‘ಆಕ್ಸಿಜನ್ ಇಲ್ಲ ಎಂದು ಇಂಥ ಟ್ರಿಕ್​ಗಳನ್ನು ಎಂದೆಂದೂ ಮಾಡ್ಬೇಡಿ’-ವೈದ್ಯರೊಬ್ಬರ ನೆಬ್ಯೂಲೈಸರ್​ ಸಲಹೆ ವಿರುದ್ಧ ತಿರುಗಿಬಿದ್ದ ತಜ್ಞರು

|

Updated on: Apr 25, 2021 | 1:46 PM

ಆಮ್ಲಜನಕದ ಸಿಲಿಂಡರ್​ಗೆ ಬದಲಿಯಾಗಿ ನೆಬ್ಯುಲೈಸರ್​​ಗಳನ್ನು ಬಳಸಲಾಗದು. ನೆಬ್ಯುಲೈಸರ್​ಗಳಿಂದ ರಕ್ತದಲ್ಲಿ ಆಮ್ಲಜನಕ ಮಟ್ಟ ಹೆಚ್ಚುತ್ತದೆ ಎಂಬುದು ಆಧಾರ ರಹಿತ ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

‘ಆಕ್ಸಿಜನ್ ಇಲ್ಲ ಎಂದು ಇಂಥ ಟ್ರಿಕ್​ಗಳನ್ನು ಎಂದೆಂದೂ ಮಾಡ್ಬೇಡಿ’-ವೈದ್ಯರೊಬ್ಬರ ನೆಬ್ಯೂಲೈಸರ್​ ಸಲಹೆ ವಿರುದ್ಧ ತಿರುಗಿಬಿದ್ದ ತಜ್ಞರು
ತಪ್ಪು ಮಾಹಿತಿ ನೀಡಿದ್ದ ವೈದ್ಯ ಡಾ. ಅಲೋಕ್​
Follow us on

ಸದ್ಯ ದೇಶದೆಲ್ಲೆಡೆ ಆಮ್ಲಜನಕಕ್ಕಾಗಿ ಬೇಡಿಕೆ ಹೆಚ್ಚುತ್ತಿದೆ. ಆಕ್ಸಿಜನ್ ಸರಿಯಾಗಿ, ಬೇಕಾದಷ್ಟು ಪ್ರಮಾಣದಲ್ಲಿ ಪೂರೈಕೆ ಆಗುತ್ತಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ. ಹೀಗಿರುವಾಗ ಫರಿದಾಬಾದ್​ನ ಸರ್ವೋದಯ ಆಸ್ಪತ್ರೆಯ ಡಾ. ಅಲೋಕ್​ ಎಂಬುವರ ವಿಡಿಯೋ ವೈರಲ್ ಆಗಿತ್ತು. ನೆಬ್ಯೂಲೈಸರ್​​ಗಳನ್ನು ಬಳಸುವುದರಿಂದಲೂ ರಕ್ತದಲ್ಲಿ ಆಕ್ಸಿಜನ್​ ಪ್ರಮಾಣ ಹೆಚ್ಚುತ್ತದೆ ಎಂದು ಡಾ. ಅಲೋಕ್ ಹೇಳಿದ ವಿಡಿಯೋ ಇದು. ಆದರೆ ಈ ವಿಡಿಯೋದಲ್ಲಿ ಡಾ. ಅಲೋಕ್​ ಹೇಳಿಕೆ ತಜ್ಞ ವೈದ್ಯರೇ ವಿರೋಧ ವ್ಯಕ್ತಪಡಿಸಿದ್ದಾರೆ. ನೆಬ್ಯೂಲೈಸರ್​ಗಳಿಂದ ಆಮ್ಲಜನಕ ಪೂರೈಕೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು ಡಾ. ಅಲೋಕ್ ಕೆಲಸ ಮಾಡುತ್ತಿರುವ ಸರ್ವೋದಯ ಆಸ್ಪತ್ರೆಯೂ ಕೂಡ ಈ ವಿಡಿಯೋಗೂ, ನಮಗೂ ಯಾವುದೇ ಸಂಬಂಧವಿಲ್ಲ, ಅದು ಅಲೋಕ್ ಅವರ ವೈಯಕ್ತಿಕ ಅಭಿಪ್ರಾಯ. ಹಾಗೇ, ನೆಬ್ಯೂಲೈಸರ್​ಗಳಿಂದ ಆಮ್ಲಜನಕ ನೀಡಬಹುದು ಎಂಬ ಹೇಳಿಕೆಗೆ ನಮ್ಮ ಅನುಮೋದನೆ ಇಲ್ಲ ಎಂದು ತಿಳಿಸಿದೆ.

ವಿಡಿಯೋದಲ್ಲಿ ಏನಿತ್ತು?
ಡಾ. ಅಲೋಕ್​ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆಗಿತ್ತು. ಆಮ್ಲಜನಕವಿಲ್ಲದೆ ಜನರು ಪರದಾಡುತ್ತಿರುವುದು, ಸಾಯುತ್ತಿರುವದನ್ನು ನೋಡಲು ಸಾಧ್ಯವಾಗುತ್ತಿಲ್ಲ. ಆಮ್ಲಜನಕ ಸಿಗುತ್ತಿಲ್ಲ ಎಂದರೆ ಅದರ ಬದಲಿಗೆ ಏನು ಮಾಡಬಹುದು? ಎಂಬುದಕ್ಕೆ ಒಂದು ಟ್ರಿಕ್​ ಹೇಳುತ್ತೇನೆ. ನೀವದನ್ನು ಮಾಡಬಹುದು. ನೆಬ್ಯುಲೈಸರ್​ಗಳನ್ನು ಬಳಕೆ ಮಾಡಬಹುದು. ಆದರೆ ನೆಬ್ಯುಲೈಸರ್​​ಗಳಲ್ಲಿ ಔಷಧ ಹಾಕಬಾರದು. ಖಾಲಿ ನೆಬ್ಯುಲೈಸರ್​ಗಳಿಂದ ಆಮ್ಲಜನಕ ಪಡೆದುಕೊಳ್ಳಬಹುದು ಎಂದು ಡಾ. ಅಲೋಕ್​ ವಿಡಿಯೋದಲ್ಲಿ ಹೇಳಿದ್ದರು. ಖಾಲಿ ನೆಬ್ಯುಲೈಸರ್​ಗಳಿಂದ ಹೇಗೆ ಆಮ್ಲಜನಕ ಪಡೆಯಬಹುದು ಎಂಬುದನ್ನೂ ಡಾ. ಅಲೋಕ್​ ವಿವರಿಸಿದ್ದರು.

ಆದರೆ ಇದನ್ನು ತಜ್ಞ ವೈದ್ಯರು ಅಲ್ಲಗಳೆದಿದ್ದಾರೆ. ಆಮ್ಲಜನಕದ ಸಿಲಿಂಡರ್​ಗೆ ಬದಲಿಯಾಗಿ ನೆಬ್ಯುಲೈಸರ್​​ಗಳನ್ನು ಬಳಸಲಾಗದು. ನೆಬ್ಯುಲೈಸರ್​ಗಳಿಂದ ರಕ್ತದಲ್ಲಿ ಆಮ್ಲಜನಕ ಮಟ್ಟ ಹೆಚ್ಚುತ್ತದೆ ಎಂಬುದು ಆಧಾರ ರಹಿತ ಎಂದು ಮೇದಾಂತಾದ ಲಿವರ್​ ಕಸಿ ಮತ್ತು ರಿಜನರೇಟಿವ್​ ಮೆಡಿಸಿನ್​ನ ಚೇರ್​ಮನ್​ ಡಾ. ಅರವಿಂದರ್​ ಸಿಂಗ್ ಸಾಯ್ನ್​ ತಿಳಿಸಿದ್ದಾರೆ. ಇಂಥ ತಂತ್ರಗಳನ್ನು ಬಳಸಬೇಡಿ ಎಂದು ಡಾ. ಅರವಿಂದರ್ ಸೇರಿ ಹಲವು ತಜ್ಞರು ಮನವಿ ಮಾಡಿದ್ದಾರೆ. ನಂತರ ಹೀಗೆ ಸಲಹೆ ನೀಡಿದ್ದ ಡಾ. ಅಲೋಕ್ ಕೂಡ ಕ್ಷಮೆ ಕೇಳಿದ್ದಾರೆ. ತಪ್ಪು ಮಾಹಿತಿ ನೀಡಿದ್ದಕ್ಕೆ ಕ್ಷಮಿಸಿ ಎಂದು ಮತ್ತೊಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

ನೆಬ್ಯುಲೈಸರ್​ನ್ನು ಸಾಮಾನ್ಯವಾಗಿ ಅಸ್ತಮಾ ರೋಗಿಗಳ ಚಿಕಿತ್ಸೆಗೆ ಬಳಸಲಾಗುತ್ತದೆ. ಅಸ್ತಮಾ ಇರುವವರಿಗೆ ಉಸಿರಾಟದ ತೊಂದರೆಯಾದಾಗ ಈ ಮಷಿನ್​ನಲ್ಲಿ ಔಷಧ ತುಂಬಿ ನೀಡಲಾಗುತ್ತದೆ. ಇದು ನೇರವಾಗಿ ಶ್ವಾಸಕೋಶಕ್ಕೆ ಹೋಗಿ ಉಸಿರಾಟ ಸರಾಗ ಮಾಡುತ್ತದೆ.

ಇದನ್ನೂ ಓದಿ: ದೆಹಲಿಯಲ್ಲಿ ಕೊವಿಡ್ ಪ್ರಕರಣ ಹೆಚ್ಚಳ, ಮೇ 3ರವರೆಗೆ ಲಾಕ್​ಡೌನ್ ವಿಸ್ತರಣೆ: ಅರವಿಂದ್ ಕೇಜ್ರಿವಾಲ್

ಅಭಿ ಚಿತ್ರ ರಿಲೀಸ್​ ಆದ ದಿನಾಂಕದಲ್ಲೇ ಅಭಿಮಾನಿಗಳ ಆಸೆಗೆ ತಣ್ಣೀರು ಎರಚಿದ ರಮ್ಯಾ