ಮಳೆಯಿಂದ ಸ್ಥಗಿತಗೊಂಡಿದ್ದ ವೈಷ್ಣೋ ದೇವಿ ಯಾತ್ರೆ ನಾಳೆಯಿಂದ ಪುನರಾರಂಭ
ಜಮ್ಮು ಮತ್ತು ಕಾಶ್ಮೀರದಲ್ಲಿ ಮಳೆ ಹೆಚ್ಚಾಗಿದೆ. ಭೂಕುಸಿತ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಸ್ಥಗಿತಗೊಂಡಿದ್ದ ವೈಷ್ಣೋ ದೇವಿ ಯಾತ್ರೆ ಸೆಪ್ಟೆಂಬರ್ 17ರಂದು ಪುನರಾರಂಭಗೊಳ್ಳಲಿದೆ. ಕಳೆದ ವಾರವೇ ವೈಷ್ಣೋದೇವಿ ಯಾತ್ರೆ ಮರು ಆರಂಭವಾಗಬೇಕಿತ್ತು. ಆದರೆ, ಹವಾಮಾನ ವೈಪರೀತ್ಯದಿಂದಾಗಿ ಏನಾದರೂ ಸಮಸ್ಯೆಯಾದರೆ ಮಾತ್ರ ಈ ನಿರ್ಧಾರದಲ್ಲಿ ಬದಲಾವಣೆಯಾಗಲಿದೆ ಎಂದು ದೇವಾಲಯ ಮಂಡಳಿ ತಿಳಿಸಿದೆ.

ಶ್ರೀನಗರ, ಸೆಪ್ಟೆಂಬರ್ 16: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ತ್ರಿಕೂಟ ಬೆಟ್ಟಗಳ ಮೇಲಿರುವ ಮಾತಾ ವೈಷ್ಣೋ ದೇವಿ ದೇವಾಲಯಕ್ಕೆ (Vaishno Devi Yatra) ವೈಷ್ಣೋದೇವಿ ಯಾತ್ರೆ ಸೆಪ್ಟೆಂಬರ್ 17ರಂದು (ಬುಧವಾರ) ಪುನರಾರಂಭಗೊಳ್ಳಲಿದೆ. ವೈಷ್ಣೋದೇವಿ ಯಾತ್ರೆಯ ಪುನರಾರಂಭವು ಅನುಕೂಲಕರ ಹವಾಮಾನ ಪರಿಸ್ಥಿತಿಗಳನ್ನು ಅವಲಂಬಿಸಿರುತ್ತದೆ ಎಂದು ದೇವಾಲಯ ಮಂಡಳಿ ತಿಳಿಸಿದೆ. ಆಗಸ್ಟ್ 26ರಂದು ತೀರ್ಥಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಕೆಲವೇ ಗಂಟೆಗಳ ಮೊದಲು ಸಂಭವಿಸಿದ ದೊಡ್ಡ ಭೂಕುಸಿತದಿಂದಾಗಿ ದೇವಾಲಯಕ್ಕೆ ಹೋಗುವ ಮಾರ್ಗದಲ್ಲಿ ಅಡಚಣೆಯಾಯಿತು.
ಈ ಭೀಕರ ಭೂಕುಸಿತದಲ್ಲಿ 34 ಯಾತ್ರಿಕರು ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿದ್ದರು. ಹೀಗಾಗಿ, ಸುರಕ್ಷತಾ ಕಾರಣಗಳಿಗಾಗಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ಹಿಂದೆ, ದೇವಾಲಯ ಮಂಡಳಿಯು ಸೆಪ್ಟೆಂಬರ್ 14ರಂದು ಯಾತ್ರೆಯನ್ನು ಪುನರಾರಂಭಿಸಲು ಯೋಜಿಸಿತ್ತು. ಆದರೆ, ಮಾರ್ಗದಲ್ಲಿ ಮತ್ತು ಗರ್ಭಗುಡಿಯಲ್ಲಿ ನಿರಂತರ ಮಳೆ ಸುರಿದ ಕಾರಣ ಸುರಕ್ಷತಾ ಕಾಳಜಿ ಉಂಟಾಗಿ, ಮಂಡಳಿಯು ಯಾತ್ರೆಯ ಆರಂಭದ ಅವಧಿಯನ್ನು ವಿಸ್ತರಿಸಬೇಕಾಯಿತು. ಈ ನಿರ್ಧಾರವು ಯಾತ್ರೆಯನ್ನು ಪುನರಾರಂಭಿಸಲು ಉತ್ಸುಕರಾಗಿದ್ದ ಕೆಲವು ಭಕ್ತರಿಂದ ಪ್ರತಿಭಟನೆಗೆ ಕಾರಣವಾಯಿತು.
ಇದನ್ನೂ ಓದಿ: ವೈಷ್ಣೋದೇವಿ ಭೂಕುಸಿತದಲ್ಲಿ 32 ಜನ ಸಾವು; ಮೃತರ ಕುಟುಂಬಕ್ಕೆ ಪ್ರಧಾನಿ ಮೋದಿ ಸಂತಾಪ
ಯಾತ್ರಿಕರ ಗುಂಪೊಂದು ಕತ್ರಾ ಮೂಲ ಶಿಬಿರದಲ್ಲಿ ಪ್ರತಿಭಟನೆ ನಡೆಸಿ, ಯಾತ್ರೆಯನ್ನು ತಕ್ಷಣವೇ ಪುನರಾರಂಭಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿತು. ಕೆಲವರು ದೇವಾಲಯ ಮಂಡಳಿಯ ನಿರ್ದೇಶನವನ್ನು ಧಿಕ್ಕರಿಸಿ ಭದ್ರತಾ ರೇಖೆಯನ್ನು ಮುರಿದು ಯಾತ್ರೆಯನ್ನು ಮುಂದುವರಿಸಲು ಪ್ರಯತ್ನಿಸಿದರು. ಈ ಪ್ರತಿಭಟನೆಗಳಿಗೆ ಪ್ರತಿಕ್ರಿಯೆಯಾಗಿ ಸುರಕ್ಷತೆಯು ಪ್ರಮುಖ ಆದ್ಯತೆಯಾಗಿದೆ ಮತ್ತು ಹವಾಮಾನ ಪರಿಸ್ಥಿತಿಗಳು ಸುಧಾರಿಸಿದ ನಂತರವೇ ಯಾತ್ರೆ ಪುನರಾರಂಭಗೊಳ್ಳುತ್ತದೆ ಎಂದು ದೇವಾಲಯ ಮಂಡಳಿ ಸ್ಪಷ್ಟಪಡಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
