ಜಮ್ಮು: ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ತ್ರಿಕೂಟ ಬೆಟ್ಟಗಳ ಮೇಲಿರುವ ವೈಷ್ಣೋದೇವಿ ದೇವಸ್ಥಾನಕ್ಕೆ (Vaishno Devi Temple) ಶುಕ್ರವಾರ ಸಂಜೆ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾತಾ ವೈಷ್ಣೋ ದೇವಿ (Vaishno Devi Yatra) ದೇಗುಲ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನ್ಶುಲ್ ಗರ್ಗ್ ಈ ಬಗ್ಗೆ ಮಾಹಿತಿ ನೀಡಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಪ್ರವಾಹದಿಂದ ಇದುವರೆಗೂ ಯಾವುದೇ ಸಾವು-ನೋವು, ಹಾನಿ ಸಂಭವಿಸಿಲ್ಲ ಎಂದಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಹಲವಾರು ವಿಡಿಯೋಗಳಲ್ಲಿ ವೈಷ್ಣೋದೇವಿ ಸುತ್ತಮುತ್ತಲೂ ಪ್ರವಾಹದಂತಹ ಪರಿಸ್ಥಿತಿ ಉಂಟಾಗಿರುವುದನ್ನು ನೋಡಬಹುದು. ವೈಷ್ಣೋದೇವಿ ದೇವಸ್ಥಾನಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಮೂಲ ಶಿಬಿರವಾದ ಕತ್ರಾದಲ್ಲಿ ಶುಕ್ರವಾರ ಸಂಜೆ ಹಲವು ಗಂಟೆಗಳ ಕಾಲ ಭಾರೀ ಮಳೆ ಸುರಿದಿದ್ದು, ಇಂದು ಬೆಳಿಗ್ಗೆ 5 ಗಂಟೆಯವರೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಯಾತ್ರೆಯನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇದನ್ನೂ ಓದಿ: ಜಮ್ಮು ಕಾಶ್ಮೀರ: ವೈಷ್ಣೋದೇವಿ ದರ್ಶನಕ್ಕೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್‌ನಲ್ಲಿ ಆಕಸ್ಮಿಕ ಬೆಂಕಿ, ನಾಲ್ವರು ಸಜೀವ ದಹನ
ಭಾರೀ ಮಳೆ ಪ್ರಾರಂಭವಾದಾಗ ಸಾವಿರಾರು ಯಾತ್ರಾರ್ಥಿಗಳು ದೇವಾಲಯದಲ್ಲಿಯೇ ಇದ್ದರು. ಮಧ್ಯರಾತ್ರಿಯವರೆಗೆ ಮಳೆ ಮುಂದುವರೆಯಿತು ಎಂದು ಅಧಿಕಾರಿ ಹೇಳಿದ್ದಾರೆ. ಮಳೆಯಿಂದಾಗಿ ಹಿಮಕೋಟಿ (ಬ್ಯಾಟರಿ ಕಾರ್) ಟ್ರ್ಯಾಕ್ ಅನ್ನು ಬಂದ್ ಮಾಡಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಕತ್ರಾದಿಂದ ಯಾತ್ರೆಯನ್ನು ನಿಲ್ಲಿಸಲಾಗಿದೆ.
#WATCH | J&K: Heavy rainfall triggers flash floods near Vaishno Devi Shrine in Katra town in Reasi district pic.twitter.com/NhgxNjbV9x
— ANI (@ANI) August 19, 2022
ಯಾವುದೇ ತುರ್ತು ಪರಿಸ್ಥಿತಿಗೆ ಸ್ಪಂದಿಸಲು ವಿಪತ್ತು ನಿರ್ವಹಣಾ ತಂಡಗಳು ಮತ್ತು ವೈದ್ಯಕೀಯ ಘಟಕಗಳನ್ನು ಜಾಗರೂಕತೆಯಿಂದ ಇರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ