೇಷ ಕ್ರೆಡಿಟ್ ಕಾರ್ಡ್ ಸೌಲಭ್ಯವೂ ಇದರ ಭಾಗವಾಗಿದೆ.

ಯುಪಿ ಚುನಾವಣೆಗೆ ಯೋಗಿ ಬಿಗ್ ಗಿಫ್ಟ್: 1 ಕೋಟಿ ಮಹಿಳೆಯರಿಗೆ 1 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ
ಯೋಗಿ

Updated on: Sep 10, 2026 | 11:58 AM

ಲಕ್ನೋ,ಸೆಪ್ಟೆಂಬರ್ 10: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಮಹಿಳಾ ಮತದಾರರನ್ನು ಸೆಳೆಯಲು ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಮೆಗಾ ಆಫರ್ ನೀಡಿದೆ. ರಾಜ್ಯದ ಸುಮಾರು 1 ಕೋಟಿ ಮಹಿಳೆಯರಿಗೆ ಸ್ವಂತ ಉದ್ಯಮ ಆರಂಭಿಸಲು ಮತ್ತು ಆರ್ಥಿಕವಾಗಿ ಸಬಲರಾಗಲು 1 ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡುವ ಮಹತ್ವದ ಯೋಜನೆಯನ್ನು ಪ್ರಕಟಿಸಿದೆ. ಮೂರು ಕಂತುಗಳಲ್ಲಿ ವಿತರಿಸಲಾಗುವ ಈ ಹಣದ ಜೊತೆಗೆ, ಮಹಿಳೆಯರಿಗೆ ವಿಶೇಷ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನೂ ಸರ್ಕಾರ ಒದಗಿಸಲಿದೆ.

ಮೂರು ಹಂತಗಳಲ್ಲಿ 1 ಲಕ್ಷ ರೂ. ಸಾಲ: ಈ ಸಾಲ ಸೌಲಭ್ಯವನ್ನು ಮಹಿಳೆಯರಿಗೆ ಮೂರು ಕಂತುಗಳಲ್ಲಿ ನೇರವಾಗಿ ಬ್ಯಾಂಕ್ ಖಾತೆಗೆ ನೀಡಲಾಗುತ್ತದೆ. ಮೊದಲ ಕಂತಿನಲ್ಲಿ 20 ಸಾವಿರ ರೂ. ನೀಡಲಾಗಲಿದ್ದು, ಅದನ್ನು ಸಕಾಲದಲ್ಲಿ ಮರುಪಾವತಿಸಿದ ಮಹಿಳೆಯರಿಗೆ ಎರಡನೇ ಕಂತಿನಲ್ಲಿ 30 ಸಾವಿರ ರೂ. ಹಾಗೂ ಮೂರನೇ ಕಂತಿನಲ್ಲಿ 50 ಸಾವಿರ ರೂ. ಸಾಲ ಲಭ್ಯವಾಗಲಿದೆ.

ವಿಶೇಷ ಕ್ರೆಡಿಟ್ ಕಾರ್ಡ್ ಸೌಲಭ್ಯ: ಮಹಿಳೆಯರು ಸ್ವಂತವಾಗಿ ಸಣ್ಣ ಉದ್ಯಮ ಆರಂಭಿಸಲು ಅಥವಾ ಈಗಿರುವ ವ್ಯಾಪಾರವನ್ನು ವಿಸ್ತರಿಸಲು ಅನುಕೂಲವಾಗುವಂತೆ ವಿಶೇಷ ಕ್ರೆಡಿಟ್ ಕಾರ್ಡ್ ನೀಡಲು ಬ್ಯಾಂಕುಗಳ ಸಹಯೋಗದೊಂದಿಗೆ ಯೋಜನೆ ರೂಪಿಸಲಾಗುತ್ತಿದೆ.

ಡಿಜಿಟಲ್ ಗುರುತಿನ ಚೀಟಿ ಮತ್ತು ಕ್ಯೂಆರ್ ಕೋಡ್: ಸ್ವಸಹಾಯ ಸಂಘಗಳ (SHG) ಸದಸ್ಯರಿಗೆ ಕ್ಯೂಆರ್ (QR) ಕೋಡ್ ಆಧಾರಿತ ಡಿಜಿಟಲ್ ಗುರುತಿನ ಚೀಟಿ ಒದಗಿಸಿ, ಆನ್‌ಲೈನ್ ಮಾರ್ಕೆಟಿಂಗ್, ಇ-ಕಾಮರ್ಸ್ ಮತ್ತು ಡಿಜಿಟಲ್ ಹಣಕಾಸು ವಹಿವಾಟಿಗೆ ತರಬೇತಿ ನೀಡಲಾಗುತ್ತದೆ

100 ಮಹಿಳಾ ಶಕ್ತಿ ಕೇಂದ್ರಗಳು: ರಾಜ್ಯದ ಮಹಿಳೆಯರಿಗೆ ತರಬೇತಿ, ಉದ್ಯಮ ಮಾರ್ಗದರ್ಶನ ಮತ್ತು ಆರ್ಥಿಕ ಬೆಂಬಲ ಕಲ್ಪಿಸಲು ರಾಜ್ಯಾದ್ಯಂತ 100‘ಮಹಿಳಾ ಶಕ್ತಿ ಕೇಂದ್ರ’ಗಳನ್ನು ತೆರೆಯಲು ಗ್ರಾಮೀಣಾಭಿವೃದ್ಧಿ ಇಲಾಖೆ ತೀರ್ಮಾನಿಸಿದೆ.

ಮತ್ತಷ್ಟು ಓದಿ:ಬಾಲಿವುಡ್​ಗೆ ಎಚ್ಚರಿಕೆ ಕೊಟ್ಟ ಯುಪಿ ಸಿಎಂ ಯೋಗಿ ಆದಿತ್ಯನಾಥ್

ಮಹಿಳಾ ಮತದಾರರ ಓಲೈಕೆ ತಂತ್ರ: ಉತ್ತರ ಪ್ರದೇಶದಲ್ಲಿ ಸುಮಾರು 12.5 ಕೋಟಿಗೂ ಹೆಚ್ಚು ಮಹಿಳಾ ಮತದಾರರಿದ್ದು, ಚುನಾವಣೆಗಳಲ್ಲಿ ಇವರ ಪಾತ್ರ ನಿರ್ಣಾಯಕವಾಗಿದೆ. ಇತ್ತೀಚೆಗಷ್ಟೇ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ 12 ಸಾವಿರ ರೂ.ಗೆ ಏರಿಕೆ, ಶಾಲಾ ಬಿಸಿಯೂಟ ಅಡುಗೆಯವರಿಗೆ ಮಾಸಿಕ ಭತ್ಯೆ ಹೆಚ್ಚಳ ಹಾಗೂ ಉಚಿತ ಬಸ್ ಪ್ರಯಾಣದಂತಹ ಸರಣಿ ಯೋಜನೆಗಳನ್ನು ಘೋಷಿಸಿರುವ ಯೋಗಿ ಸರ್ಕಾರ, ಈಗ 1 ಲಕ್ಷ ರೂ. ಸಾಲದ ಮೂಲಕ 3 ರಿಂದ 4 ಕೋಟಿ ಜನರನ್ನು ತಲುಪುವ ಗುರಿ ಹೊಂದಿದೆ.

ಕರ್ನಾಟಕದ ‘ಸ್ತ್ರೀಶಕ್ತಿ’ ಮಾದರಿ ಚರ್ಚೆ: ಕರ್ನಾಟಕದಲ್ಲಿ ಸ್ತ್ರೀಶಕ್ತಿ ಸಂಘಗಳಿಗೆ ಬಡ್ಡಿರಹಿತ ಸಾಲ ಹಾಗೂ ಗೃಹಲಕ್ಷ್ಮಿ ಯೋಜನೆಯ ಮೂಲಕ ಮಹಿಳೆಯರ ಖಾತೆಗೆ ನೇರ ಹಣ ಜಮೆ ಮಾಡುವುದು ಚುನಾವಣಾ ರಾಜಕೀಯದಲ್ಲಿ ಪ್ರಮುಖ ಪ್ರಭಾವ ಬೀರಿರುವಂತೆಯೇ, ಯುಪಿಯಲ್ಲೂ ಈ ಬಡ್ಡಿರಹಿತ ಕ್ರೆಡಿಟ್ ಯೋಜನೆ ಮಹಿಳಾ ಮತದಾರರನ್ನು ಸೆಳೆಯಲು ಪ್ರಮುಖ ಅಸ್ತ್ರವಾಗಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us