ಉತ್ತರ ಪ್ರದೇಶ: ಬಸ್​-ಟೆಂಪೋ ನಡುವೆ ಡಿಕ್ಕಿ, 10 ಮಂದಿ ಸಾವು, 20ಕ್ಕೂ ಅಧಿಕ ಜನರಿಗೆ ಗಾಯ

|

Updated on: Aug 18, 2024 | 2:19 PM

ಉತ್ತರ ಪ್ರದೇಶದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಖಾಸಗಿ ಬಸ್ ಮತ್ತೊಂದು ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸುವಾಗ ಟೆಂಪೋಗೆ ಡಿಕ್ಕಿ ಹೊಡೆದು ಟೆಂಪೋ ಪಲ್ಟಿಯಾಗಿದೆ.

ಉತ್ತರ ಪ್ರದೇಶ: ಬಸ್​-ಟೆಂಪೋ ನಡುವೆ ಡಿಕ್ಕಿ, 10 ಮಂದಿ ಸಾವು, 20ಕ್ಕೂ ಅಧಿಕ ಜನರಿಗೆ ಗಾಯ
ಅಪಘಾತ
Image Credit source: India Today
Follow us on

ಬಸ್​ ಹಾಗೂ ಟೆಂಪೋ ನಡುವೆ ಡಿಕ್ಕಿಯುಂಟಾಗಿ 10 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬುಲಂದ್​ಶಹರ್​ನಲ್ಲಿ ನಡೆದಿದೆ. 20ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಟೆಂಪೋದಲ್ಲಿ 25 ಜನರು ಪ್ರಯಾಣಿಸುತ್ತಿದ್ದರು ಮತ್ತು ಅವರಲ್ಲಿ ಹತ್ತು ಮಂದಿ ಸೇಲಂಪುರ ಪ್ರದೇಶದಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಖಾಸಗಿ ಬಸ್ ಮತ್ತೊಂದು ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸುವಾಗ ಟೆಂಪೋಗೆ ಡಿಕ್ಕಿ ಹೊಡೆದು ಟೆಂಪೋ ಪಲ್ಟಿಯಾಗಿದೆ.
ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಅಪಘಾತದಲ್ಲಿ ಟೆಂಪೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಸ್‌ನ ಮುಂಭಾಗವೂ ಜಖಂಗೊಂಡಿದೆ.

ಈ ಘಟನೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ರಸ್ತೆ ತಡೆ ನಡೆಸಿದರು. ಅಪಘಾತಕ್ಕೆ ಕಾರಣ ಪೊಲೀಸರಿಂದ ಇನ್ನಷ್ಟೇ ತಿಳಿದು ಬರಬೇಕಿದೆ. ತನಿಖೆಯನ್ನು ಪ್ರಾರಂಭಿಸಲಾಗಿದೆ.

ಮತ್ತಷ್ಟು ಓದಿ: ಹೆಬ್ಬಾಳ ಫ್ಲೈಓವರ್​ ಮೇಲೆ ಸರಣಿ ಅಪಘಾತ; ಬಿಎಂಟಿಸಿ ಬಸ್​ ಚಾಲಕನ ಯಡವಟ್ಟಿನಿಂದ ಘೋರ ದುರಂತ, ವಿಡಿಯೋ ನೋಡಿ

ಮತ್ತೊಂದು ಅಪಘಾತ
ಕರ್ನಾಟಕದ ಗದಗ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಇಲ್ಲಿ ಸಾರಿಗೆ ಬಸ್ ಮತ್ತು ಕಾರಿನ ನಡುವೆ ಡಿಕ್ಕಿಯಾಗಿ ನಾಲ್ವರು ಸಾವನ್ನಪ್ಪಿದ್ದಾರೆ. ಇವರಲ್ಲಿ ಇಬ್ಬರು ಮಕ್ಕಳೂ ಸೇರಿದ್ದಾರೆ. ನಾಲ್ವರೂ ಒಂದೇ ಕುಟುಂಬದ ಸದಸ್ಯರಾಗಿದ್ದರು. ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದೆ.

ಮೃತರನ್ನು ಹಾವೇರಿ ನಿವಾಸಿ ರುದ್ರಪ್ಪ ಅಂಗಡಿ (55), ಪತ್ನಿ ರಾಜೇಶ್ವರಿ (45), ಪುತ್ರಿ ಐಶ್ವರ್ಯ (16), ಪುತ್ರ ವಿಜಯ (12) ಎಂದು ಗುರುತಿಸಲಾಗಿದೆ. ಅಪಘಾತದ ನಂತರ ಕಾರು ನಜ್ಜುಗುಜ್ಜಾಗಿದೆ. ತುಂಬಾ ಕಷ್ಟಪಟ್ಟು ಮೃತ ದೇಹಗಳನ್ನು ಹೊರ ತೆಗೆಯಬೇಕಾಯಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ