Vijay Singla: ಭ್ರಷ್ಟಾಚಾರ ಪ್ರಕರಣ; ಪಂಜಾಬ್ ಮಾಜಿ ಸಚಿವ ವಿಜಯ್ ಸಿಂಗ್ಲಾಗೆ 14 ದಿನ ನ್ಯಾಯಾಂಗ ಬಂಧನ

| Updated By: ಸುಷ್ಮಾ ಚಕ್ರೆ

Updated on: May 28, 2022 | 9:42 AM

ಪಂಜಾಬ್ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರನ್ನು ಮುಖ್ಯಮಂತ್ರಿ ಭಗವಂತ್ ಮಾನ್ ಸಂಪುಟದಿಂದ ವಜಾಗೊಳಿಸಿದ್ದರು. ಬಳಿಕ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿತ್ತು.

Vijay Singla: ಭ್ರಷ್ಟಾಚಾರ ಪ್ರಕರಣ; ಪಂಜಾಬ್ ಮಾಜಿ ಸಚಿವ ವಿಜಯ್ ಸಿಂಗ್ಲಾಗೆ 14 ದಿನ ನ್ಯಾಯಾಂಗ ಬಂಧನ
ವಿಜಯ್ ಸಿಂಗ್ಲಾ
Image Credit source: DNA
Follow us on

ಮೊಹಾಲಿ: ಪಂಜಾಬ್​ ಸರ್ಕಾರದ ಆರೋಗ್ಯ ಸಚಿವರಾಗಿದ್ದ ವಿಜಯ್ ಸಿಂಗ್ಲಾ (Vijay Singla)  1 ಪರ್ಸೆಂಟ್ ಕಮಿಷನ್ ಪಡೆದಿದ್ದಾರೆ ಎಂಬುದಕ್ಕೆ ಸಾಕ್ಷಿಗಳು ದೊರೆತ ಹಿನ್ನೆಲೆಯಲ್ಲಿ ಪಂಜಾಬ್ ಸಿಎಂ ಭಗವಂತ್ ಮಾನ್ (Punjab CM Bhagwant Mann) ತಮ್ಮ ಸಂಪುಟದ ಸಚಿವ ವಿಜಯ್ ಸಿಂಗ್ಲಾ ಅವರನ್ನು ವಜಾಗೊಳಿಸಿದ್ದರು. ಅಲ್ಲದೆ, ಅವರನ್ನು ಬಂಧಿಸಲು ಸೂಚಿಸಿದ್ದರು. ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಪಂಜಾಬ್ ಮಾಜಿ ಸಚಿವ, ಆಪ್ ನಾಯಕ ವಿಜಯ್ ಸಿಂಗ್ಲಾ ಅವರಿಗೆ ಮೊಹಾಲಿ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ವಿಜಯ್ ಸಿಂಗ್ಲಾ ಪರ ವಕೀಲ ಎಚ್.ಎಸ್. ಧನೋವಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಇದಕ್ಕೆ ವಿಚಾರಣಾ ನ್ಯಾಯಾಲಯವಿದ್ದು, ಸಮಿತಿಯೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಜಾಮೀನಿಗೆ ಅರ್ಜಿ ಸಲ್ಲಿಸುತ್ತೇವೆ ಎಂದಿದ್ದಾರೆ.

ಮಂಗಳವಾರ ಮುಂಜಾನೆ ಪಂಜಾಬ್ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರನ್ನು ಮುಖ್ಯಮಂತ್ರಿ ಭಗವಂತ್ ಮಾನ್ ಸಂಪುಟದಿಂದ ವಜಾಗೊಳಿಸಿದ್ದರು. ಬಳಿಕ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿತ್ತು. ಭ್ರಷ್ಟಾಚಾರದ ವಿರುದ್ಧ ಎಎಪಿ ಶೂನ್ಯ ಸಹಿಷ್ಣು ನೀತಿಯನ್ನು ಹೊಂದಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಮಗವಂತ್ ಮಾನ್ ಹೇಳಿದ್ದಾರೆ. ಸಿಂಗ್ಲಾ ಅವರನ್ನು ಸಂಪುಟದಿಂದ ವಜಾಗೊಳಿಸಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಲಾಗಿತ್ತು.

ಇದನ್ನೂ ಓದಿ: ಲಂಚ ಪಡೆದಿದ್ದಕ್ಕೆ ಆರೋಗ್ಯ ಸಚಿವರನ್ನೇ ವಜಾಗೊಳಿಸಿದ ಪಂಜಾಬ್ ಸಿಎಂ ಭಗವಂತ್ ಮಾನ್

ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ ಭಗವಂತ್ ಮಾನ್, “ಎಎಪಿ ಪ್ರಾಮಾಣಿಕ ಪಕ್ಷವಾಗಿದೆ. ನಮ್ಮ ಸರ್ಕಾರವು 1 ರೂ. ಲಂಚ ಪಡೆಯುವುದ್ನು ಸಹ ಸಹಿಸುವುದಿಲ್ಲ. ನಾನು ರಾಜ್ಯದಾದ್ಯಂತ ನನ್ನ ಭೇಟಿಗಳ ಸಮಯದಲ್ಲಿ ನಮ್ಮ ಮೇಲೆ ಜನರು ಈ ಕುರಿತು ಇಟ್ಟಿರುವ ಭರವಸೆಯನ್ನು ನೋಡಿದ್ದೇನೆ. ಭ್ರಷ್ಟಾಚಾರ ಮುಕ್ತ ಸರ್ಕಾರಕ್ಕಾಗಿ ಪಂಜಾಬ್​ನ ಜನ ಕಾಯುತ್ತಿದ್ದರು. ಆ ನಂಬಿಕೆಯನ್ನು ನಾವು ಖಂಡಿತ ಉಳಿಸಿಕೊಳ್ಳುತ್ತೇವೆ ಎಂದು ಹೇಳಿದ್ದರು.

‘ಇತ್ತೀಚೆಗೆ, ನಮ್ಮ ಸರ್ಕಾರದ ಸಚಿವರ ವಿರುದ್ಧದ ಭ್ರಷ್ಟಾಚಾರ ಪ್ರಕರಣವು ನನ್ನ ಗಮನಕ್ಕೆ ಬಂದಿತು. ಮಾಧ್ಯಮಗಳಿಗೆ ಅದರ ಬಗ್ಗೆ ತಿಳಿದಿರಲಿಲ್ಲ. ನಾನು ಅದನ್ನು ಯಾರಿಗೂ ಗೊತ್ತಾಗದಂತೆ ಮುಚ್ಚಿಹಾಕಬಹುದಿತ್ತು. ಆದರೆ, ನಮ್ಮ ಮೇಲೆ ನಂಬಿಕೆ ಇಟ್ಟಿದ್ದ ಲಕ್ಷಗಟ್ಟಲೆ ಜನರಿಗೆ ಅದರಿಂದ ದ್ರೋಹ ಎಸಗಿದಂತೆ ಆಗುತ್ತಿತ್ತು. ಹೀಗಾಗಿ ಆರೋಗ್ಯ ಸಚಿವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದೇನೆ. ಭ್ರಷ್ಟಾಚಾರವನ್ನು ಬೇರು ಸಮೇತ ಕಿತ್ತೆಸೆಯುತ್ತೇನೆ ಎಂದು ಪ್ರಮಾಣವಚನ ಸ್ವೀಕರಿಸಿದ ಅರವಿಂದ್ ಕೇಜ್ರಿವಾಲ್ ಅವರ ಸೈನಿಕರು ನಾವು. ನಮ್ಮ ಸರ್ಕಾರದಲ್ಲಿ ಬಿಡಿಗಾಸು ಲಂಚ ಪಡೆಯಲು ಕೂಡ ಅವಕಾಶವಿಲ್ಲ’ ಎಂದು ಭಗವಂತ್ ಮಾನ್ ಹೇಳಿದ್ದರು.

ಇದನ್ನೂ ಓದಿ: ರಾಷ್ಟ್ರ ರಾಜಕಾರಣದತ್ತ ತೆಲಂಗಾಣ ಸಿಎಂ ಕೆಸಿಆರ್ ಕಣ್ಣು: ಅರವಿಂದ ಕೇಜ್ರಿವಾಜ್ ಜೊತೆಗೆ ಇಂದು ಪಂಜಾಬ್ ಯಾತ್ರೆ

ವಿಜಯ್ ಸಿಂಗ್ಲಾ ಅವರ ಭ್ರಷ್ಟಾಚಾರದ ಬಗ್ಗೆ ಸರ್ಕಾರಿ ಅಧಿಕಾರಿಯೊಬ್ಬರು ಇತ್ತೀಚೆಗೆ ಮುಖ್ಯಮಂತ್ರಿ ಕಚೇರಿಗೆ ದೂರು ನೀಡಿದ್ದರು. ಮುಖ್ಯಮಂತ್ರಿಗಳು ಖುದ್ದಾಗಿ ಅಧಿಕಾರಿಗೆ ಭರವಸೆ ನೀಡಿದ್ದು, ನಾನು ಅವರೊಂದಿಗೆ ನಿಲ್ಲುತ್ತೇನೆ ಮತ್ತು ಯಾವುದೇ ಸಚಿವರಿಗೆ ಭಯಪಡುವ ಅಗತ್ಯವಿಲ್ಲ. ನಂತರ ಅಧಿಕಾರಿಯ ಸಹಾಯದಿಂದ ಕಾರ್ಯಾಚರಣೆಯನ್ನು ನಡೆಸಲಾಯಿತು. ಇದರಲ್ಲಿ ಸಚಿವರು ಮತ್ತು ಅವರ ಆಪ್ತರು ಒಂದು ಪರ್ಸೆಂಟ್ ಕಮಿಷನ್‌ಗೆ ಒತ್ತಾಯಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಯಿತು. ಸಿಂಗ್ಲಾ ಅವರ ಫೋನ್ ರೆಕಾರ್ಡಿಂಗ್ ಮತ್ತು ಇತರ ಸಾಕ್ಷ್ಯಗಳನ್ನು ಸಂಗ್ರಹಿಸಿದ ನಂತರ ಭಗವಂತ್ ಮಾನ್ ಕ್ರಮ ಕೈಗೊಂಡರು. ವಿಜಯ್ ಸಿಂಗ್ಲಾ ಆರೋಗ್ಯ ಇಲಾಖೆಯಲ್ಲಿ ನಡೆಯುತ್ತಿರುವ ಕಾಮಗಾರಿಗೆ ಶೇ.1ರಷ್ಟು ಕಮಿಷನ್ ನೀಡುವಂತೆ ಒತ್ತಾಯಿಸುತ್ತಿದ್ದರು. ಅದರ ದೂರು ಸಿಎಂ ಭಗವಂತ್ ಮಾನ್ ಅವರಿಗೆ ತಲುಪಿತ್ತು. ಅವರು ಅದರ ಬಗ್ಗೆ ರಹಸ್ಯವಾಗಿ ತನಿಖೆಯನ್ನೂ ಮಾಡಿದ್ದರು. ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದ ಬಳಿಕ ಸಚಿವರನ್ನು ಕರೆಸಲಾಯಿತು. ಸಚಿವರು ತಪ್ಪನ್ನು ಒಪ್ಪಿಕೊಂಡ ಬೆನ್ನಲ್ಲೇ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಲಾಗಿತ್ತು. ಅವರ ವಿರುದ್ಧ ಪೊಲೀಸ್ ಕೇಸ್ ಕೂಡ ದಾಖಲಾಗಿತ್ತು. ಸಚಿವರು ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಿದ್ದರು. ಶುಕ್ರವಾರ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ