ಉತ್ತರಕಾಶಿಯ ಧರಾಲಿ ಪ್ರವಾಹ ಸಂತ್ರಸ್ತರಿಗೆ ಉತ್ತರಾಖಂಡ ಸರ್ಕಾರದಿಂದ 5 ಲಕ್ಷ ರೂ. ನೆರವು ಘೋಷಣೆ

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಉತ್ತರಕಾಶಿಯ ಧರಾಲಿ ವಿಪತ್ತು ಸಂತ್ರಸ್ತರಿಗೆ 5 ಲಕ್ಷ ರೂ.ಗಳ ನೆರವು ಘೋಷಿಸಿದ್ದಾರೆ. ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಧರಾಲಿಯಲ್ಲಿ ಮನೆಗಳು ನಾಶವಾದ ಕುಟುಂಬಗಳಿಗೆ ಮತ್ತು ಇತ್ತೀಚಿನ ವಿಪತ್ತಿನಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ 5 ಲಕ್ಷ ರೂ.ಗಳ ತಕ್ಷಣದ ನೆರವು ಘೋಷಿಸಿದ್ದಾರೆ.

ಉತ್ತರಕಾಶಿಯ ಧರಾಲಿ ಪ್ರವಾಹ ಸಂತ್ರಸ್ತರಿಗೆ ಉತ್ತರಾಖಂಡ ಸರ್ಕಾರದಿಂದ 5 ಲಕ್ಷ ರೂ. ನೆರವು ಘೋಷಣೆ
Pushkar Singh Dhami

Updated on: Aug 09, 2025 | 7:39 PM

ಡೆಹ್ರಾಡೂನ್, ಆಗಸ್ಟ್ 9: ಉತ್ತರಾಖಂಡದ ಉತ್ತರಕಾಶಿ (Uttarakashi) ಜಿಲ್ಲೆಯ ಭಟ್ವಾಡಿ ತಹಸಿಲ್‌ನ ಧರಾಲಿ ಗ್ರಾಮದ ಕುಟುಂಬಗಳಿಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಅವರು ಪ್ರವಾಹ ಸಂತ್ರಸ್ತರ ಕುಟುಂಬಗಳಿಗೆ ಆರ್ಥಿಕ ನೆರವಾಗಿ ತಲಾ 5 ಲಕ್ಷ ರೂ.ಗಳನ್ನು ಮಂಜೂರು ಮಾಡಿದ್ದಾರೆ. ವಿಪತ್ತಿನಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೂ ಅದೇ ಮೊತ್ತವನ್ನು ನೀಡಲಾಗುವುದು ಎಂದಿದ್ದಾರೆ. ಮುಖ್ಯಮಂತ್ರಿ ಕಚೇರಿ (ಸಿಎಂಒ) ಪ್ರಕಾರ, ಪ್ರವಾಹಪೀಡಿತ ಗ್ರಾಮಸ್ಥರ ಪುನರ್ವಸತಿ ಕ್ರಮಗಳನ್ನು ಮೇಲ್ವಿಚಾರಣೆ ಮಾಡಲು ಕಂದಾಯ ಕಾರ್ಯದರ್ಶಿ ನೇತೃತ್ವದ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಆ ಸಮಿತಿಯು 1 ವಾರದೊಳಗೆ ತನ್ನ ಪ್ರಾಥಮಿಕ ವರದಿಯನ್ನು ಸಲ್ಲಿಸಲಿದೆ.

ಧರಾಲಿಯಲ್ಲಿ ಆಗಸ್ಟ್ 5ರಂದು ಮೇಘಸ್ಫೋಟದಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದ ನಂತರ 50 ನಾಗರಿಕರು, 8 ಸೈನಿಕರು ಮತ್ತು ಒಬ್ಬ ಜೂನಿಯರ್ ಕಮಿಷನ್ಡ್ ಆಫೀಸರ್ (ಜೆಸಿಒ) ಕಾಣೆಯಾಗಿದ್ದಾರೆ. ಬರ್ತ್ವಾರಿ, ಲಿಂಚಿಗಡ್, ಗಂಗಾರಾಣಿ, ಹರ್ಸಿಲ್ ಮತ್ತು ಧರಾಲಿ ಸೇರಿದಂತೆ ಹಲವಾರು ರಸ್ತೆ ಸಂಪರ್ಕಗಳು ತೀವ್ರವಾಗಿ ಹಾನಿಗೊಳಗಾಗಿವೆ. ಸೇನೆ ಮತ್ತು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಸಿಬ್ಬಂದಿ ಸಿಕ್ಕಿಹಾಕಿಕೊಂಡ ಪ್ರವಾಸಿಗರಿಗೆ ಆಹಾರ, ವೈದ್ಯಕೀಯ ನೆರವು ಮತ್ತು ಆಶ್ರಯವನ್ನು ಪೂರೈಸುತ್ತಿದ್ದಾರೆ. ಗಂಗೋತ್ರಿಗೆ ರಸ್ತೆಯ ಮೂಲಕ ಸಂಪರ್ಕ ಹೊಂದಿರುವ ನೆಲೋಂಗ್ ಹೆಲಿಪ್ಯಾಡ್‌ನಿಂದ ಪ್ರವಾಸಿಗರನ್ನು ಸ್ಥಳಾಂತರಿಸಲಾಗುತ್ತಿದೆ.

ಇದನ್ನೂ ಓದಿ: ಉತ್ತರಕಾಶಿ ಮೇಘಸ್ಫೋಟ: ಐದು ಸಾವು, 11 ಯೋಧರು ಸೇರಿದಂತೆ ಸುಮಾರು 150 ಜನ ನಾಪತ್ತೆ, ಶೋಧಕಾರ್ಯ ಜಾರಿ

ಉತ್ತರಾಖಂಡದ ಉತ್ತರಕಾಶಿಯಲ್ಲಿ ಹಠಾತ್ ಪ್ರವಾಹ ಸಂಭವಿಸಿತ್ತು. ಐದನೇ ದಿನವೂ ಸಹ ಕಾಣೆಯಾದ ಜನರ ನಿಖರವಾದ ಸಂಖ್ಯೆ ಸಿಗುತ್ತಿಲ್ಲ. ಧರಾಲಿ ಗ್ರಾಮದಲ್ಲಿ ಮಾತ್ರ ಸುಮಾರು 200 ಜನರು ಸಾವನ್ನಪ್ಪಿರಬಹುದು ಎಂದು ನಿವಾಸಿಗಳು ಹೇಳಿದ್ದಾರೆ. ಆದರೆ, ಉತ್ತರಾಖಂಡದ ಬಿಜೆಪಿ ಸರ್ಕಾರ ಕೇವಲ 6 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 50 ಜನರು ಇನ್ನೂ ಪತ್ತೆಯಾಗಿಲ್ಲ ಎಂದು ಹೇಳುತ್ತಿದೆ. ನಿಖರ ಸಂಖ್ಯೆಗಳ ಕೊರತೆಯಿಂದಾಗಿ ರಕ್ಷಣಾ ಕಾರ್ಯಾಚರಣೆ ಕಷ್ಟಕರವಾಗಿದೆ ಎಂದು ಉತ್ತರಾಖಂಡದ ಎಸ್ಪಿ ಹೇಳಿದ್ದಾರೆ. ಎರಡು ದಿನಗಳಲ್ಲಿ ಮಣ್ಣಿನಡಿಯಿಂದ ಕೇವಲ 2 ಶವಗಳನ್ನು ಹೊರತೆಗೆಯಲಾಗಿದೆ. ಧರಾಲಿ ಗ್ರಾಮದಲ್ಲಿ 400 ಜನಸಂಖ್ಯೆ ಇತ್ತು. ಶಾಶ್ವತ ನಿವಾಸಿಗಳ ಹೊರತಾಗಿ, ಹೋಟೆಲ್‌ಗಳು ಮತ್ತು ಹೋಂಸ್ಟೇಗಳಲ್ಲಿ ಇತರರು ಇಲ್ಲಿ ತಂಗಿದ್ದರು. ಪ್ರವಾಹದಲ್ಲಿ ಅರ್ಧದಷ್ಟು ಗ್ರಾಮ ಕೊಚ್ಚಿ ಹೋಗಿದೆ. ಧರಾಲಿಯಲ್ಲಿ ಯಾರೂ ಜೀವಂತವಾಗಿ ಬದುಕುಳಿದಿರುವ ಸಾಧ್ಯತೆ ಇಲ್ಲ ಎಂದು ವಿಪತ್ತು ಪೀಡಿತ ಪ್ರದೇಶದ ಜನರು ಹೇಳುತ್ತಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ