ಸಂವಿಧಾನಕ್ಕೆ ಬದ್ದವಾಗಿ ದೇಶ ನಡೆಸುತ್ತೇವೆಯೇ ಹೊರತು ಇಸ್ಲಾಮಿಕ್ ಕಾನೂನಿನಲ್ಲಿರುವಂತೆ ಅಲ್ಲ; ಹಿಜಾಬ್ ವಿವಾದಕ್ಕೆ ಪ್ರತಿಕ್ರಿಯಿಸಿದ ಸಿಎಂ ಯೋಗಿ
ಮುಸ್ಲಿಂ ಹೆಣ್ಣುಮಕ್ಕಳ ಹಕ್ಕು ರಕ್ಷಣೆ ಮತ್ತು ಗೌರವಕ್ಕಾಗಿ, ಭಯದಲ್ಲಿ ಬದುಕುತ್ತಿದ್ದ ಅವರ ಆತಂಕ ಕಡಿಮೆ ಮಾಡುವುದಕ್ಕೋಸ್ಕರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದಲ್ಲಿ ತ್ರಿವಳಿ ತಲಾಕ್ನ್ನು ರದ್ದುಗೊಳಿಸಿದರು ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಕರ್ನಾಟಕದಲ್ಲಿ ಭುಗಿಲೆದ್ದಿರುವ ಹಿಜಾಬ್ ವಿವಾದದ (Hijab Row) ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (UP CM Yogi Adityanath) ಪ್ರತಿಕ್ರಿಯೆ ನೀಡಿದ್ದಾರೆ. ಈ ದೇಶ ಸಂವಿಧಾಕ್ಕೆ ಬದ್ಧವಾಗಿ, ಅಲ್ಲಿ ಹೇಳಿದ ನಿಯಮಗಳಿಗೆ ಅನುಸಾರವಾಗಿ ನಡೆಯುತ್ತದೆಯೇ ಹೊರತು, ಇಸ್ಲಾಂ ಕಾನೂನು ಅಥವಾ ಷರಿಯತ್ ಕಾನೂನಿಗೆ ಅನ್ವಯವಾಗಿ ಅಲ್ಲ ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿನ ಹಿಜಾಬ್ ವಿವಾದಕ್ಕೆ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಸಿಎಂ ಯೋಗಿ ಇನ್ನೂ ಯಾವುದೇ ಹೇಳಿಕೆ ನೀಡಿರಲಿಲ್ಲ. ಆದರೆ ಇತ್ತೀಚೆಗೆ ಅಸಾದುದ್ದೀನ್ ಓವೈಸಿ ಈ ಬಗ್ಗೆ ಹೇಳಿಕೆಯೊಂದನ್ನು ನೀಡಿ, ಹಿಜಾಬ್ ಧರಿಸಿದ ಯುವತಿಯರು ವೈದ್ಯರಾಗಬಹುದು, ಜಿಲ್ಲಾಧಿಕಾರಿಗಳೂ ಆಗುತ್ತಾರೆ. ಹಾಗೇ ಮುಂದೊಂದು ದಿನ ಹಿಜಾಬಿಯೊಬ್ಬಳೂ ಭಾರತದ ಪ್ರಧಾನಿಯೂ ಆಗುತ್ತಾಳೆ. ಅದನ್ನು ನೋಡಲು ನಾನು ಬದುಕಿಲ್ಲದೆ ಇರಬಹುದು. ಆದರೆ ಖಂಡಿತ ಆಗುತ್ತಾಳೆ ಎಂದಿದ್ದರು. ಅದರ ಬೆನ್ನಲ್ಲೇ ಯೋಗಿ ಆದಿತ್ಯನಾಥ್ ಈ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಹೆಣ್ಣುಮಕ್ಕಳ ಹಕ್ಕು ರಕ್ಷಣೆ ಮತ್ತು ಗೌರವಕ್ಕಾಗಿ, ಭಯದಲ್ಲಿ ಬದುಕುತ್ತಿದ್ದ ಅವರ ಆತಂಕ ಕಡಿಮೆ ಮಾಡುವುದಕ್ಕೋಸ್ಕರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದಲ್ಲಿ ತ್ರಿವಳಿ ತಲಾಕ್ನ್ನು ರದ್ದುಗೊಳಿಸಿದರು. ಎಲ್ಲ ಹೆಣ್ಣುಮಕ್ಕಳನ್ನೂ ನಾವು ಗೌರವಿಸುತ್ತೇವೆ. ಆದರೆ ಈ ದೇಶದ ವ್ಯವಸ್ಥೆಯನ್ನು ಸಂವಿಧಾನದ ಆಧಾರದಲ್ಲಿ, ಅದರಲ್ಲಿ ಹೇಳಲಾದ ನಿಯಮಗಳಿಗೆ ಅನುಸಾರವಾಗಿ ನಡೆಸುತ್ತೇವೆಯೇ ಹೊರತು, ಇಸ್ಲಾಮಿಕ್ ಕಾನೂನಿನಲ್ಲಿದ್ದಂತೆ ದೇಶದ ಆಡಳಿತ ನಡೆಸಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಈ ಮೂಲಕ ಮುಂದೊಂದು ದಿನ ಹಿಜಾಬಿಯೇ ಭಾರತದ ಪ್ರಧಾನಮಂತ್ರಿಯಾಗುತ್ತಾಳೆ ಎಂದು ಹೇಳಿದ್ದ ಅಸಾದುದ್ದೀನ್ ಓವೈಸಿಯವರಿಗೆ ತಿರುಗೇಟು ನೀಡಿದರು.
ನಾವು ನಮ್ಮ ಹಿಂದು ಧರ್ಮದ ನಂಬಿಕೆಗಳು ಮತ್ತು ಆಯ್ಕೆಗಳನ್ನು ದೇಶ ಹಾಗೂ ಇಲ್ಲಿರುವ ಸಂಸ್ಥೆಗಳ ಮೇಲೆ ಹೇರುತ್ತಿಲ್ಲ. ನಾನೇನಾದರೂ ಉತ್ತರ ಪ್ರದೇಶದಲ್ಲಿ ಎಲ್ಲ ಸರ್ಕಾರಿ ಉದ್ಯೋಗಿಗಳು, ಇತರರು ಭಗವಾ ಕೇಸರಿ ಉಡುಪನ್ನೇ ಧರಿಸಬೇಕು ಎಂದು ಆದೇಶ ನೀಡಿದ್ದೇನಾ? ಆದರೆ ಶಿಕ್ಷಣ ಸಂಸ್ಥೆಗಳಲ್ಲಿ ವಸ್ತ್ರಸಂಹಿತೆ ಕಡ್ಡಾಯವಾಗಲೇಬೇಕು. ಭಾರತ ದೇಶ ಸಂವಿಧಾನದ ಪ್ರಕಾರವಾಗಿ ನಡೆದಾಗಲಷ್ಟೇ ಇಲ್ಲಿನ ಮಹಿಳೆಯರಿಗೆ ಗೌರವ, ಭದ್ರತೆ ಮತ್ತು ಸ್ವಾತಂತ್ರ್ಯ ಎಲ್ಲವೂ ಸಿಗುತ್ತದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಕರ್ನಾಟಕದಲ್ಲಿ ಹಿಜಾಬ್ ವಿವಾದ ಹೈಕೋರ್ಟ್ ಮೆಟ್ಟಿಲೇರಿದೆ. ಇಂದು ಮಧ್ಯಾಹ್ನ 2.30ಕ್ಕೆ ವಿಚಾರಣೆಯೂ ಇದೆ. ಈ ಮಧ್ಯೆ ಅಂತಿಮ ತೀರ್ಪಿನವರೆಗೂ ಯಾವುದೇ ವಿದ್ಯಾರ್ಥಿಗಳೂ ಕಾಲೇಜುಗಳಿಗೆ ಧಾರ್ಮಿಕ ವಸ್ತ್ರ ಹಾಕಿ ಬರುವಂತಿಲ್ಲ ಎಂದು ಹೈಕೋರ್ಟ್ ಮಧ್ಯಂತರ ತೀರ್ಪನ್ನೂ ಕೊಟ್ಟಿದೆ.
ಇದನ್ನೂ ಓದಿ: ಗೋವಾ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಸಿಡಿದೆದ್ದ ಕರವೇ! ಡಿಕೆಶಿ, ಸಿದ್ದರಾಮಯ್ಯ ಮನೆಗಳಿಗೆ ಮುತ್ತಿಗೆ
Published On - 12:06 pm, Mon, 14 February 22