
ಕರೂರ್, ಸೆಪ್ಟೆಂಬರ್ 28: ತಮಿಳುನಾಡಿನ ಕರೂರಿನಲ್ಲಿ ಶನಿವಾರ ನಟ ಹಾಗೂ ಟಿವಿಕೆ ಮುಖ್ಯಸ್ಥ ವಿಜಯ್ (Vijay Rally) ಪ್ರಚಾರ ರ‍್ಯಾಲಿಯನ್ನು ಆಯೋಜಿಸಿದ್ದರು. ಈ ವೇಳೆ ವಿಜಯ್ನನ್ನು ನೋಡಲು ಹತ್ತಾರು ಸಾವಿರ ಜನ ಸೇರಿದ್ದರು. ವಿಜಯ್ ಭಾಷಣ ಆರಂಭಿಸುತ್ತಿದ್ದಂತೆ ಕಾಲ್ತುಳಿತ ಉಂಟಾಗಿ ಹಲವು ಜನ ಮೂರ್ಛೆ ತಪ್ಪಿದ್ದರು. ತಕ್ಷಣ ಅವರನ್ನು ಆ್ಯಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಜಯ್ ಕೂಡ ಅರ್ಧದಲ್ಲೇ ಭಾಷಣ ಮುಗಿಸಿ ಆ ಸ್ಥಳದಿಂದ ಹೊರಟಿದ್ದರು. ಕಾಲ್ತುಳಿತದಿಂದ ಇದುವರೆಗೂ ಚಿಕ್ಕ ಮಕ್ಕಳು, ಮಹಿಳೆಯರು ಸೇರಿದಂತೆ 39 ಜನರು ಸಾವನ್ನಪ್ಪಿದ್ದಾರೆ. ಇನ್ನೂ ಹಲವರ ಸ್ಥಿತಿ ಗಂಭೀರವಾಗಿದೆ. ನಿನ್ನೆ ಮಧ್ಯರಾತ್ರಿಯೇ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಕರೂರಿನ ಆಸ್ಪತ್ರೆಗೆ ತೆರಳಿ ಮೃತರ ಕುಟುಂಬಸ್ಥರನ್ನು ಭೇಟಿ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ದುಃಖ ವ್ಯಕ್ತಪಡಿಸಿದ್ದು, ಈ ಘಟನೆಯನ್ನು ಅತ್ಯಂತ ಭಯಾನಕ ಎಂದಿದ್ದಾರೆ. ಕಾಲ್ತುಳಿತದ ಕುರಿತು ಮಾತನಾಡಿದ ಅವರು, “ಇದುವರೆಗೆ 39 ಜನರು ಸಾವನ್ನಪ್ಪಿದ್ದಾರೆ. ನಮ್ಮ ರಾಜ್ಯದ ಇತಿಹಾಸದಲ್ಲಿ ಯಾವುದೇ ರಾಜಕೀಯ ಪಕ್ಷ ಆಯೋಜಿಸಿದ ಕಾರ್ಯಕ್ರಮದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ಜನರು ಪ್ರಾಣ ಕಳೆದುಕೊಂಡಿಲ್ಲ. ಭವಿಷ್ಯದಲ್ಲಿ ಇಂತಹ ದುರಂತ ಎಂದಿಗೂ ಸಂಭವಿಸಬಾರದು. ಪ್ರಸ್ತುತ, 51 ಜನರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದಿದ್ದಾರೆ.
இரவு முழுவதும் உயிரிழந்தவர்களின் குடும்பத்தினர் சிந்திய கண்ணீரும், அவர்களது துக்கம் நிறைந்த அழுகுரல் ஏற்படுத்திய வலியும் என் நெஞ்சத்திலிருந்து அகலவில்லை… #KarurTragedy pic.twitter.com/Z9K2TZs7NW
— M.K.Stalin – தமிழ்நாட்டை தலைகுனிய விடமாட்டேன் (@mkstalin) September 28, 2025
ಇದನ್ನೂ ಓದಿ: ತನ್ನದೇ ರ್ಯಾಲಿಯಲ್ಲಿ 31 ಜನ ಮೃತಪಟ್ಟರೂ ವಿಮಾನ ಹತ್ತಿ ಹೊರಟ ನಟ ವಿಜಯ್
“ಪ್ರಾಣ ಕಳೆದುಕೊಂಡವರಿಗೆ ನಾನು ಭಾರವಾದ ಹೃದಯದಿಂದ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಮೃತರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಾಯಗೊಂಡವರಿಗೆ 1 ಲಕ್ಷ ರೂ. ಪರಿಹಾರ ನೀಡಲಾಗುವುದು. ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಆಯೋಗವನ್ನು ರಚಿಸುವಂತೆ ನಾನು ಆದೇಶಿಸಿದ್ದೇನೆ” ಎಂದು ಸಿಎಂ ಸ್ಟಾಲಿನ್ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:54 am, Sun, 28 September 25