Bihar Bridge Collapse: ಬಿಹಾರದ ಸೇತುವೆ ಕುಸಿತಕ್ಕೆ ನಾವು ಹೊಣೆಯಲ್ಲ; ಕೇಂದ್ರ ಸಚಿವ ನಿತಿನ್ ಗಡ್ಕರಿ ಸ್ಪಷ್ಟನೆ

Nitin Gadkari: ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಸೇತುವೆಯೊಂದು ಉದ್ಘಾಟನೆಗೂ ಮೊದಲೇ ಕುಸಿದು ಬಿದ್ದಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇದಕ್ಕೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಸ್ಪಷ್ಟನೆ ನೀಡಿದ್ದಾರೆ.

Bihar Bridge Collapse: ಬಿಹಾರದ ಸೇತುವೆ ಕುಸಿತಕ್ಕೆ ನಾವು ಹೊಣೆಯಲ್ಲ; ಕೇಂದ್ರ ಸಚಿವ ನಿತಿನ್ ಗಡ್ಕರಿ ಸ್ಪಷ್ಟನೆ
ನಿತಿನ್ ಗಡ್ಕರಿ
Follow us
|

Updated on: Jun 18, 2024 | 11:05 PM

ನವದೆಹಲಿ: ಬಿಹಾರದ (Bihar Bridge Collapse) ಅರಾರಿಯಾ ಜಿಲ್ಲೆಯಲ್ಲಿ ಉದ್ಘಾಟನೆಗೆ ಸಿದ್ಧವಾಗಿದ್ದ ಸೇತುವೆ ಕುಸಿದಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಇಲ್ಲಿ ಕುಸಿದಿರುವ ಸೇತುವೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಡಿಯಲ್ಲಿ ನಿರ್ಮಿಸಲಾಗಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಇಂದು ಸಂಜೆ ಸ್ಪಷ್ಟನೆ ನೀಡಿದ್ದಾರೆ. ಬಿಹಾರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಈ ಸೇತುವೆಯ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡಿದೆ ಎಂದು ಗಡ್ಕರಿ ಹೇಳಿದ್ದಾರೆ.

“ಬಿಹಾರದ ಅರಾರಿಯಾದಲ್ಲಿ ಕುಸಿದ ಸೇತುವೆಯನ್ನು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ ಅಡಿಯಲ್ಲಿ ನಿರ್ಮಿಸಲಾಗಿಲ್ಲ. ಅದರ ಕೆಲಸವು ಬಿಹಾರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ನಡೆಯುತ್ತಿದೆ” ಎಂದು ನಿತಿನ್ ಗಡ್ಕರಿ ಅವರ ಕಚೇರಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

ಇದನ್ನೂ ಓದಿ: Viral Video: ಮೆಟ್ರೋದಲ್ಲಿ ಬೀಡಿ ಸೇದುತ್ತಾ ಹಾಯಾಗಿ ಪ್ರಯಾಣಿಸಿದ ವ್ಯಕ್ತಿ: ವೀಡಿಯೊ ವೈರಲ್‌

183 ಮೀಟರ್ ಉದ್ದದ ಸೇತುವೆಯ ಕಾಮಗಾರಿ ಪೂರ್ಣಗೊಂಡು, ಶೀಘ್ರದಲ್ಲೇ ಸಂಚಾರಕ್ಕೆ ತೆರೆದುಕೊಳ್ಳುವ ನಿರೀಕ್ಷೆಯಿತ್ತು. ಆದರೆ, ಇಂದು ಸಂಜೆ ಆ ಸೇತುವೆ ಕುಸಿದುಬಿದ್ದಿತ್ತು. 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಸೇತುವೆ ನೆಲಸಮವಾಗಿರುವುದನ್ನು ಹಲವು ರಾಜಕೀಯ ನಾಯಕರು ಹಾಗೂ ಸಾರ್ವಜನಿಕರು ಟೀಕಿಸಿದ್ದರು. ಇದು 2023ರಿಂದ ಬಿಹಾರದಲ್ಲಿ 7ನೇ ಮತ್ತು ಈ ವರ್ಷದ 2ನೇ ಸೇತುವೆ ಕುಸಿತವಾಗಿದೆ ಎಂಬುದು ಗಮನಾರ್ಹ ಸಂಗತಿ.

ಈ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿರಲಿಲ್ಲ. ಹೀಗಾಗಿ, ಸೇತುವೆ ಕುಸಿತದ ವೇಳೆ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಅರಾರಿಯಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಇನಾಯತ್ ಖಾನ್ ಖಚಿತಪಡಿಸಿದ್ದಾರೆ. ನದಿಯ ಹರಿವಿನಲ್ಲಿ ಆಗಾಗ ಬದಲಾವಣೆಗಳು ಉಂಟಾಗಿದ್ದು ಈ ಘಟನೆಗೆ ಕಾರಣವಾಗಿವೆ ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಸ್ಥಳೀಯರು ಸೇತುವೆಯ ಎರಡು ಪಿಲ್ಲರ್‌ಗಳ ನಡುವೆ ನದಿಯ ಮಾರ್ಗವನ್ನು ಬದಲಾಯಿಸಲು ಪ್ರಯತ್ನಿಸಿದರು. ಅದು ಕೂಡ ಕುಸಿತಕ್ಕೆ ಕಾರಣವಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Nana Patole: ಕಾಂಗ್ರೆಸ್ ಕಾರ್ಯಕರ್ತ ನಾನಾ ಪಟೋಲೆಯ ಪಾದ ತೊಳೆಯುತ್ತಿರುವ ವಿಡಿಯೋ ವೈರಲ್; ಬಿಜೆಪಿ ಟೀಕೆ

ಬಿಹಾರದಲ್ಲಿ ಮಾರ್ಚ್‌ನಲ್ಲಿ, ಸುಪೌಲ್ ಜಿಲ್ಲೆಯಲ್ಲಿ ಕೋಸಿ ನದಿಯ ಮೇಲೆ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದು, ಒಬ್ಬ ಸಾವು ಮತ್ತು ಹತ್ತು ಮಂದಿ ಗಾಯಗೊಂಡಿದ್ದರು. ಕಳೆದ ವರ್ಷ, ಪುರ್ನಿಯಾದ ಬೈಸಿ ಬ್ಲಾಕ್‌ನಲ್ಲಿ ದುಮುಹ್ನಿ ನದಿಯ ಮೇಲೆ 20.1 ಮೀಟರ್ ನಿರ್ಮಾಣ ಹಂತದ ಸೇತುವೆಯು ಕಾಂಕ್ರೀಟ್ ಕೆಲಸ ಮುಗಿದ ಸ್ವಲ್ಪ ಸಮಯದ ನಂತರ ಸೇತುವೆ ಕುಸಿದಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ