Nana Patole: ಕಾಂಗ್ರೆಸ್ ಕಾರ್ಯಕರ್ತ ನಾನಾ ಪಟೋಲೆಯ ಪಾದ ತೊಳೆಯುತ್ತಿರುವ ವಿಡಿಯೋ ವೈರಲ್; ಬಿಜೆಪಿ ಟೀಕೆ

|

Updated on: Jun 18, 2024 | 9:47 PM

ಕಾಂಗ್ರೆಸ್ ಕಾರ್ಯಕರ್ತನೊಬ್ಬ ಕಾಂಗ್ರೆಸ್ ಪಕ್ಷದ ಮುಖಂಡ ನಾನಾ ಪಟೋಲೆ ಅವರ ಪಾದಗಳನ್ನು ತೊಳೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ನಾನಾ ಪಟೋಲೆ ಅವರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಅಲ್ಲದೆ, ಕಾಂಗ್ರೆಸ್ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದೆ.

Nana Patole: ಕಾಂಗ್ರೆಸ್ ಕಾರ್ಯಕರ್ತ ನಾನಾ ಪಟೋಲೆಯ ಪಾದ ತೊಳೆಯುತ್ತಿರುವ ವಿಡಿಯೋ ವೈರಲ್; ಬಿಜೆಪಿ ಟೀಕೆ
ನಾನಾ ಪಟೋಲೆ
Follow us on

ಮುಂಬೈ: ಕಾಂಗ್ರೆಸ್ ಕಾರ್ಯಕರ್ತನೊಬ್ಬ ಪಕ್ಷದ ನಾಯಕ ನಾನಾ ಪಟೋಲೆಯ (Nana Patole) ಪಾದಗಳನ್ನು ತೊಳೆಯುತ್ತಿರುವ ವಿಡಿಯೋ ವೈರಲ್ (Video Viral) ಆಗಿದೆ. ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಈ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಕಾಂಗ್ರೆಸ್ ತಮ್ಮ ಪಕ್ಷದ ಕಾರ್ಯಕರ್ತರನ್ನು ಅವಮಾನಿಸಿದೆ ಎಂದು ಬಿಜೆಪಿ (BJP) ಆರೋಪಿಸಿದರೆ, ನಾನಾ ಪಟೋಲೆ ಅವರು ಆಡಳಿತ ಪಕ್ಷವನ್ನು ದೂಷಿಸಿದ್ದಾರೆ. ಈ ಪ್ರದೇಶದಲ್ಲಿ ನಲ್ಲಿಯ ಸಂಪರ್ಕದ ಕೊರತೆಯಿಂದಾಗಿ ಕಾಂಗ್ರೆಸ್ ಕಾರ್ಯಕರ್ತ ನನ್ನ ಪಾದಗಳನ್ನು ತೊಳೆಯಬೇಕಾಯಿತು ಎಂದು ಅವರು ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ನಾನಾ ಪಟೋಲೆ ವಡೇಗಾಂವ್‌ಗೆ ಭೇಟಿ ನೀಡಿದಾಗ ಸೋಮವಾರ ಈ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾಂಗ್ರೆಸ್ ಮುಖಂಡ ನಾನಾ ಪಟೋಲೆ ಕಾರಿನಿಂದ ಹೊರಬರುತ್ತಿದ್ದಂತೆ ಕಾರ್ಮಿಕರೊಬ್ಬರು ನಾನಾ ಪಟೋಲೆ ಅವರ ಪಾದಗಳಿಗೆ ನೀರು ಸುರಿದು ತಮ್ಮ ಕೈಗಳಿಂದ ಸ್ವಚ್ಛಗೊಳಿಸುತ್ತಿರುವುದನ್ನು ನೋಡಬಹುದು.

ಹಲವಾರು ಬಿಜೆಪಿ ನಾಯಕರು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ನಾನಾ ಪಟೋಲೆ ತಮ್ಮ ಪಕ್ಷದ ಕಾರ್ಯಕರ್ತರನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ಇದನ್ನೂ ಓದಿ: ರಾಷ್ಟ್ರಪತಿಗೆ ಮಾಡಿದ ಅವಮಾನ; ರಾಮ ಮಂದಿರ ಶುದ್ಧೀಕರಣ ಹೇಳಿಕೆಗೆ ಪ್ರಧಾನಿ ಮೋದಿ ಅಸಮಾಧಾನ

ಬಿಜೆಪಿ ಮುಂಬೈನ ಎಕ್ಸ್ ಹ್ಯಾಂಡಲ್ ಈ ವಿಡಿಯೋವನ್ನು ಶೇರ್ ಮಾಡಿದ್ದು, “ಇದು ಎಂತಹ ದೌರ್ಭಾಗ್ಯ. ಚುನಾವಣೆಯಲ್ಲಿ ಸ್ಪರ್ಧಿಸಲು ಬಳಸಿಕೊಳ್ಳುವ ಕಾರ್ಯಕರ್ತರನ್ನು ಕಾಂಗ್ರೆಸ್ ಪದೇ ಪದೇ ಅವಮಾನಿಸುತ್ತಿದೆ” ಎಂದು ಹೇಳಿದೆ.

ಕಾರ್ಮಿಕನೊಬ್ಬ ತನ್ನ ಕೊಳಕಾದ ಕಾಲನ್ನು ತೊಳೆಯುವಂತೆ ಮಾಡಿದ ನಾನಾ ಪಟೋಲೆಯನ್ನು ಬಿಜೆಪಿ ಖಂಡಿಸಿದೆ. ಈ ನಡವಳಿಕೆಯು ಕಾಂಗ್ರೆಸ್ ಪಕ್ಷದ ನಿಜವಾದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆಯೇ? ಎಂದು ಪ್ರಶ್ನಿಸಿದೆ.

ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು, “ಆಘಾತಕಾರಿ ವೀಡಿಯೊದಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಮಹಾರಾಷ್ಟ್ರದ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಅವರ ಪಾದಗಳನ್ನು ತೊಳೆಯುತ್ತಿರುವುದನ್ನು ನೋಡಬಹುದು. ಅದೇ ಪಕ್ಷವು ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ದಲಿತರಿಗೆ ಸುಳ್ಳು ಹೇಳುತ್ತಿದೆ.” ಎಂದು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರವನ್ನು ಶುದ್ಧೀಕರಿಸುತ್ತೇವೆ: ನಾನಾ ಪಟೋಲೆ

ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ನಾನಾ ಪಟೋಲೆ, ಸಂತ ಗಜಾನನ ಮಹಾರಾಜರ ಪವಿತ್ರ ಸಾಂಕೇತಿಕ ಹೆಜ್ಜೆಗುರುತುಗಳ ಮೆರವಣಿಗೆಯಲ್ಲಿ ಭಾಗವಹಿಸಿದ ನಂತರ ನನ್ನ ಕಾಲುಗಳು ಕೆಸರಾಗಿತ್ತು. “ನಾನು ನಡೆಯುತ್ತಿರುವ ಯಾತ್ರೆಯ ಸಂದರ್ಭದಲ್ಲಿ ಪಾಲ್ಖಿ ಇರಿಸಲಾದ ಮೈದಾನದಲ್ಲಿ ಗಜಾನನ ಮಹಾರಾಜರ ಆಶೀರ್ವಾದ ಪಡೆಯಲು ಅಕೋಲಾಗೆ ಹೋಗಿದ್ದೆ. ನೆಲವು ಕೆಸರಾಗಿದ್ದರಿಂದ ನನ್ನ ಪಾದಗಳು ಮಣ್ಣಾಯಿತು. ಆದ್ದರಿಂದ ನಮ್ಮ ಕಾರ್ಯಕರ್ತ ಕಾಲಿಗೆ ನೀರು ಸುರಿದಿದ್ದಾನೆ. ಅಲ್ಲಿ ನಲ್ಲಿ ಇರಲಿಲ್ಲ. ಪ್ರತಿ ಮನೆಗೂ ನೀರು ಎಂಬ ಬಿಜೆಪಿಯ ಅಭಿಯಾನದಂತೆ ಅಲ್ಲಿ ನಲ್ಲಿ ಇದ್ದಿದ್ದರೆ ನಾನು ಅದರಲ್ಲೇ ಕಾಲು ತೊಳೆದುಕೊಳ್ಳುತ್ತಿದ್ದೆ” ಎಂದು ಪಟೋಲೆ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ