Nirmala Sitharaman: ನಿರ್ಮಲಾ ಸೀತಾರಾಮನ್ ಆರೋಗ್ಯದಲ್ಲಿ ಚೇತರಿಕೆ; ನಾಳೆ ಏಮ್ಸ್ನಿಂದ ಬಿಡುಗಡೆ ಸಾಧ್ಯತೆ
ಸಚಿವರ ಆರೋಗ್ಯ ಚೇತರಿಸಿದೆ. ಹೀಗಾಗಿ ಬುಧವಾರ ವೈದ್ಯರು ಅವರನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ ಎಂದು ಏಮ್ಸ್ ಆಸ್ಪತ್ರೆ ಮೂಲಗಳು ಹೇಳಿವೆ.
ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಅವರು ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ಅಖಿಲ ಭಾರತ ವೈದ್ಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆ (AIIMS) ಮೂಲಗಳು ತಿಳಿಸಿವೆ. ವೈರಲ್ ಜ್ವರದಿಂದ ಬಳಲುತ್ತಿದ್ದ ನಿರ್ಮಲಾ ಸೀತಾರಾಮನ್ ಅವರನ್ನು ಸೋಮವಾರ ಏಮ್ಸ್ಗೆ ದಾಖಲಿಸಲಾಗಿತ್ತು. ಸಚಿವರ ಆರೋಗ್ಯ ಚೇತರಿಸಿದೆ. ಹೀಗಾಗಿ ಬುಧವಾರ ವೈದ್ಯರು ಅವರನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ. 63 ವರ್ಷದ ನಿರ್ಮಲಾ ಸೀತಾರಾಮನ್ ಅವರನ್ನು ಏಮ್ಸ್ ಆಸ್ಪತ್ರೆಯ ಖಾಸಗಿ ವಾರ್ಡ್‌ನಲ್ಲಿ ದಾಖಲಿಸಲಾಗಿದೆ.
ಸೋಮವಾರ ಬೆಳಿಗ್ಗೆಯಿಂದಲೇ ನಿರ್ಮಲಾ ಸೀತಾರಾಮನ್ ಅಸ್ವಸ್ಥಗೊಂಡಿದ್ದರು. ಬಳಿಕ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅವರನ್ನು ಏಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಆರೋಗ್ಯ ಸ್ಥಿತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಏಮ್ಸ್ ಬಹಿರಂಗಪಡಿಸಿರಲಿಲ್ಲ. ಬಳಿಕ, ಹಣಕಾಸು ಸಚಿವರ ಆರೋಗ್ಯದಲ್ಲಿ ಹೆಚ್ಚಿನ ಏರುಪೇರಾಗಿಲ್ಲ. ಅವರು ಆರೋಗ್ಯವಾಗಿದ್ದಾರೆ ಎಂದು ಏಮ್ಸ್ ಆಸ್ಪತ್ರೆ ಅಧಿಕಾರಿಗಳು ಮಾಹಿತಿ ನೀಡಿದ್ದರು.
ಬಜೆಟ್ ಸಿದ್ಧತೆಯಲ್ಲಿ ವ್ಯಸ್ತರಾಗಿರುವ ನಿರ್ಮಲಾ ಸೀತಾರಾಮನ್
ಕೇಂದ್ರ ಬಜೆಟ್ಗೆ ಇನ್ನು ಸುಮಾರು 1 ತಿಂಗಳಷ್ಟೇ ಬಾಕಿದೆ. ಹೀಗಾಗಿ ಕಳೆದ ತಿಂಗಳಿನಿಂದಲೇ ಸಚಿವರು ಬಿಡುವಿಲ್ಲದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಕೈಗಾರಿಕೋದ್ಯಮಿಗಳು, ಬಂಡವಾಳಗಾರರು, ಸರ್ಕಾರದ ಉನ್ನತ ಅಧಿಕಾರಿಗಳ ಜತೆ ಸಭೆ ನಡೆಸಿ ಬಜೆಟ್ ಸಿದ್ಧತೆಯಲ್ಲಿ ತೊಡಗಿದ್ದಾರೆ. ಈ ಮಧ್ಯೆ, ವರ್ಚುವಲ್ ಆಗಿ ಜಿಎಎಸ್ಟಿ ಮಂಡಳಿ ಸಭೆಯನ್ನೂ ನಡೆಸಿದ್ದಾರೆ. ಕೈಗಾರಿಕೋದ್ಯಮಿಗಳು ಮತ್ತು ಹವಾಮಾನ ಬದಲಾವಣೆ ತಜ್ಞರ ಜತೆ ಸಭೆ ನಡೆಸುವ ಮೂಲಕ ನವೆಂಬರ್ 21ರಂದು ಸಚಿವರು ಬಜೆಟ್ ಸಿದ್ಧತೆ ಆರಂಭಿಸಿದ್ದರು.
ಇದನ್ನೂ ಓದಿ: Nirmala Sitharaman: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಏಮ್ಸ್ ಆಸ್ಪತ್ರೆಗೆ ದಾಖಲು
ಜುಲೈನಲ್ಲಿ ಕೋವಿಡ್ ಪೀಡಿತರಾಗಿದ್ದ ನಿರ್ಮಲಾ ಸೀತಾರಾಮನ್
ಈ ವರ್ಷ ಜುಲೈ ತಿಂಗಳಲ್ಲಿ ಇಂಡೋನೇಷ್ಯಾದ ಬಾಲಿಯಿಂದ ಹಿಂದಿರುಗಿದ ನಂತರ ನಿರ್ಮಲಾ ಸೀತಾರಾಮನ್ ಅವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಅಲ್ಲಿ ಅವರು ಜಿ20 ಹಣಕಾಸು ಮಂತ್ರಿಗಳ ಸಭೆಯಲ್ಲಿ ಭಾಗವಹಿಸಿದ್ದರು. ಅದಾದ ಬಳಿಕ ಸಂಪೂರ್ಣ ಪಿಪಿಇ ಕಿಟ್ ಧರಿಸಿ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು.