ಚೆನ್ನೈ: 1967ರಲ್ಲಿ ಅಣ್ಣ (ಸಿ.ಎನ್ ಅಣ್ಣಾದೊರೈ) ಅಧಿಕಾರಕ್ಕೆ ಬಂದಾಗ ದ್ವಿಭಾಷಾ ನೀತಿಯನ್ನು ಜಾರಿಗೆ ತಂದು ನಮ್ಮ ರಾಜ್ಯಕ್ಕೆ ತಮಿಳುನಾಡು ಎಂದು ಹೆಸರಿಟ್ಟರು. ನಾವು ಹಿಂದಿ ಹೇರಿಕೆಯನ್ನು (Hindi imposition) ವಿರೋಧಿಸುತ್ತೇವೆಯೇ ವಿನಃ ಹಿಂದಿ ಭಾಷೆಯನ್ನಲ್ಲ ಎಂದು ತಮಿಳುನಾಡು ಸಿಎಂ ಸ್ಟಾಲಿನ್ (MK Stalin) ‘ಮೊಝಿಪೋರ್’ (ಭಾಷೆಗಾಗಿ ಸಮರ) ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
“ರಾಜ್ಯ ಭಾಷೆಗಳನ್ನು ರಾಷ್ಟ್ರದ ಅಧಿಕೃತ ಭಾಷೆಗಳನ್ನಾಗಿ ಮಾಡುವ ಕಾನೂನುಗಳನ್ನು ತಿದ್ದುಪಡಿ ಮಾಡಲು ನಾವು ಇನ್ನೂ ಹೆಣಗಾಡುತ್ತಿದ್ದೇವೆ” ಎಂದು ಮುಖ್ಯಮಂತ್ರಿ ಸ್ಟಾಲಿನ್ ಈ ವೇಳೆ ಬೇಸರ ವ್ಯಕ್ತಪಡಿಸಿದ್ದಾರೆ.
ನಾವು ತಮಿಳು ಭಾಷೆಯ ಬಗ್ಗೆ ಮಾತನಾಡುತ್ತೇವೆ ಎಂದ ಮಾತ್ರಕ್ಕೆ ನಾವು ಸಂಕುಚಿತ ಮನಸ್ಸಿನವರು ಎಂದು ಅರ್ಥವಲ್ಲ. ಹಿಂದಿ ಮಾತ್ರವಲ್ಲ, ನಾವು ಯಾವುದೇ ಭಾಷೆಯ ವಿರೋಧಿಯಲ್ಲ ಎಂದು ಸಿಎಂ ಸ್ಟಾಲಿನ್ ಸ್ಪಷ್ಟಪಡಿಸಿದ್ದಾರೆ.
ನಾವು ಹಿಂದಿಯನ್ನು ವಿರೋಧಿಸುವುದಿಲ್ಲ, ಹಿಂದಿ ಹೇರಿಕೆಯನ್ನು ಮಾತ್ರ ವಿರೋಧಿಸುತ್ತೇವೆ. ನಾವು ತಮಿಳನ್ನು ಪ್ರೀತಿಸುತ್ತೇವೆ ಎಂದ ಮಾತ್ರಕ್ಕೆ ಬೇರೆ ಭಾಷೆಯನ್ನು ದ್ವೇಷಿಸುತ್ತೇವೆ ಎಂದು ಅರ್ಥವಲ್ಲ ಎಂದು ಸಿಎಂ ಸ್ಟಾಲಿನ್ ಹೇಳಿದ್ದಾರೆ.
ಒಂದು ಭಾಷೆಯನ್ನು ಕಲಿಯುವುದು ಒಬ್ಬ ವ್ಯಕ್ತಿಯಿಂದ ಆಸಕ್ತಿಯಾಗಿ ಬರಬೇಕು. ಅದನ್ನು ಎಂದಿಗೂ ಬೇರೊಬ್ಬರ ಮೇಲೆ ಹೇರಿಕೆ ಮಾಡಬಾರದು. ಹಿಂದಿ ಭಾಷೆಯನ್ನು ಹೇರಲು ಬಯಸುವವರು ಅದನ್ನು ಪ್ರಾಬಲ್ಯದ ಸಂಕೇತವೆಂದು ಪರಿಗಣಿಸುತ್ತಾರೆ. ಒಂದೇ ಧರ್ಮ ಇರಬೇಕು ಎಂದುಕೊಂಡಂತೆ, ಒಂದೇ ಭಾಷೆ ಇರಬೇಕು ಎಂದು ಭಾವಿಸುತ್ತಾರೆ ಎಂದು ಸಿಎಂ ಸ್ಟಾಲಿನ್ ಟೀಕಿಸಿದ್ದಾರೆ.
ಒಬ್ಬರ ಮಾತೃಭಾಷೆಯನ್ನು ಹಿಂದಿಯೊಂದಿಗೆ ಬದಲಾಯಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇದನ್ನು ನಾವು ವಿರೋಧಿಸುತ್ತೇವೆ. ಹಿಂದಿ ಭಾಷೆಯನ್ನು ಮಾತ್ರ ಇಡೀ ದೇಶದಲ್ಲಿ ಪ್ರತಿಷ್ಠಾಪನೆ ಮಾಡಬೇಕೆಂದುಕೊಂಡವರಿಗೆ ತಮಿಳು ಭಾಷೆ ಮತ್ತು ತಮಿಳುನಾಡು ಕಹಿಯಾಗಿದೆ ಎಂದು ಸಿಎಂ ಸ್ಟಾಲಿನ್ ಹೇಳಿದ್ದಾರೆ.
ಇದೇ ವೇಳೆ ತಮಿಳುನಾಡಿನ ಟ್ಯಾಬ್ಲೋವನ್ನು ತಿರಸ್ಕರಿಸಿದ್ದಕ್ಕಾಗಿ ಮುಖ್ಯಮಂತ್ರಿ ಸ್ಟಾಲಿನ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಪುನೀತ್ಗೆ ತಮಿಳುನಾಡು ವಿಧಾನಸಭೆ ಅಧಿವೇಶನದಲ್ಲಿ ಗೌರವ; ಮೊದಲ ದಿನವೇ ಅಪ್ಪು ಬಗ್ಗೆ ಮಾತು