ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಹೈಡ್ರಾಮಾ: ಅಧಿವೇಶನದ ಮೊದಲ ದಿನವೇ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ ಸಮಾಜವಾದಿ ಪಕ್ಷದ ಶಾಸಕರು

ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕ ಸಿದ್ಧಾರ್ಥ್ ನಾಥ್ ಸಿಂಗ್, ಅಖಿಲೇಶ್ ಯಾದವ್ ಅವರು ಸಾಂವಿಧಾನಿಕ ಸ್ಥಾನವನ್ನು ಎಂದಿಗೂ ಗೌರವಿಸಲಿಲ್ಲ. ಇಂದು ಯುಪಿ ವಿಧಾನಸಭೆಯಲ್ಲಿ ಅವರ ಶಾಸಕರು ಅದನ್ನು  ಪ್ರತಿಬಿಂಬಿಸಿದ್ದಾರೆ

ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಹೈಡ್ರಾಮಾ: ಅಧಿವೇಶನದ ಮೊದಲ ದಿನವೇ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ ಸಮಾಜವಾದಿ ಪಕ್ಷದ ಶಾಸಕರು
ಉತ್ತರ ಪ್ರದೇಶ ಅಸೆಂಬ್ಲಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:May 23, 2022 | 2:25 PM

ಲಖನೌ: ಉತ್ತರ ಪ್ರದೇಶದ ರಾಜ್ಯ ವಿಧಾನಸಭೆ  (Uttar Pradesh assembly)18 ನೇ ಅಧಿವೇಶನದ ಮೊದಲ ದಿನವೇ ಪ್ರತಿಭಟನೆಗಳನ್ನು ಕಂಡಿತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (Yogi Adityanath) ಅವರು ಚುನಾಯಿತ ಸದಸ್ಯರು ಎತ್ತುವ ಎಲ್ಲಾ ಪ್ರಶ್ನೆಗಳಿಗೆ ಮತ್ತು ವಿಷಯಗಳಿಗೆ ತಮ್ಮ ಸರ್ಕಾರ ಉತ್ತರಿಸುತ್ತದೆ ಎಂದು ಸೋಮವಾರ ಹೇಳಿದ್ದಾರೆ. ಇತ್ತ  ಅಖಿಲೇಶ್ ಯಾದವ್ (Akhilesh Yadav) ಅವರ ಸಮಾಜವಾದಿ ಪಕ್ಷದ ಶಾಸಕರು ರಾಜ್ಯ ಸರ್ಕಾರ, ಹಣದುಬ್ಬರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದ್ದಾರೆ.  ಶಾಸಕರು ರೈತರಿಗೆ ನ್ಯಾಯಕ್ಕಾಗಿ ನೀಡಿ ಎಂಬ ಬೇಡಿಕೆಗಳಿರುವ ಫಲಕಗಳನ್ನು ಹಿಡಿದಿದ್ದರು.ಉತ್ತರ ಪ್ರದೇಶದಲ್ಲಿ  ವಿಧಾನಸಭಾ ಅಧಿವೇಶನ ಆರಂಭವಾಗುವ ಮುನ್ನ  ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ 18ನೇ ಅಧಿವೇಶನಕ್ಕೆ ನಾನು ಎಲ್ಲ ಸದಸ್ಯರನ್ನು ಸ್ವಾಗತಿಸುತ್ತಿದ್ದೇನೆ. ರಾಜ್ಯದ ಪ್ರಗತಿಗಾಗಿ ಅವರ ಚೈತನ್ಯವನ್ನು ಸದುಪಯೋಗ ಮಾಡುವಂತೆ ನಾನು ಅವರಲ್ಲಿ ವಿನಂತಿಸುತ್ತೇನೆ. ಉತ್ತರಪ್ರದೇಶದ ವಿಧಾನಸಭೆ  ದೊಡ್ಡದಾಗಿರುವುದರಿಂದ ಇಲ್ಲಿ  ಏನೇ ಆದರೂ ದೇಶದ ಇತರ ಭಾಗಗಳಲ್ಲಿಯೂ ಇದರ ಬಗ್ಗೆ ಚರ್ಚೆಯಾಗಲಿದ. ಶಾಸಕರ ನಡತೆಯು ಇಲ್ಲಿ ಕೇವಲ 25ಕೋಟಿ ಜನರ ನಡುವೆ  ಮಾತ್ರ ಚರ್ಚೆಯಾಗುವುದಿಲ್ಲ. ಅದು ದೇಶದಾದ್ಯಂತ ಚರ್ಚೆಯಾಗಲಿದೆ ಎಂದು ಹೇಳಿದ್ದಾರೆ. 2022-2023ರ ರಾಜ್ಯ ಬಜೆಟ್ ಮೇ 26ರಂದು ಮಂಡನೆ ಆಗಲಿದೆ. ವಿಧಾನಸಭೆಯಲ್ಲಿ ಶಾಸಕರು ಕೇಳುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಪ್ರಶ್ನೆಗಳಿಗೆ ಉತ್ತರಿಸಲು ಸರ್ಕಾರ ಸಿದ್ಧವಿದೆ ಎಂದು ಯೋಗಿ ಆದಿತ್ಯನಾಥ ಹೇಳಿದ್ದಾರೆ. ಆದಾಗ್ಯೂ ಅಧಿವೇಶನ ಆರಂಭವಾದ ಕೂಡಲೇ ಸಮಾಜವಾದಿ ಪಕ್ಷದ ಶಾಸಕರು ಪ್ರತಿಭಟನೆಯ ಘೋಷಣೆ ಕೂಗಿದ್ದಾರೆ.

ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕ ಸಿದ್ಧಾರ್ಥ್ ನಾಥ್ ಸಿಂಗ್, ಅಖಿಲೇಶ್ ಯಾದವ್ ಅವರು ಸಾಂವಿಧಾನಿಕ ಸ್ಥಾನವನ್ನು ಎಂದಿಗೂ ಗೌರವಿಸಲಿಲ್ಲ. ಇಂದು ಯುಪಿ ವಿಧಾನಸಭೆಯಲ್ಲಿ ಅವರ ಶಾಸಕರು ಅದನ್ನು  ಪ್ರತಿಬಿಂಬಿಸಿದ್ದಾರೆ. ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸುವುದು ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಿಗೆ ಮಾಡುವ ಅಗೌರವ”ಎಂದು ಟ್ವೀಟ್ ಮಾಡಿದ್ದಾರೆ.

ಮಾರ್ಚ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆ ಫಲಿತಾಂಶದ ನಂತರ ಅಖಿಲೇಶ್ ಯಾದವ್ ಲೋಕಸಭೆಗೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರು ತಮ್ಮ ಮೊದಲ ರಾಜ್ಯ ಚುನಾವಣೆಯಲ್ಲಿ ಕುಟುಂಬದ ಭದ್ರಕೋಟೆಯಾದ ಮೈನ್‌ಪುರಿಯಿಂದ ಸ್ಪರ್ಧಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಅವರು ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದರು. ವಿಧಾನಸಭೆಯಲ್ಲಿ ಅವರ ಪಕ್ಷದ ಬಲವೂ ಕಳೆದ ಬಾರಿಗಿಂತ ಗಣನೀಯವಾಗಿ ಹೆಚ್ಚಿದೆ.

ವಾರಾಂತ್ಯದಲ್ಲಿ ಅಖಿಲೇಶ್, ತೆಲಂಗಾಣ ಮುಖ್ಯಮಂತ್ರಿ ಕಲ್ವಕುಂಟ್ಲಾ ಚಂದ್ರಶೇಖರ ರಾವ್ ಅವರನ್ನು ಭೇಟಿಯಾಗಿದ್ದರು.ಕೆಸಿಆರ್ ಕೂಡ ಬಿಜೆಪಿಯನ್ನು ಟೀಕಿಸಲು ಧ್ವನಿಗೂಡಿಸಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ  ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:54 pm, Mon, 23 May 22