ಬಿಹಾರ: ವಿಐಪಿ ಮುಖ್ಯಸ್ಥ, ಮಾಜಿ ಸಚಿವ ಮುಕೇಶ್ ಸಹಾನಿ ತಂದೆ ಜಿತನ್ ಹತ್ಯೆ
ಮಾಜಿ ಸಚಿವ ಮುಕೇಶ್ ಸಹಾನಿ ಅವರ ತಂದೆ ಜಿತನ್ ಸಹಾನಿ ಅವರ ಮನೆಗೆ ನುಗ್ಗಿ ಕೊಲೆ ಮಾಡಲಾಗಿದೆ. ಮಂಗಳವಾರ ಬೆಳಗ್ಗೆ ಜಿತನ್ ಅವರ ಮೃತದೇಹ ಅವರ ಮನೆಯಲ್ಲಿ ಪತ್ತೆಯಾಗಿದೆ. ಸಹಾನಿ ಅವರನ್ನು ಹರಿತವಾದ ಆಯುಧದಿಂದ ಕೊಲೆ ಮಾಡಲಾಗಿದೆ.

ವಿಕಾಸಶೀಲ ಇನ್ಸಾನ್ ಪಕ್ಷದ ಮುಖ್ಯಸ್ಥ ಮುಕೇಶ್ ಸಹಾನಿ ತಂದೆ ಜಿತನ್ ಸಹಾನಿಯವರನ್ನು ಹತ್ಯೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಜಿತನ್ ಸಹಾನಿ ಅವರನ್ನು ಅಪರಿಚಿತ ದುಷ್ಕರ್ಮಿಗಳು ಬಿಹಾರದ ದರ್ಭಾಂಗಾದಲ್ಲಿ ಹತ್ಯೆ ಮಾಡಿದ್ದಾರೆ.
ಸೋಮವಾರ ರಾತ್ರಿ ಘನಶ್ಯಾಂಪುರ್ ಪ್ರದೇಶದಲ್ಲಿನ ಅವರ ವಸತಿ ಗೃಹದಲ್ಲಿ ಜಿತನ್ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಹತ್ಯಗೈದಿದ್ದಾರೆ ಎನ್ನಲಾಗಿದೆ. ಘಟನೆಯ ನಂತರ ಡಿಎಸ್ಪಿ ನೇತೃತ್ವದ ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿದ್ದು, ತನಿಖೆ ಆರಂಭಿಸಿದೆ.
ಮುಕೇಶ್ ಸಹಾನಿ ಬಿಹಾರ ಸರ್ಕಾರದಲ್ಲಿ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮಲ್ಲಾ ಸಮುದಾಯವು ಬಿಹಾರದಲ್ಲಿ ಗಮನಾರ್ಹ ರಾಜಕೀಯ ಪ್ರಭಾವವನ್ನು ಹೊಂದಿದೆ, ಇದು ರಾಜ್ಯದ ಜನಸಂಖ್ಯೆಯ ಸರಿಸುಮಾರು 6 ಪ್ರತಿಶತವನ್ನು ಹೊಂದಿದೆ.
ಮತ್ತಷ್ಟು ಓದಿ: ತಮಿಳುನಾಡು ಬಿಎಸ್ಪಿ ಮುಖ್ಯಸ್ಥ ಕೆ ಆರ್ಮ್ಸ್ಟ್ರಾಂಗ್ ಕೊಲೆ ಪ್ರಕರಣದ ಆರೋಪಿ ಪೊಲೀಸ್ ಎನ್ಕೌಂಟರ್ನಲ್ಲಿ ಹತ್ಯೆ
ಬಿಹಾರ ರಾಜಕೀಯದಲ್ಲಿ ಅವರ ಬೆಂಬಲವು ನಿರ್ಣಾಯಕವಾಗಿದೆ ಮತ್ತು ಸಹಾನಿ ಅವರು ತಮ್ಮ ಹಿತಾಸಕ್ತಿಗಳನ್ನು ಸಮರ್ಥಿಸುವ ನಾಯಕರಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದಾರೆ. ವಿಐಪಿ ಪ್ರಸ್ತುತ ಇಂಡಿಯಾ ಮೈತ್ರಿಕೂಟದ ಆರ್‌ಜೆಡಿ ಮತ್ತು ಕಾಂಗ್ರೆಸ್‌ನೊಂದಿಗೆ ಮೈತ್ರಿಯಲ್ಲಿದೆ. ಲೋಕಸಭಾ ಚುನಾವಣೆಗೂ ಮುನ್ನ ಮೈತ್ರಿ ಮಾಡಿಕೊಂಡಿತ್ತು.
ಲೋಕಸಭೆ ಚುನಾವಣೆಗೂ ಮುನ್ನ ಆರ್‌ಜೆಡಿ ನಾಯಕ ಯಾದವ್ ಜೊತೆ ಮುಕೇಶ್ ಸಹಾನಿ ಇರುವ ವಿಡಿಯೋ ವೈರಲ್ ಆಗಿತ್ತು. ವಿಡಿಯೋದಲ್ಲಿ ಇಬ್ಬರೂ ನವರಾತ್ರಿ ವೇಳೆ ಹೆಲಿಕಾಪ್ಟರ್‌ನಲ್ಲಿ ಮೀನು ತಿನ್ನುತ್ತಿರುವುದು ದೊಡ್ಡ ರಾಜಕೀಯ ವಿವಾದವನ್ನು ಸೃಷ್ಟಿಸಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:40 am, Tue, 16 July 24