Supreme Court: ಪೌರತ್ವ ತಿದ್ದುಪಡಿ ಕಾಯ್ದೆ ಆಕ್ಷೇಪಿಸಿ ಸಲ್ಲಿಕೆಯಾಗಿರುವ 200 ಪಿಐಎಲ್ ವಿಚಾರಣೆ ಇಂದು
CAA: ಕೇಂದ್ರ ಸರ್ಕಾರದ ವಾದವನ್ನು ಆಲಿಸದೆ ಕಾಯ್ದೆಯ ಜಾರಿಗೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ಈ ಮೊದಲು ಸುಪ್ರೀಂಕೋರ್ಟ್ ಹೇಳಿತ್ತು.
ದೆಹಲಿ: ‘ಪೌರತ್ವ ತಿದ್ದುಪಡಿ ಕಾಯ್ದೆ 2019’ (Citizenship Amendment Act) ಆಕ್ಷೇಪಿಸಿ ಸಲ್ಲಿಕೆಯಾಗಿರುವ 220 ಅರ್ಜಿಗಳನ್ನು ಸುಪ್ರೀಂಕೋರ್ಟ್ ಸೋಮವಾರ (ಸೆ 12) ವಿಚಾರಣೆಗೆ ತೆಗೆದುಕೊಳ್ಳಲಿದೆ. ಮುಖ್ಯನ್ಯಾಯಮೂರ್ತಿ ಯು.ಯು.ಲಲಿತ್ (Chief Justice of India UU Lalit) ಮತ್ತು ನ್ಯಾಯಮೂರ್ತಿ ಎಸ್.ರವೀಂದ್ರ ಭಟ್ ಅವರಿರುವ ನ್ಯಾಯಪೀಠವು ವಿಚಾರಣೆ ಆರಂಭಿಸಲಿದೆ. ಸುಪ್ರೀಂಕೋರ್ಟ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಗೆ ಆಕ್ಷೇಪ ವ್ಯಕ್ತಿಪಡಿಸಿ ಅಲ್ಲಿಕೆಯಾಗಿದ್ದ ಅರ್ಜಿಯ ಮೊದಲ ವಿಚಾರಣೆ ಡಿಸೆಂಬರ್ 18, 2019ರಲ್ಲಿ ನಡೆದಿತ್ತ. ನಂತರ ಜೂನ್ 15, 2021ರಲ್ಲಿ ಮತ್ತೊಮ್ಮೆ ನ್ಯಾಯಾಲಯವು ವಾದಗಳನ್ನು ಆಲಿಸಿತ್ತು. ನಂತರವೂ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು.
ಡಿಸೆಂಬರ್ 11, 2019ರಲ್ಲಿ ಸಂಸತ್ತು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಿತ್ತು. ಜನವರಿ 10, 2020ರಿಂದ ಇದು ಜಾರಿಗೆ ಬಂತು. ಆರಂಭದಿಂದಲೂ ಪೌರತ್ವ ತಿದ್ದುಪಡಿ ಕಾಯ್ದೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಕೇರಳ ಮೂಲದ ರಾಜಕೀಯ ಪಕ್ಷ ಭಾರತೀಯ ಮುಸ್ಲಿಂ ಲೀಗ್ (Indian Union Muslim League – IUML), ಟಿಎಂಸಿ ಸಂಸದ ಮಹುವಾ ಮೊಯಿತ್ರಾ, ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್ ಮತ್ತು ದೇವವ್ರತ ಸೈಕಿಯಾ, ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ, ಸರ್ಕಾರೇತರ ಸಂಸ್ಥೆಗಳಾದ ರಿಹಾಯ್ ಮಂಚ್ ಮತ್ತು ಸಿಟಿಜನ್ಸ್ ಎಗೈನ್ಸ್ಟ್ ಹೇಟ್, ಅಸ್ಸಾಂ ವಕೀಲರ ಸಂಘ ಮತ್ತು ಕಾನೂನು ವಿದ್ಯಾರ್ಥಿಗಳು ಪೌರತ್ವ ಕಾಯ್ದೆ ವಿರೋಧಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. 2020ರಲ್ಲಿ ಕೇರಳ ಸರ್ಕಾರವು ಸಹ ಸುಪ್ರೀಂಕೋರ್ಟ್ನಲ್ಲಿ ಪೌರತ್ವ ಕಾಯ್ದೆ ಪ್ರಶ್ನಿಸಿ ಅರ್ಜಿ ಸಲ್ಲಿಸಿತ್ತು. ಕಾಯ್ದೆಯನ್ನು ಪ್ರಶ್ನಿಸಿದ ಮೊದಲ ರಾಜ್ಯ ಎನಿಸಿತು.
ಡಿಸೆಂಬರ್ 31, 2014ರಂದು ಅಥವಾ ಅದಕ್ಕೂ ಮೊದಲು ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಿಂದ ಭಾರತದ ಆಶ್ರಯ ಕೋರಿ ಬರುವ ಹಿಂದೂ, ಸಿಖ್ಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರಿಶ್ಚಿಯನ್ ನಾಗರಿಕರಿಗೆ ಶೀಘ್ರ ಪೌರತ್ವ ಕಲ್ಪಿಸಲು ಈ ಕಾಯ್ದೆಯು ನೆರವಾಗುತ್ತದೆ.
ಕೇಂದ್ರ ಸರ್ಕಾರದ ವಾದವನ್ನು ಆಲಿಸದೆ ಕಾಯ್ದೆಯ ಜಾರಿಗೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ಈ ಮೊದಲು ಸುಪ್ರೀಂಕೋರ್ಟ್ ಹೇಳಿತ್ತು. ಮಾರ್ಚ್ 2020ರಂದು ಸುಪ್ರೀಂಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ದ ಕೇಂದ್ರ ಸರ್ಕಾರವು, ‘ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತದ ಯಾವುದೇ ನಾಗರಿಕನ ಹಕ್ಕು ಉಲ್ಲಂಘನೆಯಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿತ್ತು. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನಗಳಿಂದ ಬರುವ ಮುಸ್ಲಿಮೇತರ ಪ್ರಜೆಗಳಿಗೆ ಭಾರತದ ಪೌರತ್ವವನ್ನು ಶೀಘ್ರಗತಿಯಲ್ಲಿ ಕೊಡುವ ಈ ಕಾಯ್ದೆಯು ಧರ್ಮದ ಆಧಾರದ ಮೇಲೆ ಅಸಮಾನತೆಗೆ ಕಾರಣವಾಗುತ್ತದೆ ಎಂದು ಅರ್ಜಿದಾರರು ದೂರಿದ್ದರು.
Published On - 11:02 am, Mon, 12 September 22