ಬುಡಕಟ್ಟು ಪ್ರದೇಶದಲ್ಲಿ ಜನರ ಆರೋಗ್ಯ ತಪಾಸಣೆಗೆ 10 ಕಿಮೀ ನಡೆದು ಬಂದ ಆರೋಗ್ಯ ಕಾರ್ಯಕರ್ತರು
ಈ ಆರೋಗ್ಯ ಕಾರ್ಯಕರ್ತೆಯರ ಕರ್ತವ್ಯ ಪ್ರಜ್ಞೆಗೆ ದೇಶಾದ್ಯಂತ ಶ್ಲಾಘನೆ ವ್ಯಕ್ತವಾಗಿದೆ.
ಬಲರಾಮ್ಪುರ (ಛತ್ತೀಸಗಡ): ಬುಡಕಟ್ಟು ಜನರ ಆರೋಗ್ಯ ತಪಾಸಣೆ ಮಾಡಲೆಂದು ಇಬ್ಬರು ಆರೋಗ್ಯ ಕಾರ್ಯಕರ್ತೆಯರು ಗುಡ್ಡಗಾಡು ಪ್ರದೇಶದಲ್ಲಿ 10 ಕಿಮೀ ನಡೆದಿದ್ದಾರೆ. ಕಷ್ಟಪಟ್ಟು ಬೆಟ್ಟ ಹತ್ತಿ ಬಲರಾಮ್ಪುರ ಜಿಲ್ಲೆಯಲ್ಲಿ ಬುಡಕಟ್ಟು ಜನರೇ ಹೆಚ್ಚಾಗಿರುವ ಝಲ್ವಾಸಾ ಗ್ರಾಮಕ್ಕೆ ಭೇಟಿ ನೀಡಲು ಹರಸಾಹಸ ಪಟ್ಟಿರುವ ಛತ್ತೀಸಗಡದ (Chhattisgarh) ಈ ಆರೋಗ್ಯ ಕಾರ್ಯಕರ್ತೆಯರ ಕರ್ತವ್ಯ ಪ್ರಜ್ಞೆಗೆ ದೇಶಾದ್ಯಂತ ಶ್ಲಾಘನೆ ವ್ಯಕ್ತವಾಗಿದೆ. ಬುಡಕಟ್ಟು ಜನರೇ ಹೆಚ್ಚಾಗಿರುವ ಬಲರಾಮ್ಪುರದಲ್ಲಿ ಗುಡ್ಡಗಾಡು ಪ್ರದೇಶದಲ್ಲಿರುವ ಹಳ್ಳಿಗಳಲ್ಲಿ ಜಿಲ್ಲಾಡಳಿತವು ಆರೋಗ್ಯ ಶಿಬಿರಗಳನ್ನು ಆಯೋಜಿಸಿತ್ತು. ಈ ಗ್ರಾಮಗಳು ದಟ್ಟ ಅರಣ್ಯದಿಂದ ಸುತ್ತುವರಿದಿದೆ.
ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಜಂಟಿಯಾಗಿ ಈ ಶಿಬಿರಗಳನ್ನು ಆಯೋಜಿಸಿವೆ. ಸಬಾಗ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಝಾಲ್ವಾಸಾ ಗ್ರಾಮಕ್ಕೆ ತಲುಪಲು ಹಲವು ಬೆಟ್ಟಗಳನ್ನು ಹತ್ತಿ ಇಳಿಯಬೇಕಾಗುತ್ತದೆ. ನಡೆದಾಡಲು ಕಷ್ಟವಾಗಿರುವ ಕಾಡಿನಲ್ಲಿ 10 ಕಿಮೀ ನಡೆಯಬೇಕಿದೆ. ಈ ಗ್ರಾಮದಲ್ಲಿ 28 ಕುಟುಂಬಗಳಿವೆ. ಈ ಪೈಕಿ 20 ವಿಶೇಷ ಹಿಂದುಳಿದ ಬುಡಕಟ್ಟುಗಳು. ಆರೋಗ್ಯ ಶಿಬಿರ ಆಯೋಜಿಸಿದ್ದ ತಂಡದಲ್ಲಿ ಆರೋಗ್ಯ ಕಾರ್ಯಕರ್ತೆಯರಾದ ಹಲ್ಮಿ ಟಿರ್ಕೆ ಮತ್ತು ಸುಚಿತಾ ಸಿಂಗ್ ಸಹ ಇದ್ದಾರೆ.
‘ಸಬಾಗ್ ಆರೋಗ್ಯ ಕೇಂದ್ರದಲ್ಲಿ ನಾನು ಎಎನ್ಎಂ ಆಗಿ ಕೆಲಸ ಮಾಡುತ್ತಿದ್ದೇನೆ. ಬೆಟ್ಟ ಮತ್ತು ಅರಣ್ಯ ಪ್ರದೇಶಗಳನ್ನು ಹಾದು ನಾವು ಇಲ್ಲಿಗೆ ತಲುಪಿದೆವು. ಸುಮಾರು 10 ಕಿಮೀ ನಡೆದು ಬಂದು, ಇಲ್ಲಿ ಅರೋಗ್ಯ ಶಿಬಿರ ನಡೆಸಿ, ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿದೆವು’ ಎಂದು ಹಲ್ಮಿ ಟ್ರಿಕೆ ಹೇಳಿದರು.
ಆರೋಗ್ಯ ಕಾರ್ಯಕರ್ತೆಯರ ಸಾಧನೆಯನ್ನು ಬಲರಾಮ್ಪುರ ಜಿಲ್ಲಾಧಿಕಾರಿ ಕುಂದನ್ ಕಪೂರ್ ಸಹ ಶ್ಲಾಘಿಸಿದ್ದಾರೆ. ಅಷ್ಟು ದೂರದ ಹಳ್ಳಿಗೆ ನಡೆದು ಹೋಗುವುದು ಸುಲಭವಲ್ಲ. ಅಲ್ಲಿಗೆ ನಮ್ಮ ತಂಡಗಳು ನಿನ್ನೆ ಹೋಗಿದ್ದವು. ತಂಡದೊಂದಿಗೆ ಎಎನ್ಎಂ ಹಲ್ಮಿ ಮತ್ತು ಸುಚಿತಾ ಸಿಂಗ್ ಸಹ ಇದ್ದರು. ಜನರ ಆರೋಗ್ಯ ತಪಾಸಣೆಗಾಗಿ ಅವರು ಸಾಕಷ್ಟು ಕಷ್ಟಪಟ್ಟಿದ್ದಾರೆ. ಇಂಥ ಇನ್ನಷ್ಟು ಶಿಬಿರಗಳನ್ನು ನಾವು ಆಯೋಜಿಸುತ್ತಿದ್ದೇವೆ ಎಂದು ಅವರು ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದರು. ಅಂಗನವಾಡಿ ಕಾರ್ಯಕರ್ತೆಯರು ಸಹ ಇಂಥ ತಂಡಗಳ ಭಾಗವಾಗಿರುತ್ತಾರೆ. ರಕ್ತದ ಒತ್ತಡ, ಸಕ್ಕರೆ ಪ್ರಮಾಣ ಮತ್ತು ಒಟ್ಟಾರೆ ಆರೋಗ್ಯದ ವಿವರಗಳನ್ನು ಸಂಗ್ರಹಿಸಲಾಗುತ್ತದೆ. ಈ ವೇಳೆ ಸಾಕಷ್ಟು ಜನರು ಆರೋಗ್ಯವಾಗಿಯೇ ಇದ್ದರು ಎಂದು ಜಿಲ್ಲಾಧಿಕಾರಿ ಹೇಳಿದರು.
#WATCH | Health department workers are crossing dense forests to set up healthcare camps in several villages of Chhattisgarh’s Balrampur pic.twitter.com/0URwaPR5D3
— ANI MP/CG/Rajasthan (@ANI_MP_CG_RJ) May 22, 2022