ರಾಷ್ಟ್ರ ರಾಜಕಾರಣದತ್ತ ತೆಲಂಗಾಣ ಸಿಎಂ ಕೆಸಿಆರ್ ಕಣ್ಣು: ಅರವಿಂದ ಕೇಜ್ರಿವಾಜ್ ಜೊತೆಗೆ ಇಂದು ಪಂಜಾಬ್ ಯಾತ್ರೆ

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎದುರಿಸಲು ಕಾಂಗ್ರೆಸ್ಸೇತರ ಪಕ್ಷಗಳನ್ನು ಒಗ್ಗೂಡಿಸಲು ಕೆಸಿಆರ್ ತಂತ್ರ ಹೆಣೆದಿದ್ದಾರೆ.

ರಾಷ್ಟ್ರ ರಾಜಕಾರಣದತ್ತ ತೆಲಂಗಾಣ ಸಿಎಂ ಕೆಸಿಆರ್ ಕಣ್ಣು: ಅರವಿಂದ ಕೇಜ್ರಿವಾಜ್ ಜೊತೆಗೆ ಇಂದು ಪಂಜಾಬ್ ಯಾತ್ರೆ
ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

May 23, 2022 | 12:41 PM

ದೆಹಲಿ: ಕೇಂದ್ರ ಸರ್ಕಾರವು ಜಾರಿಗೊಳಿಸಿದ್ದ ಮೂರು ಕೃಷಿ ಕಾನೂನುಗಳನ್ನು (Farm Laws) ಹಿಂಪಡೆಯುವಂತೆ ಆಗ್ರಹಿಸಿ ಸತ್ಯಾಗ್ರಹ ನಡೆಸುತ್ತಿದ್ದ 600ಕ್ಕೂ ಹೆಚ್ಚು ಕುಟುಂಬಗಳನ್ನು ಚಂಡಿಗಡದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ (K Chandrashekhar Rao – KCR) ಇಂದು (ಮೇ 23) ಭೇಟಿಯಾಗಲಿದ್ದಾರೆ. ರೈತರ ತೀವ್ರ ಪ್ರತಿರೋಧದ ನಂತರ ಈ ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರವು ಹಿಂಪಡೆಯಿತು. ಈ ವೇಳೆ ಚಂದ್ರಶೇಖರ್ ರಾವ್ ಅವರೊಂದಿಗೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಸಹ ಇರುತ್ತಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಅವರ ಪಂಜಾಬ್​ ಸಹವರ್ತಿ ಭಗವಂತ ಮಾನ್ ಸಹ ಈ ವೇಳೆ ಉಪಸ್ಥಿತರಿರುತ್ತಾರೆ.

ಸಂತ್ರಸ್ತ ಕುಟುಂಬಗಳಿಗೆ ತೆಲಂಗಾಣ ಮುಖ್ಯಮಂತ್ರಿ ಈ ವೇಳೆ ತಲಾ ₹ 3 ಲಕ್ಷ ನಗದು ಪರಿಹಾರ ವಿತರಿಸಲಿದ್ದಾರೆ. ಕೆಸಿಆರ್ ಭೇಟಿಗೆ ಒಂದು ದಿನ ಮೊದಲಷ್ಟೇ ಪಂಜಾಬ್​ನ ಕುಟುಂಬ ಕಲ್ಯಾಣ ಸಚಿವ ವಿಜಯ್ ಸಿಂಗ್ಲಾ ಮಾನ್ಸಾದ ರೈತ ಹೋರಾಟದಲ್ಲಿ ಮೃತಪಟ್ಟ ಐವರು ರೈತರ ಕುಟುಂಬಗಳಿಗೆ ₹ 25 ಲಕ್ಷ ಪರಿಹಾರ ನೀಡಿದ್ದರು.

ಈ ನಡುವೆ ತೆಲಂಗಾಣದ ಕಾಂಗ್ರೆಸ್​ ಘಟಕವು ಚಂದ್ರಶೇಖರ್ ರಾವ್ ಅವರ ರಾಜಕಾರಣದ ವೈಖರಿಯನ್ನು ಖಂಡಿಸಿದೆ. ‘ತೆಲಂಗಾಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ 8,000 ರೈತರ ಕುಟುಂಬಗಳ ಬಗ್ಗೆ ಚಂದ್ರಶೇಖರ್ ರಾವ್​ ದಿವ್ಯಮೌನ ವಹಿಸಿದ್ದಾರೆ’ ಎಂದು ಕಾಂಗ್ರೆಸ್ ಪಕ್ಷದ ತೆಲಂಗಾಣ ಘಟಕದ ವಕ್ತಾರ ದಾಸೋಜು ಶ್ರಾವಣ್ ಹೇಳಿದ್ದಾರೆ. ಅವರಿಗೆ ರೈತರ ಬಗ್ಗೆ ಅಷ್ಟೆಲ್ಲಾ ಕಾಳಜಿಯಿದ್ದಿದ್ದರೆ ಈ ಮೊದಲು ಕೇಂದ್ರ ಸರ್ಕಾರ ಜಾರಿಗಳಿಸಿದ ಕೃಷಿ ಕಾನೂನುಗಳನ್ನು ಏಕೆ ಬೆಂಬಲಿಸಬೇಕಿತ್ತು ಎಂದು ಪ್ರಶ್ನಿಸಿದರು. ದೆಹಲಿಗೆ ಶನಿವಾರ ಭೇಟಿ ನೀಡಿದ ಕೆಸಿಆರ್, ರಾಷ್ಟ್ರಮಟ್ಟದ ರಾಜಕೀಯ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ದೆಹಲಿ ಸರ್ಕಾರದ ಶಾಲೆಗೂ ನಿನ್ನೆ ಭೇಟಿ ನೀಡಿ ಪರಿಶೀಲಿಸಿದರು. ದೆಹಲಿ ಮಾದರಿಯಲ್ಲಿ ತೆಲಂಗಾಣದಲ್ಲಿಯೂ ಶಾಲೆಗಳನ್ನು ಆರಂಭಿಸುವುದಾಗಿ ಹೇಳಿದರು.

ಮೇ 26ರಂದು ಚಂದ್ರಶೇಖರ್ ರಾವ್ ಅವರು ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಲಿದ್ದಾರೆ. ನಂತರ ಮಹಾರಾಷ್ಟ್ರದ ರಾಳೆಗಾಂವ್​ಸಿದ್ಧಿ ಗ್ರಾಮದಲ್ಲಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರನ್ನು ಭೇಟಿ ಮಾಡಲಿದ್ದಾರೆ. ಚೀನಾ ಸೈನಿಕರೊಂದಿಗೆ ಗಲ್ವಾನ್ ಕಣಿವೆ ಸಂಘರ್ಷದಲ್ಲಿ ಮೃತಪಟ್ಟ ಪಶ್ಚಿಮ ಬಂಗಾಳ ಮತ್ತು ಬಿಹಾರದ ಸೈನಿಕರ ಮನೆಗಳಿಗೂ ಭೇಟಿ ನೀಡಲಿದ್ದಾರೆ. ತೆಲಂಗಾಣದಲ್ಲಿ ತಮ್ಮ ಅಧಿಕಾರವನ್ನು ಸ್ಪಷ್ಟವಾಗಿ ಸ್ಥಾಪಿಸಿರುವ, ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್) ಮೇಲೆ ಬಿಗಿ ಹಿಡಿತ ಹೊಂದಿರುವ ಕೆಸಿಆರ್, ಇದೀಗ ರಾಷ್ಟ್ರ ರಾಜಕಾರಣದತ್ತ ಗಮನ ಹರಿಸುತ್ತಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎದುರಿಸಲು ಕಾಂಗ್ರೆಸ್ಸೇತರ ಪಕ್ಷಗಳನ್ನು ಒಗ್ಗೂಡಿಸಲು ತಂತ್ರ ಹೆಣೆದಿದ್ದಾರೆ.

2019ರ ಲೋಕಸಭೆ ಚುನಾವಣೆಗೆ ಮೊದಲೂ ಸಹ ಕೆಸಿಆರ್ ಇಂಥದ್ದೇ ಪ್ರಯತ್ನ ಮಾಡಿದ್ದರು. ಆದರೆ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ತಮ್ಮ ಪ್ರಯತ್ನಗಳನ್ನು ಕೈಬಿಟ್ಟಿದ್ದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada