
ಪಾಟ್ನಾ, ಆಗಸ್ಟ್ 27: ಬಿಹಾರದಲ್ಲಿ (Bihar) ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi), ‘ಮತ ಚೋರಿ’ ಮೊದಲು ಗುಜರಾತ್ ರಾಜ್ಯದಲ್ಲಿ ಪ್ರಾರಂಭವಾಯಿತು, 2014ರ ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ) ಅದನ್ನು ರಾಷ್ಟ್ರಮಟ್ಟಕ್ಕೆ ತಂದಿತು ಎಂದು ಆರೋಪಿಸಿದ್ದಾರೆ. ಗುಜರಾತ್ ಮಾದರಿಯ ‘ಮತ ಕಳ್ಳತನ’ದ ಮಾಡೆಲ್ ಅನುಸರಿಸಿ ಬಿಜೆಪಿ ಜನರ ಮತಗಳನ್ನು ಕದಿಯುವ ಮೂಲಕವೇ ಚುನಾವಣೆಗಳನ್ನು ಗೆಲ್ಲುತ್ತಿದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಬಿಹಾರದ ಮುಜಾಫರ್‌ಪುರದಲ್ಲಿ ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ. “ಬಿಜೆಪಿಯವರು ಮಧ್ಯಪ್ರದೇಶ, ಹರಿಯಾಣ ಮತ್ತು ಮಹಾರಾಷ್ಟ್ರದ ಚುನಾವಣೆಗಳಲ್ಲಿ ಮತ ಕಳ್ಳತನ ಮಾಡಿ ಗೆದ್ದಿದ್ದಾರೆ. ನಮ್ಮಲ್ಲಿ ಯಾವುದೇ ಪುರಾವೆ ಇಲ್ಲದ ಕಾರಣ ನಾವು ಏನನ್ನೂ ಹೇಳಲಿಲ್ಲ. ಆದರೆ ಮಹಾರಾಷ್ಟ್ರದಲ್ಲಿ ಅವರು ಅದನ್ನು ಅತಿಯಾಗಿ ಮಾಡಿದ್ದರಿಂದ ನಮಗೆ ಪುರಾವೆ ಸಿಕ್ಕಿತು. ಲೋಕಸಭಾ ಚುನಾವಣೆಯ ನಂತರ ಚುನಾವಣಾ ಆಯೋಗವು ಮಹಾರಾಷ್ಟ್ರದಲ್ಲಿ ಸುಮಾರು 1 ಕೋಟಿ ಹೆಚ್ಚಿನ ಮತಗಳನ್ನು ಸೇರಿಸಿತು. ಅವರೆಲ್ಲರೂ ಬಿಜೆಪಿಗೆ ಮತ ಹಾಕಿದರು” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
BJP का गुजरात मॉडल कोई विकास का नहीं, वोट चोरी का मॉडल है। https://t.co/IM4yFRHxgz pic.twitter.com/IrBHB5dJUA
— Rahul Gandhi (@RahulGandhi) August 27, 2025
ಇದನ್ನೂ ಓದಿ: ಮತಗಳ್ಳತನ: ಅಷ್ಟೆಲ್ಲಾ ಆರೋಪ ಮಾಡಿ ಚುನಾವಣೆ ಆಯೋಗಕ್ಕೆ ದೂರು ನೀಡದೇ ಹೋದ ರಾಹುಲ್ ಗಾಂಧಿ
ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಇಬ್ಬರೂ ಜನರ ಮತಗಳನ್ನು ಕದ್ದಿದ್ದಾರೆ. ಅವರಿಬ್ಬರಿಗೂ ಭಾರತೀಯ ಚುನಾವಣಾ ಆಯೋಗ (ECI) ಸಹಾಯ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಬಿಜೆಪಿ ಮುಂದಿನ 40 ವರ್ಷಗಳ ಕಾಲ ಅಧಿಕಾರದಲ್ಲಿ ಉಳಿಯುತ್ತದೆ ಎಂದು ಅಮಿತ್ ಶಾ ಹೇಳಿಕೊಂಡಿದ್ದಾರೆ. ಕೇಂದ್ರ ಗೃಹ ಸಚಿವರು ‘ವೋಟ್ ಚೋರಿ’ಯಿಂದಲೇ ಈ ಭವಿಷ್ಯವನ್ನು ತಿಳಿದಿದ್ದಾರೆ ಎಂದು ರಾಹುಲ್ ಟೀಕಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ