
ಕೇರಳಕ್ಕೆ ಕೇವಲ ದೇವರ ನಾಡು ಎಂಬ ಹೆಸರು ಮಾತ್ರವಲ್ಲದೆ ಅತಿ ಹೆಚ್ಚು ಸಾಕ್ಷರತಾ ರಾಜ್ಯ ಎಂಬ ಖ್ಯಾತಿಗೂ ಪಾತ್ರವಾಗಿದೆ. ಈ ಕೇರಳದಲ್ಲಿ ಶೇ. 96ರಷ್ಟು ಸಾಕ್ಷರತೆಯಿದೆ. ಇಲ್ಲಿ ಓದಲು ರಸ್ತೆ ಬದಿಯ ಗೂಡುಗಳಲ್ಲಿ ಉಚಿತವಾಗಿ ಪುಸ್ತಕಗಳೂ ಸಿಗುತ್ತವೆ!. ಈ ಮೂಲಕ ಕೇರಳದಲ್ಲಿ ಓದಿನ ಅಭಿರುಚಿಯನ್ನು ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ. ತಮ್ಮ ಬಳಿ ಇರುವ ಪುಸ್ತಕವನ್ನು ಓದಿದವರು ಅದನ್ನು ರಸ್ತೆಗಳ ಬದಿ ಇರುವ ಗೂಡಿನಲ್ಲಿ ಇಟ್ಟರೆ ಅಗತ್ಯವಿದ್ದರೆ ಆ ಪುಸ್ತಕವನ್ನು ಓದಿ ವಾಪಾಸ್ ತಂದಿಡುತ್ತಾರೆ. ಇದೊಂದು ರೀತಿಯ ಲೈಬ್ರರಿಯಿದ್ದಂತೆ.
ಕೇರಳದ ಸಣ್ಣ ಹಳ್ಳಿಯಾದ ಪೆರುಂಕುಲಂನಲ್ಲಿ ಈ ರೀತಿಯ ಹಲವಾರು ಪುಸ್ತಕಗಳ ಗೂಡುಗಳನ್ನು ನಿರ್ಮಿಸಲಾಗಿದೆ. ಈ ಬಾಕ್ಸ್ನಲ್ಲಿ ಹಳೆಯ ಪುಸ್ತಕಗಳು ಓದಲು ಉಚಿತವಾಗಿ ಸಿಗುತ್ತವೆ. ಈ ಊರಿಗೆ ಪುಸ್ತಕ ಗ್ರಾಮ ಅಥವಾ ಬುಕ್ ವಿಲೇಜ್ ಎಂಬ ಖ್ಯಾತಿಯೂ ಇದೆ. ಇಲ್ಲಿ ಹಳೆಯ ಪುಸ್ತಕಗಳು, ನ್ಯೂಸ್ ಪೇಪರ್ಗಳು ಓದಲು ಸಿಗುತ್ತವೆ. ಜನರು ತಮಗೆ ಬೇಕಾದ್ದನ್ನು ತೆಗೆದುಕೊಂಡು ಹೋಗಿ ಓದಬಹುದು. ಓದಿದ ನಂತರ ಅದನ್ನು ಮತ್ತೆ ಬಾಕ್ಸ್ನಲ್ಲಿ ತಂದಿಟ್ಟರೆ ಬೇರೆಯವರು ಅದನ್ನು ತೆಗೆದುಕೊಂಡು ಹೋಗುತ್ತಾರೆ.
ಈ ಪುಸ್ತಕ ಗ್ರಾಮದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಳ್ಳಿಯ ಜನರು ಓದುವ ಉತ್ಸಾಹ, ಓದಿನ ಪ್ರೀತಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಲ್ಲರೂ ಮೊಬೈಲ್, ಕಂಪ್ಯೂಟರ್ಗಳಿಗೆ ಅಂಟಿಕೊಂಡು ಕೂರುತ್ತಿರುವ ಇಂದಿನ ಕಾಲದಲ್ಲಿ ಹೀಗೆ ಚಟಕ್ಕೆ ಬಿದ್ದವರಂತೆ ಪುಸ್ತಕಗಳನ್ನು ಓದುವವರೂ ಇದ್ದಾರಾ? ಎಂದು ಅನೇಕರು ಹುಬ್ಬೇರಿಸಿದ್ದಾರೆ.
ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಈ ರೀತಿಯ ಬುಕ್ ಬಾಕ್ಸ್ಗಳನ್ನು ನೋಡಿದ್ದೆ. ಕೇರಳದಲ್ಲೂ ಈ ಪರಿಕಲ್ಪನೆ ಇದೆ ಎಂಬುದನ್ನು ತಿಳಿದು ಖುಷಿಯಾಯಿತು. ಈ ಹಳ್ಳಿಯಿಂದ ಪುಸ್ತಕ ಸಂಸ್ಕೃತಿ ಮತ್ತಷ್ಟು ಪಸರಿಸಲಿ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
ಕೇರಳ ಪ್ರವಾಸೋದ್ಯಮದಿಂದ ಈ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಳ್ಳಲಾಗಿದೆ. ರಸ್ತೆಗಳ ಬದಿಯಲ್ಲಿ ನಿರ್ಮಿಸಲಾಗಿರುವ ಪುಸ್ತಕ ಗೂಡುಗಳು ಜನರಿಗೆ ಉಚಿತವಾಗಿ ಪುಸ್ತಕ ಸಿಗುವಂತೆ ಮಾಡುತ್ತಿವೆ. ಜನರು ಬಿಡುವಿದ್ದಾಗ ಇಲ್ಲಿನ ಪುಸ್ತಕಗಳನ್ನು ಓದಿ ವಾಪಾಸ್ ತಂದಿಡುತ್ತಾರೆ.
ಇದನ್ನೂ ಓದಿ: Viral News | ಬರೋಬ್ಬರಿ 1 ಕೋಟಿಗೆ ಹರಾಜಾಯ್ತು ವಿಸ್ಕಿ ಬಾಟಲ್; ಇದರ ವಿಶೇಷತೆ ಕೇಳಿದರೆ ಕಿಕ್ ಏರುತ್ತೆ!
Viral News: ಬೆಕ್ಕಿಗಾಗಿಯೇ ಈ ಬಂಗಲೆಯಲ್ಲಿದೆ ಎಸಿ ರೂಂ, ಬೆಡ್, ಕಾರ್ಟೂನ್ ಥಿಯೇಟರ್!
(Viral News: In This Kerala Book Village Books Are Available For Free To Read In Roadside Boxes)
Published On - 9:04 pm, Thu, 9 September 21