ವಾಯುನೆಲೆಯ ಮೇಲೆ ದಾಳಿಗೆ ಸಂಚು, ವಡೋದರಾ ವಾಯುನೆಲೆಯ ಫೋಟೋ ಪಾಕಿಸ್ತಾನಕ್ಕೆ ಕಳುಹಿಸಿದ್ದ ಶಂಕಿತ ಉಗ್ರ, ಜೈಶ್ ಸೇರಲು ಪ್ಲ್ಯಾನ್

ವಡೋದರಾ ವಾಯುನೆಲೆ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಜೈಶ್-ಎ-ಮೊಹಮ್ಮದ್ ಶಂಕಿತ ಉಗ್ರ ಮೊಹಮ್ಮದ್ ಸಹರುಲ್ ಇಸ್ಲಾಂ ಬಂಧನ. ಈತ ವಾಯುನೆಲೆಯ ಫೋಟೋಗಳನ್ನು ಪಾಕಿಸ್ತಾನಕ್ಕೆ ಕಳುಹಿಸಿದ್ದಾನೆ. ಪಾಕಿಸ್ತಾನದ ಹ್ಯಾಂಡ್ಲರ್‌ಗಳ ಸಂಪರ್ಕದಲ್ಲಿದ್ದು, ಭಯೋತ್ಪಾದಕ ಸಂಘಟನೆ ಸೇರುವ ಉದ್ದೇಶ ಹೊಂದಿದ್ದ. ಎಟಿಎಸ್ ತನಿಖೆಯಲ್ಲಿ ಹಲವು ಆಘಾತಕಾರಿ ಸಂಗತಿಗಳು ಬಯಲಿಗೆ ಬಂದಿದ್ದು, UAPA ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ವಾಯುನೆಲೆಯ ಮೇಲೆ ದಾಳಿಗೆ ಸಂಚು, ವಡೋದರಾ ವಾಯುನೆಲೆಯ ಫೋಟೋ ಪಾಕಿಸ್ತಾನಕ್ಕೆ ಕಳುಹಿಸಿದ್ದ ಶಂಕಿತ ಉಗ್ರ, ಜೈಶ್ ಸೇರಲು ಪ್ಲ್ಯಾನ್
ಶಂಕಿತ ಉಗ್ರ
Image Credit source: NDTV

Updated on: Nov 29, 2026 | 8:48 AM

ವಡೋದರಾ, ನವೆಂಬರ್ 29: ಗುಜರಾತ್‌ನ ವಡೋದರಾದಲ್ಲಿ ಬಂಧಿತನಾಗಿರುವ ಜೈಶ್-ಎ-ಮೊಹಮ್ಮದ್ ಸಂಘಟನೆಯ ಶಂಕಿತ ಉಗ್ರನ ಕುರಿತು ತನಿಖೆಯಲ್ಲಿ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಬಂಧಿತ ಮೊಹಮ್ಮದ್ ಸಹರುಲ್ ಇಸ್ಲಾಂ, ವಡೋದರಾ ಭಾರತೀಯ ವಾಯುಪಡೆಯ ನೆಲೆಯ ಫೋಟೋ ಮತ್ತು ವಿಡಿಯೋಗಳನ್ನು ಪಾಕಿಸ್ತಾನಕ್ಕೆ ಕಳುಹಿಸಿದ್ದಾನೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಅಲ್ಲದೆ, ಪಾಕಿಸ್ತಾನ ಮೂಲದ ವ್ಯಕ್ತಿಗಳ ಸಂಪರ್ಕದಲ್ಲಿದ್ದು, ಭಯೋತ್ಪಾದಕ ಸಂಘಟನೆ ಸೇರಲು ಪಾಕಿಸ್ತಾನಕ್ಕೆ ತೆರಳುವ ಆಸೆ ಹೊಂದಿದ್ದ ಎನ್ನಲಾಗಿದೆ.

ವಾಯುನೆಲೆಯ ಮೇಲೆ ದಾಳಿಗೆ ಸಂಚು?

ಅಸ್ಸಾಂನ ಕರೀಂಗಂಜ್ ಜಿಲ್ಲೆಯ 22 ವರ್ಷದ ಮೊಹಮ್ಮದ್ ಸಹರುಲ್ ಇಸ್ಲಾಂನನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ವಡೋದರಾ ಬಳಿ ಬಂಧಿಸಿದೆ. ಆತ ಭಾರತೀಯ ವಾಯುಪಡೆಯ ನೆಲೆಯ ಸುತ್ತಮುತ್ತ ಸಾಮಾನ್ಯ ಪ್ರವಾಸಿಯಂತೆ ಓಡಾಡಿ, ಹೊರಗಿನಿಂದ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರೀಕರಿಸಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

Loading...

ಈ ದೃಶ್ಯಗಳನ್ನು ಪಾಕಿಸ್ತಾನದ ಮೊಬೈಲ್ ಸಂಖ್ಯೆಗೆ ಕಳುಹಿಸಿರುವ ಶಂಕೆಯಿದೆ. ಆತನ ಮೊಬೈಲ್ ಫೋನ್ ಮತ್ತು ಇತರ ಡಿಜಿಟಲ್ ದಾಖಲೆಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ವಾಯುನೆಲೆಯ ಮೇಲೆ ಏಕಾಂಗಿಯಾಗಿ ದಾಳಿ ನಡೆಸಲು ಯೋಜನೆ ರೂಪಿಸಿದ್ದ ಆರೋಪವೂ ಆತನ ಮೇಲಿದೆ.

ಪಾಕಿಸ್ತಾನದ ಹ್ಯಾಂಡ್ಲರ್ ಜೊತೆ ಸಂಪರ್ಕ

ವಿಚಾರಣೆ ವೇಳೆ ಪಾಕಿಸ್ತಾನ ಮೂಲದ ವ್ಯಕ್ತಿಯೊಬ್ಬನ ಸಂಪರ್ಕದಲ್ಲಿದ್ದುದಾಗಿ ಆತ ಹೇಳಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದು ವರ್ಷಕ್ಕೂ ಹೆಚ್ಚು ಕಾಲ ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್ ಮೂಲಕ ಆತನೊಂದಿಗೆ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಸೇರುವುದಾಗಿ ಪ್ರಮಾಣವಚನ ಸ್ವೀಕರಿಸಿದ್ದಾಗಿ ತನಿಖಾಧಿಕಾರಿಗಳ ಮುಂದೆ ಹೇಳಿರುವುದಾಗಿಯೂ ವರದಿಯಾಗಿದೆ.

ಎಕೆ-47 ಮಾದರಿಯ ರೈಫಲ್, 23 ಗುಂಡುಗಳು ವಶ

ಬಂಧನದ ವೇಳೆ ಆತನಿಂದ ಎಕೆ-47 ಮಾದರಿಯ ರೈಫಲ್, ಎರಡು ಖಾಲಿ ಮ್ಯಾಗಜೀನ್‌ಗಳು, 23 ಜೀವಂತ ಗುಂಡುಗಳು, ಜೈಶ್ ಸಂಘಟನೆಯ ಧ್ವಜ, ಎರಡು ಮೊಬೈಲ್ ಫೋನ್‌ಗಳು ಮತ್ತು ಸುಮಾರು 20 ಸಾವಿರ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗುಜರಾತ್ ಎಟಿಎಸ್ ತಿಳಿಸಿದೆ.

ತನಿಖೆಯ ಪ್ರಕಾರ, ದಾಹೋದ್ ಪ್ರದೇಶದಲ್ಲಿ ರಹಸ್ಯವಾಗಿ ಇರಿಸಲಾಗಿದ್ದ ಶಸ್ತ್ರಾಸ್ತ್ರವನ್ನು ಆತ ಪಡೆದುಕೊಂಡಿದ್ದಾನೆ ಎನ್ನಲಾಗಿದೆ. ಆ ಶಸ್ತ್ರಾಸ್ತ್ರವನ್ನು ಅಲ್ಲಿ ಯಾರು ಇರಿಸಿದ್ದರು ಎಂಬುದನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಲಷ್ಕರ್ ಸೇರಿ ಸರಿಯಾಗಿ ಒಂದು ವರ್ಷಕ್ಕೆ ಅಂತ್ಯ, ಕುಲ್ಗಾಮ್ ಎನ್‌ಕೌಂಟರ್‌ನಲ್ಲಿ ಮೋಸ್ಟ್ ವಾಂಟೆಡ್ ಉಗ್ರ ಲತೀಫ್ ಭಟ್ ಹತ್ಯೆ

ಫೋಟೋಗಳಲ್ಲಿ ಕೆಂಪು ಗುರುತು ಪತ್ತೆ

ಆತನ ಮೊಬೈಲ್ ಫೋನ್ ಪರಿಶೀಲಿಸಿದಾಗ ವಾಯುನೆಲೆಯ ಪ್ರವೇಶ ದ್ವಾರಗಳ ಫೋಟೋಗಳು ಪತ್ತೆಯಾಗಿವೆ. ಕೆಲವು ಫೋಟೋಗಳಲ್ಲಿ ಕೆಂಪು ಬಣ್ಣದ ಕ್ರಾಸ್ ಗುರುತುಗಳನ್ನು ಹಾಕಲಾಗಿತ್ತು ಎಂದು ಎಟಿಎಸ್ ಹೇಳಿದೆ. ಇವುಗಳನ್ನು ಸಂಭಾವ್ಯ ಗುರಿಗಳೆಂದು ಆತ ಗುರುತಿಸಿದ್ದ ಎನ್ನುವುದು ತನಿಖಾಧಿಕಾರಿಗಳ ಆರೋಪ. ಇದಲ್ಲದೆ, ಎಕೆ-47 ಮಾದರಿಯ ರೈಫಲ್ ಬಳಸುವ ತರಬೇತಿ ವಿಡಿಯೋಗಳು, ಗೂಗಲ್ ಮ್ಯಾಪ್ ಚಿತ್ರಗಳು ಮತ್ತು ವಾಟ್ಸಾಪ್ ಸಂಭಾಷಣೆಗಳೂ ಪತ್ತೆಯಾಗಿವೆ.

 

ಅಸ್ಸಾಂ, ಉತ್ತರ ಪ್ರದೇಶದಲ್ಲೂ ತನಿಖೆ

ಸಹರುಲ್ ಇಸ್ಲಾಂ ಉತ್ತರ ಪ್ರದೇಶದ ದಿಯೋಬಂದ್‌ನ ಮದರಸಾದಲ್ಲಿ ಸುಮಾರು ಒಂದು ವರ್ಷ ಅಧ್ಯಯನ ಮಾಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಜಿಯಾಬಾದ್‌ನ ವ್ಯಕ್ತಿಯೊಬ್ಬನ ಮೂಲಕ ಆತನಿಗೆ ಕೆಲವು ಸಾಹಿತ್ಯ ದೊರೆತಿತ್ತು ಎಂಬ ಮಾಹಿತಿಯೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಹೀಗಾಗಿ ಗುಜರಾತ್ ಎಟಿಎಸ್, ಅಸ್ಸಾಂ ಮತ್ತು ಉತ್ತರ ಪ್ರದೇಶದ ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ. ಆತನಿಗೆ ಬೇರೆ ಯಾರಾದರೂ ಸಹಾಯ ಮಾಡಿದ್ದಾರೆಯೇ, ಶಸ್ತ್ರಾಸ್ತ್ರವನ್ನು ಯಾರು ಪೂರೈಸಿದರು ಮತ್ತು ಈ ಜಾಲದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.

14 ದಿನಗಳ ಎಟಿಎಸ್ ವಶಕ್ಕೆ ಆರೋಪಿ

ಬಂಧಿತನನ್ನು ವಡೋದರಾ ಜಿಲ್ಲೆಯ ವಾಘೋಡಿಯಾ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯವು ಆತನನ್ನು 14 ದಿನಗಳ ಕಾಲ ಗುಜರಾತ್ ಎಟಿಎಸ್ ವಶಕ್ಕೆ ನೀಡಿದೆ. ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಸೇರಿದಂತೆ ವಿವಿಧ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಗಳ ಕುರಿತು ತನಿಖೆ ಮುಂದುವರೆದಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us