ಉತ್ತರ ಪ್ರದೇಶ: ರಾಜ್ಯದ ಜಿಲ್ಲೆಯೊಂದರಲ್ಲಿ ಆದ ಪವರ್ ಕಟ್ ಹಿನ್ನೆಲೆ ಆಸ್ಪತ್ರೆಯಲ್ಲಿ ವೈದ್ಯರು ಪರದಾಡುವಂತಾಯಿತು. ಭಾರೀ ಮಳೆಯ ಅವಾಂತರ ಹಿನ್ನೆಲೆ ಶನಿವಾರ ವಿದ್ಯುತ್ ಕಡಿತಗೊಳಿಸಲಾಯಿತು. ಈ ವೇಳೆ ಬಾಲಿಯ ಜಿಲ್ಲಾಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದೆ ವೈದ್ಯರು ರೋಗಿಗಳನ್ನು ತಪಾಸಣೆ ನಡೆಸಲು ಮೊಬೈಲ್ ಲೈಟ್ ಮೊರೆ ಹೋಗಬೇಕಾಯಿತು. ಸದ್ಯ ಇದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ, ಕತ್ತಲಿನಲ್ಲಿ ವೈದ್ಯರು ಮೊಬೈಲ್ ಲೈಟ್ ಬಳಕೆ ಮಾಡಿ ಮಹಿಳಾ ರೋಗಿಯೊಬ್ಬರನ್ನು ಮಲಗಿಸಿ ತಪಾಸಣೆ ನಡೆಸುತ್ತಿರುವುದನ್ನು ಕಾಣಬಹುದು.
ಘಟನೆ ಬಗ್ಗೆ ವಿವರಿಸಿದ ಜಿಲ್ಲಾ ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸಕ ಮತ್ತು ಪ್ರಭಾರ ಮುಖ್ಯಾಧಿಕಾರಿ ಡಾ.ಆರ್.ಡಿ.ರಾಮ್, ಆಸ್ಪತ್ರೆಯಲ್ಲಿ ಜನರೇಟರ್ ವ್ಯವಸ್ಥೆ ಇದೆ. ಆದರೆ ಜನರೇಟರ್ಗಾಗಿ ಬ್ಯಾಟರಿಗಳನ್ನು ಪಡೆಯುವಾಗ 15ರಿಂದ 20 ನಿಮಿಷಗಳ ಕಾಲ ತಡವಾಗಿದೆ ಎಂದು ತಿಳಿಸಿದರು. ಜನರೇಟರ್ ಬ್ಯಾಟರಿ ಇಲ್ಲದೇ ಇರಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾವಾಗಲೂ ಬ್ಯಾಟರಿಗಳು ಕಳ್ಳತನವಾಗುವ ಭಯ ಇದ್ದೇ ಇರುತ್ತದೆ. ಹಾಗಾಗಿ ತೆಗೆಯಲಾಗಿದೆ ಎಂದು ಹೇಳಿದ್ದಾರೆ.
ರಾಜಕೀಯವಾಗಿ ಹೆಚ್ಚು ಚರ್ಚೆಯಲ್ಲಿರುವ ದೇಶದಲ್ಲಿ ರಾಜ್ಯಗಳಲ್ಲಿ ಉತ್ತರಪ್ರದೇಶವೂ ಒಂದಾಗಿದೆ. ಇಲ್ಲಿನ ಧನಾತ್ಮಕ, ನಕರಾತ್ಮಕ ವಿಷಯಗಳು ದೇಶದಾದ್ಯಂತ ರಾಜಕೀಯವಾಗಿ ಹೆಚ್ಚು ಚರ್ಚೆಗೆ ಗುರಿಯಾಗುತ್ತದೆ. ಸದ್ಯ ಬಾಲಿಯ ಆಸ್ಪತ್ರೆಯಲ್ಲಿನ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದರೂ ರಾಜ್ಯ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಮತ್ತಷ್ಟು ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ