XUV700 ಬೇಗ ಕಳಿಸಿ ಎಂದ ಥಾಮಸ್ ಕಪ್ ವಿನ್ನರ್ಗೆ ಆನಂದ್ ಮಹೀಂದ್ರ ಉತ್ತರ ಹೀಗಿತ್ತು
ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ವಾಹನ ಉತ್ಪಾದನೆಯು ನಿಧಾಗತಿಯಲ್ಲಿ ನಡೆಯುತ್ತಿದೆ. ಅದರಲ್ಲೂ ಬಹುತೇಕ ಕಂಪೆನಿಗಳಲ್ಲಿ ಬುಕ್ ಮಾಡಿರುವ ವಾಹನಗಳ ಪೂರೈಕೆಯು ವಿಳಂಬವಾಗುತ್ತಿದೆ.
ಭಾರತ ಬ್ಯಾಡ್ಮಿಂಟನ್ ತಂಡ ಇತ್ತೀಚೆಗಷ್ಟೇ ಇಂಡೋನೇಷ್ಯಾವನ್ನು ಮಣಿಸಿ ಚೊಚ್ಚಲ ಬಾರಿಗೆ ಥಾಮಸ್ ಕಪ್ ಅನ್ನು ಮುಡಿಗೇರಿಸಿಕೊಂಡಿತ್ತು. ಈ ಐತಿಹಾಸಿಕ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರಮುಖರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತ್ತು. ಈ ತಂಡದಲ್ಲಿ ಯುವ ಬ್ಯಾಡ್ಮಿಂಟನ್ ತಾರೆ ಚಿರಾಗ್ ಶೆಟ್ಟಿ ಕೂಡ ಕಾಣಿಸಿಕೊಂಡಿದ್ದರು. ಅದರಲ್ಲೂ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್ ಸಾಯಿರಾಜ್ ಡಬಲ್ಸ್ನಲ್ಲಿ ಸಂಚಲನ ಸೃಷ್ಟಿಸಿದ್ದರು. ಈ ಅದ್ಭುತ ಪ್ರದರ್ಶನದ ಮೂಲಕ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ತಂಡವನ್ನು ಉದ್ಯಮಿ ಮಹೀಂದ್ರ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರ ಟ್ವೀಟ್ ಮೂಲಕ ಪ್ರಶಂಶಿಸಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಆನಂದ್ ಮಹೀಂದ್ರ, ಕ್ರೀಡಾಲೋಕದಲ್ಲಿ ಭಾರತೀಯರ ಹೊಸ ಯುಗ ಆರಂಭವಾಗಿದೆ. ನಮ್ಮ ದೇಶಾದ್ಯಂತ ಎಲ್ಲರೂ ಪ್ರೀತಿಸುವ ಮತ್ತು ಆಡುವ ಕ್ರೀಡೆಗಳಲ್ಲಿ ಇದು ಒಂದು. ನಾನು ಥಾಮಸ್ ಕಪ್ ಮತ್ತು ಅದರಲ್ಲಿ ಪ್ರಾಬಲ್ಯ ಸಾಧಿಸಿದ ಇಂಡೋನೇಷ್ಯಾದ ರೂಡಿ ಹಾರ್ಟೊನೊ ಅವರಂತಹ ದಿಗ್ಗಜರ ಬಗ್ಗೆ ಓದುತ್ತಾ ಬೆಳೆದವನು. ಇಂದು ನಾವು ಬಲಿಷ್ಠ ಇಂಡೋನೇಷ್ಯಾ ವಿರುದ್ದ ಸ್ವೀಪ್ ಮಾಡಿ ಗೆದ್ದಿದ್ದೇವೆ. ನಮ್ಮ ಸಮಯ ಕೂಡ ಬಂದಿದೆ ಎಂದು ಟ್ವೀಟ್ ಮಾಡಿದ್ದರು.
ಈ ಟ್ವೀಟ್ಗೆ ಪ್ರಕ್ರಿಯಿಸಿರುವ 23 ವರ್ಷದ ಯುವ ಆಟಗಾರ ಚಿರಾಗ್ ಶೆಟ್ಟಿ, ಆನಂದ್ ಮಹೀಂದ್ರ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಜೊತೆಗೆ ಮಹೀಂದ್ರ ಕಂಪೆನಿಯಲ್ಲಿ ತಾನು ಬುಕ್ ಮಾಡಿರುವ ಕಾರನ್ನು ಬೇಗನೆ ಕಳುಹಿಸಿಕೊಡುವಂತೆ ಮನವಿ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: IPL 2022: ಹೇಗಿರಲಿದೆ ಪ್ಲೇಆಫ್: ಇಲ್ಲಿ 2 ತಂಡಗಳಿಗೆ ಡಬಲ್ ಚಾನ್ಸ್..!
ಸರ್, ನಾನು ಇತ್ತೀಚೆಗೆ ಎಕ್ಸ್ಯುವಿ 700 ಅನ್ನು ಬುಕ್ ಮಾಡಿದ್ದೇನೆ. ಅದು ಶೀಘ್ರದಲ್ಲೇ ನನಗೆ ಸಿಗಲಿದೆ ಎಂದು ಭಾವಿಸುತ್ತೇನೆ ಎಂದು ಚಿರಾಗ್ ಶೆಟ್ಟಿ ಪ್ರತಿಕ್ರಿಯಿಸಿದ್ದರು. ಇದನ್ನು ಗಮನಿಸಿದ ಆನಂದ್ ಮಹೀಂದ್ರ ಉತ್ತರ ಸ್ವಾರಸ್ಯಕರ ಉತ್ತರ ನೀಡಿದ್ದು ವಿಶೇಷ. ಎಕ್ಸ್ಯುವಿ700 ಚಾಂಪಿಯನ್‌ಗಳ ಆಯ್ಕೆಯಾಗಿರುವುದರಿಂದ ಅದನ್ನು ತಲುಪಿಸಲು ನಾವು ಹೆಚ್ಚು ಶ್ರಮವಹಿಸುತ್ತೇವೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ನಾನು ಸಹ ನನ್ನ ಹೆಂಡತಿಗೆ ಒಂದನ್ನು ಬುಕ್ ಮಾಡಿದ್ದೇನೆ. ಇದೀಗ ಅದನ್ನು ಪಡೆಯಲು ಕ್ಯೂ ನಲ್ಲಿ ಕಾಯುತ್ತಿದ್ದೇನೆ ಎಂದು ಆನಂದ್ ಮಹೀಂದ್ರ ತಿಳಿಸಿದ್ದಾರೆ.
Since that makes the XUV7OO the Choice Of Champions we will have to work extra hard to get it to you ASAP. @vijaynakra I hope you see this! (By the way, I’ve ordered one for my wife & I’m still in Q! ) Sadly, the global supply chain disruptions are plaguing all car companies) https://t.co/q4sYqq1XR8
— anand mahindra (@anandmahindra) May 17, 2022
ಇದರ ಜೊತೆಗೆ ವಾಹನ ಪೂರೈಕೆ ವಿಳಂಬವಾಗುತ್ತಿರುವುದಕ್ಕೂ ಕಾರಣ ಸ್ಪಷ್ಟನೆ ನೀಡಿದ್ದಾರೆ. ವಾಹನಕ್ಕೆ ಬೇಕಾದ ಕೆಲ ಉತ್ಪನ್ನಗಳ ಜಾಗತಿಕ ಪೂರೈಕೆಯ ಅಡೆತಡೆಗಳು ಎಲ್ಲಾ ಕಾರು ಕಂಪನಿಗಳನ್ನು ಬಾಧಿಸುತ್ತಿವೆ ಎಂದು ಆನಂದ್ ಮಹೀಂದ್ರ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಸದ್ಯ ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ವಾಹನ ಉತ್ಪಾದನೆಯು ನಿಧಾಗತಿಯಲ್ಲಿ ನಡೆಯುತ್ತಿದೆ. ಅದರಲ್ಲೂ ಬಹುತೇಕ ಕಂಪೆನಿಗಳಲ್ಲಿ ಬುಕ್ ಮಾಡಿರುವ ವಾಹನಗಳ ಪೂರೈಕೆಯು ವಿಳಂಬವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಸೆಮಿಕಂಡಕ್ಟರ್ಗಳ ಕೊರತೆ. ಕೊರೋನಾ ಸಾಂಕ್ರಮಿಕ ರೋಗದ ಬಳಿಕ ವಿಶ್ವದಾದ್ಯಂತ ಸೆಮಿಕಂಡಕ್ಟರ್ಗಳ ಉತ್ಪಾದನೆಯಲ್ಲಿ ವಿಳಂಬವಾಗುತ್ತಿದೆ. ಹೀಗಾಗಿ ಭಾರತ ಸೇರಿದಂತೆ ವಿಶ್ವದ ಪ್ರಮುಖ ವಾಹನ ಕ್ಷೇತ್ರಗಳ ಮೇಲೆ ಇದರ ಕೊರೆತೆ ನೇರ ಪರಿಣಾಮ ಬೀರಿದೆ. ಹಾಗಾಗಿ ಭಾರತದಲ್ಲಿ ಬುಕ್ ಮಾಡಿದ ವಾಹನಗಳು ನಿಗದಿತ ಸಮಯದಲ್ಲಿ ಡೆಲಿವರಿ ನೀಡಲಾಗುತ್ತಿಲ್ಲ. ಇದನ್ನೇ ಜಾಗತಿಕ ಪೂರೈಕೆಯ ಅಡೆತಡೆಗಳು ಎಲ್ಲಾ ಕಾರು ಕಂಪನಿಗಳನ್ನು ಬಾಧಿಸುತ್ತಿವೆ ಎಂದು ಆನಂದ್ ಮಹೀಂದ್ರ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.