Vrindavan Temple Corridor: ವೃಂದಾವನ ದೇವಸ್ಥಾನ ಕಾರಿಡಾರ್ ವಿರೋಧಿಸಿ ಪ್ರತಿಭಟನೆ; ರಕ್ತದಲ್ಲಿ 108 ಪತ್ರ ಬರೆದು ಮೋದಿಗೆ ರವಾನೆ
ವೃಂದಾವನ್ ಕಾರಿಡಾರ್ ಯೋಜನೆಯನ್ನು ಕೈಬಿಡುವಂತೆ ಮತ್ತು ವೃಂದಾವನದ ಪರಂಪರೆಯನ್ನು ಉಳಿಸುವಂತೆ ಸ್ಥಳೀಯರು ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಒತ್ತಾಯಿಸಿದ್ದಾರೆ.
ನವದೆಹಲಿ: ವೃಂದಾವನದ ಬಂಕೆ ಬಿಹಾರಿ ದೇವಸ್ಥಾನದ (Banke Bihari temple) ಸುತ್ತಲೂ ನಿರ್ಮಿಸಲು ಉದ್ದೇಶಿಸಿರುವ ಕಾರಿಡಾರ್ ವಿರುದ್ಧ ಮಂಗಳವಾರ ಪ್ರತಿಭಟನೆ ತೀವ್ರಗೊಂಡಿದೆ. ಈ ವೇಳೆ ಅರ್ಚಕರು, ವ್ಯಾಪಾರಿಗಳು ಮತ್ತು ಸ್ಥಳೀಯ ನಿವಾಸಿಗಳು ಈ ಕಾರಿಡಾರ್ ಯೋಜನೆಯ (Vrindavan Temple Corridor) ವಿನ್ಯಾಸಗಳ ಪ್ರತಿಗಳನ್ನು ಸುಟ್ಟುಹಾಕಿದ್ದಾರೆ. ಅಲ್ಲದೆ, ಪ್ರತಿಭಟನಾಕಾರರು ರಕ್ತದಿಂದ 108 ಪತ್ರಗಳನ್ನು ಬರೆದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (CM Yogi Adityanath) ಅವರಿಗೆ ಕಳುಹಿಸಿದ್ದಾರೆ.
ವೃಂದಾವನ್ ಕಾರಿಡಾರ್ ಯೋಜನೆಯನ್ನು ಕೈಬಿಡುವಂತೆ ಮತ್ತು ವೃಂದಾವನದ ಪರಂಪರೆಯನ್ನು ಉಳಿಸುವಂತೆ ಸ್ಥಳೀಯರು ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಒತ್ತಾಯಿಸಿದ್ದಾರೆ. ಪ್ರತಿಭಟನಾಕಾರರು ನಡೆಸಿದ ಧರಣಿಯಿಂದಾಗಿ ಬಂಕೆ ಬಿಹಾರಿ ದೇವಸ್ಥಾನದ ಬಳಿಯ ಮಾರುಕಟ್ಟೆಗಳನ್ನು ಮಂಗಳವಾರದ ಮಧ್ಯಾಹ್ನದ ಬಳಿಕ ಮುಚ್ಚಲಾಯಿತು.
ಬಂಕೆ ಬಿಹಾರಿ ವ್ಯಾಪಾರಿ ಸಂಘದ ಅಧ್ಯಕ್ಷ ಅಮಿತ್ ಗೌತಮ್ ಮಾತನಾಡಿ, ವೃಂದಾವನದ ಪರಂಪರೆಯನ್ನು ಉಳಿಸಲು ರಕ್ತದಿಂದ ಬರೆದ 108 ಪತ್ರಗಳನ್ನು ಪ್ರಧಾನಿ ಮತ್ತು ಸಿಎಂಗೆ ಕಳುಹಿಸಲಾಗಿದೆ ಎಂದಿದ್ದಾರೆ. “ಒಂದೆಡೆ, ನಾವು ಸುಪ್ರೀಂ ಕೋರ್ಟ್‌ನಿಂದ ಪರಿಹಾರವನ್ನು ಕೋರುತ್ತೇವೆ. ಇನ್ನೊಂದೆಡೆ, ಈ ಯೋಜನೆ ವಿರುದ್ಧ ನಮ್ಮ ಆಂದೋಲನವನ್ನು ತೀವ್ರಗೊಳಿಸಲಾಗುತ್ತಿದೆ” ಎಂದು ಅಮಿತ್ ಗೌತಮ್ ಹೇಳಿದ್ದಾರೆ.
ಇದನ್ನೂ ಓದಿ: ಅರಣ್ಯಾಧಿಕಾರಿ ಶಿಲ್ಪಾ ಅಮಾನತು ಆದೇಶ ರದ್ದತಿಗೆ ಒತ್ತಾಯಿಸಿ ಎಸ್ಸಿ ಎಸ್ಟಿ ಒಕ್ಕೂಟದಿಂದ ಪ್ರತಿಭಟನೆ
85 ವರ್ಷ ವಯಸ್ಸಿನ ಪ್ರತಿಭಟನಾಕಾರರಾದ ಶಕುಂತಲಾ ದೇವಿ ಗೋಸ್ವಾಮಿ, ಕಾರಿಡಾರ್ ನಿರ್ಮಾಣವು ವೃಂದಾವನದ ಪರಂಪರೆಯನ್ನು ಹಾಳುಮಾಡುತ್ತದೆ. ಹಾಗೂ ನಾವು ನಿರಾಶ್ರಿತರಾಗುತ್ತೇವೆ ಎಂದು ಬೇಸರ ಹೊರಹಾಕಿದ್ದಾರೆ.
ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದ ಕಾರಿಡಾರ್ ಯೋಜನೆಯ ಮಾದರಿಯಲ್ಲಿ ನಿರ್ಮಿಸಲಾಗುತ್ತಿರುವ ಈ ಕಾರಿಡಾರ್ ವಿರುದ್ಧ ಜನವರಿ 12ರಂದು ಪ್ರತಿಭಟನೆ ಆರಂಭವಾಗಿದೆ. ಜನವರಿ 23ರಂದು ಈ ಬಗ್ಗೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.