AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೀರತ್ ಬ್ಲೂ ಡ್ರಮ್ ಕೊಲೆ ಪ್ರಕರಣ; ಸೌರಭ್ ಹತ್ಯೆಯಲ್ಲಿ ಮುಸ್ಕಾನ್, ಪ್ರಿಯಕರ ಸಾಹಿಲ್ ಅಪರಾಧಿಗಳೆಂದು ಕೋರ್ಟ್ ತೀರ್ಪು

ಉತ್ತರ ಪ್ರದೇಶದ ಮೀರತ್‌ನ ಜಿಲ್ಲಾ ನ್ಯಾಯಾಲಯವು ಇಂದು 2025ರ ಮಾರ್ಚ್​​ನಲ್ಲಿ ನಡೆದ ಮರ್ಚೆಂಟ್ ನೇವಿ ಉದ್ಯೋಗಿ ಸೌರಭ್ ಭೀಕರ ಕೊಲೆ ಪ್ರಕರಣದಲ್ಲಿ ಅವರ ಪತ್ನಿ ಮುಸ್ಕಾನ್ ಹಾಗೂ ಆಕೆಯ ಪ್ರಿಯಕರ ಸಾಹಿಲ್ ತಪ್ಪಿತಸ್ಥರು ಎಂದು ತೀರ್ಪು ನೀಡಿದೆ. ದೇಶಾದ್ಯಂತ ಭಾರೀ ಚರ್ಚೆಗೆ ಒಳಗಾಗಿದ್ದ ಈ ‘ಬ್ಲೂ ಡ್ರಮ್ ಪ್ರಕರಣ’ದ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯವು ಅಕ್ಟೋಬರ್ 14ರಂದು ಪ್ರಕಟಿಸಲಿದೆ. ಸೌರಭ್ ಕೊಲೆಯ ನಂತರ ಅವರ ಶವವನ್ನು ಕಟ್ ಮಾಡಿ, ನೀಲಿ ಬಣ್ಣದ ಪ್ಲಾಸ್ಟಿಕ್ ಡ್ರಮ್‌ನಲ್ಲಿಟ್ಟು ಸಿಮೆಂಟ್ ಹಾಕಿ ಸೀಲ್ ಮಾಡಲಾಗಿತ್ತು.

ಮೀರತ್ ಬ್ಲೂ ಡ್ರಮ್ ಕೊಲೆ ಪ್ರಕರಣ; ಸೌರಭ್ ಹತ್ಯೆಯಲ್ಲಿ ಮುಸ್ಕಾನ್, ಪ್ರಿಯಕರ ಸಾಹಿಲ್ ಅಪರಾಧಿಗಳೆಂದು ಕೋರ್ಟ್ ತೀರ್ಪು
ಮುಸ್ಕಾನ್ ಹಾಗೂ ಆಕೆಯ ಪ್ರಿಯಕರ ಸಾಹಿಲ್Image Credit source: TV9
ಸುಷ್ಮಾ ಚಕ್ರೆ
|

Updated on: Sep 30, 2026 | 7:22 PM

Share

ಮೀರತ್, ಸೆಪ್ಟೆಂಬರ್ 30: ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಮೀರತ್‌ನ ಮರ್ಚೆಂಟ್ ನೇವಿ ಉದ್ಯೋಗಿ ಸೌರಭ್ ರಜಪೂತ್ ಕೊಲೆ ಪ್ರಕರಣದಲ್ಲಿ, ಅವರ ಪತ್ನಿ ಮುಸ್ಕಾನ್ ಹಾಗೂ ಆಕೆಯ ಪ್ರಿಯಕರ ಸಾಹಿಲ್ ತಪ್ಪಿತಸ್ಥರು ಎಂದು ಜಿಲ್ಲಾ ನ್ಯಾಯಾಲಯ ಇಂದು ಮಹತ್ವದ ತೀರ್ಪು ನೀಡಿದೆ. ಕಳೆದ ವರ್ಷದ ಮಾರ್ಚ್‌ನಲ್ಲಿ ಸೌರಭ್ ಅವರ ಶವವು ಅವರದ್ದೇ ಮನೆಯಲ್ಲಿದ್ದ ನೀಲಿ ಬಣ್ಣದ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಭೀಕರ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನ್ಯಾಯಾಲಯವು ಆರೋಪಿಗಳನ್ನು ಅಪರಾಧಿಗಳು ಎಂದು ಎತ್ತಿಹಿಡಿದಿದ್ದು, ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿದೆ.

ಸುಮಾರು 13 ತಿಂಗಳ ನ್ಯಾಯಾಲಯದ ಪ್ರಕ್ರಿಯೆ, ಸುಮಾರು 126 ವಿಚಾರಣೆಗಳು ಹಾಗೂ 22ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆಗಳನ್ನು ಆಲಿಸಿದ ನಂತರ ಈ ತೀರ್ಪು ಹೊರಬಿದ್ದಿದೆ. ಇಬ್ಬರೂ ಆರೋಪಿಗಳನ್ನು ಜೈಲಿನಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

ಏನಿದು ಘಟನೆ?:

ಮರ್ಚೆಂಟ್ ನೇವಿ ಅಧಿಕಾರಿಯಾಗಿದ್ದ ಸೌರಭ್ ರಜಪೂತ್ ಅವರು ತಮ್ಮ ಮಗಳ ಜನ್ಮದಿನ ಆಚರಿಸಲು ಲಂಡನ್‌ನಿಂದ ಭಾರತಕ್ಕೆ ಮರಳಿದ್ದರು. ಆದರೆ, ತಮ್ಮ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಸೌರಭ್ ಅವರನ್ನು ಕೊಲೆ ಮಾಡಲು ಪತ್ನಿ ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಸಾಹಿಲ್ ಹಲವು ತಿಂಗಳುಗಳಿಂದ ಸಂಚು ರೂಪಿಸಿದ್ದರು.

ಇದನ್ನೂ ಓದಿ: ಮೀರತ್​ ಕೊಲೆ ಪ್ರಕರಣ: ಮುಸ್ಕಾನ್, ಪತಿ​ ಸೌರಭ್​ನನ್ನು ತುಂಡು ತುಂಡಾಗಿ ಕತ್ತರಿಸಿದ್ದೇಕೆ?

2025ರ ಮಾರ್ಚ್ ತಿಂಗಳಲ್ಲಿ ಮುಸ್ಕಾನ್ ತನ್ನ ಪತಿ ಸೌರಭ್‌ಗೆ ಮೊದಲು ನಿದ್ದೆ ಮಾತ್ರೆ ಕೊಟ್ಟು ಮಲಗಿಸಿ, ನಂತರ ಪ್ರಿಯಕರ ಸಾಹಿಲ್ ನೆರವಿನಿಂದ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಳು. ಈ ಕೊಲೆಗೂ ಮುನ್ನವೇ ಇಬ್ಬರೂ ಸೇರಿ ಚಾಕು, ರೇಜರ್, ಸಿಮೆಂಟ್, ಮರಳು ಮತ್ತು ದೊಡ್ಡ ನೀಲಿ ಡ್ರಮ್ ಖರೀದಿಸಿ ಮುಂಚಿತವಾಗಿಯೇ ಸಂಚು ರೂಪಿಸಿದ್ದರು. ಕೊಲೆಯ ನಂತರ ಸೌರಭ್​ನ ಶವವನ್ನು ತುಂಡರಿಸಿ, ನೀಲಿ ಡ್ರಮ್‌ನಲ್ಲಿ ತುಂಬಿ ಮೇಲಿಂದ ಸಿಮೆಂಟ್ ಹಾಕಿ ಮುಚ್ಚಿದ್ದರು. ಬಳಿಕ ಆರೋಪಿಗಳು ಹಿಮಾಚಲ ಪ್ರದೇಶಕ್ಕೆ ಪರಾರಿಯಾಗಿದ್ದು, ಈ ಘಟನೆ ನಡೆದ 2 ವಾರಗಳ ನಂತರ ಪೊಲೀಸರು ಅವರನ್ನು ಬಂಧಿಸಿದ್ದರು. ಪೋಸ್ಟ್‌ಮಾರ್ಟಂ ವರದಿಯಲ್ಲಿ ಚೂಪಾದ ಅಸ್ತ್ರಗಳಿಂದ ಭೀಕರ ಗಾಯಗಳಾಗಿರುವುದು ದೃಢಪಟ್ಟಿತ್ತು.

ಇದನ್ನೂ ಓದಿ: ಮೀರತ್: ಸೌರಭ್​ನನ್ನು ಕೊಲೆ ಮಾಡಿ ಹಿಮಾಚಲಕ್ಕೆ ಟ್ರಿಪ್​ಗೆ ಹೋಗಿ ಸಾಹಿಲ್, ಮುಸ್ಕಾನ್ ಮಾಡಿದ್ದೇನು?

ಸೌರಭ್ ಅವರ ಅಣ್ಣ ರಾಹುಲ್ ಪ್ರತಿಕ್ರಿಯಿಸಿದ್ದು, ಆರೋಪಿಗಳಿಗೆ ಗರಿಷ್ಠ ಶಿಕ್ಷೆಯಾದ ಮರಣದಂಡನೆ (ಫಾಶಿ) ವಿಧಿಸಬೇಕೆಂದು ಆಗ್ರಹಿಸಿದ್ದಾರೆ. “ನನ್ನ ತಮ್ಮನಿಗೆ ಅವರಿಬ್ಬರೂ ಏನು ಮಾಡಿದರೋ, ಅದೇ ಶಿಕ್ಷೆ ಅವರಿಗೂ ಆಗಬೇಕು. ಕನಿಷ್ಠ ಎಂದರೆ ಅವರಿಗೆ ಮರಣದಂಡನೆ ಸಿಗಲೇಬೇಕು. ಒಂದು ವೇಳೆ ಅದಕ್ಕಿಂತ ಕಡಿಮೆ ಶಿಕ್ಷೆಯಾದರೆ ನಾವು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ ಮೆಟ್ಟಿಲೇರುತ್ತೇವೆ” ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More