ನಮ್ಮದು 40 ವರ್ಷದ ಸ್ನೇಹ, ಆಗ ನಮ್ಮ ಕೂದಲು ಕಪ್ಪಗಿತ್ತು; ರಾಧಾಕೃಷ್ಣನ್ ಜೊತೆಗಿನ ಸಂಬಂಧದ ಮೆಲುಕು ಹಾಕಿದ ಮೋದಿ

ಎನ್​ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿರುವ ಸಿ.ಪಿ ರಾಧಾಕೃಷ್ಣನ್ ಆರ್​ಎಸ್​ಎಸ್​ ಹಿನ್ನೆಲೆಯಿಂದ ಬಂದವರು. ಹೀಗಾಗಿ, ಅವರು ಪ್ರಧಾನಿ ನರೇಂದ್ರ ಮೋದಿಯವರಿಗೂ ಬಹಳ ಹಿಂದಿನ ಪರಿಚಯ. ಇಂದು ರಾಧಾಕೃಷ್ಣನ್ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ಪ್ರಧಾನಿ ಮೋದಿ ತಮ್ಮ ಹಾಗೂ ಸಿಪಿ ರಾಧಾಕೃಷ್ಣನ್ ನಡುವಿನ ಸಂಬಂಧದ ಬಗ್ಗೆ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ನಮ್ಮದು 40 ವರ್ಷದ ಸ್ನೇಹ, ಆಗ ನಮ್ಮ ಕೂದಲು ಕಪ್ಪಗಿತ್ತು; ರಾಧಾಕೃಷ್ಣನ್ ಜೊತೆಗಿನ ಸಂಬಂಧದ ಮೆಲುಕು ಹಾಕಿದ ಮೋದಿ
Modi With Cp Radhakrishnan

Updated on: Aug 20, 2025 | 9:33 PM

ನವದೆಹಲಿ, ಆಗಸ್ಟ್ 20: ಎನ್​ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿರುವ ಮಹಾರಾಷ್ಟ್ರದ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ (CP Radhakrishnan) ಪ್ರಧಾನಿ ನರೇಂದ್ರ ಮೋದಿಯವರ ಹಳೆಯ ಸ್ನೇಹಿತರು. ಈ ವಿಷಯವನ್ನು ಖುದ್ದು ಪ್ರಧಾನಿ ಮೋದಿಯೇ (PM Narendra Modi) ಹೇಳಿಕೊಂಡಿದ್ದಾರೆ. ತಮ್ಮಿಬ್ಬರ ಬಾಂಧವ್ಯದ ಬಗ್ಗೆ ಮೋದಿ ಮಾತನಾಡಿದ್ದಾರೆ. “ನಾವು 40 ವರ್ಷಗಳಿಗೂ ಹೆಚ್ಚು ಕಾಲದಿಂದ ಸ್ನೇಹಿತರಾಗಿದ್ದೇವೆ. ಆಗ ನನ್ನ ಕೂದಲೂ ಕಪ್ಪಾಗಿತ್ತು, ರಾಧಾಕೃಷ್ಣನ್ ಅವರ ತಲೆಯಲ್ಲೂ ಕೂದಲಿತ್ತು” ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸಂಸತ್ತಿನ ಆವರಣದಲ್ಲಿ ನಡೆದ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ತಮಾಷೆಯಾಗಿ ತಮ್ಮಿಬ್ಬರ ಸ್ನೇಹದ ಬಗ್ಗೆ ಮಾತನಾಡಿದ್ದಾರೆ.

ಸಿಪಿ ರಾಧಾಕೃಷ್ಣನ್ ಅವರ ಸರಳ ಜೀವನಶೈಲಿ ಮತ್ತು ಸಾರ್ವಜನಿಕ ಸೇವೆಗೆ ಸಮರ್ಪಣೆಯನ್ನು ಪ್ರಧಾನಿ ಮೋದಿ ಹೊಗಳಿದರು. “ರಾಧಾಕೃಷ್ಣನ್ ಅವರಿಗೆ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಇರಬಹುದು, ಆದರೆ ಅವರು ರಾಜಕೀಯದಲ್ಲಿ ಎಂದಿಗೂ ಆಟವಾಡಲಿಲ್ಲ” ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಉಪರಾಷ್ಟ್ರಪತಿ ಚುನಾವಣೆಗೆ ತಮ್ಮ ನಾಮಪತ್ರ ಸಲ್ಲಿಸಿದರು.

ಇದನ್ನೂ ಓದಿ: Video: ಪ್ರಧಾನಿ ಮೋದಿ, ಎನ್​​ಡಿಎ ನಾಯಕರ ಸಮ್ಮುಖದಲ್ಲಿ ಉಪರಾಷ್ಟ್ರಪತಿ ಹುದ್ದೆಗೆ ಸಿಪಿ ರಾಧಾಕೃಷ್ಣನ್ ನಾಮಪತ್ರ ಸಲ್ಲಿಕೆ

ಇಂದು ನಾಮಪತ್ರ ಸಲ್ಲಿಸಿದ ಬಳಿಕವೂ ಎಕ್ಸ್​ ಪೋಸ್ಟ್​ನಲ್ಲಿ ರಾಧಾಕೃಷ್ಣನ್ ಅವರ ಬಗ್ಗೆ ಬರೆದಿರುವ ಪ್ರಧಾನಿ ಮೋದಿ, “ಭಾರತದ ಉಪರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಸುವಾಗ ತಿರು ಸಿಪಿ ರಾಧಾಕೃಷ್ಣನ್ ಅವರೊಂದಿಗೆ ನಾನು, ಸಚಿವರು, ಪಕ್ಷದ ಸಹೋದ್ಯೋಗಿಗಳು ಮತ್ತು ಎನ್‌ಡಿಎ ನಾಯಕರು ಇದ್ದೆವು. ಅವರು ಅತ್ಯುತ್ತಮ ಉಪರಾಷ್ಟ್ರಪತಿಯಾಗುತ್ತಾರೆ ಮತ್ತು ರಾಷ್ಟ್ರೀಯ ಪ್ರಗತಿಯತ್ತ ನಮ್ಮ ಪ್ರಯಾಣವನ್ನು ಉತ್ಕೃಷ್ಟಗೊಳಿಸುತ್ತಾರೆ ಎಂಬ ವಿಶ್ವಾಸ ಎನ್‌ಡಿಎ ಕುಟುಂಬಕ್ಕಿದೆ” ಎಂದು ‘ಎಕ್ಸ್’ನಲ್ಲಿ ಬರೆದಿದ್ದಾರೆ.


ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಜೆ.ಪಿ. ನಡ್ಡಾ, ಕಿರಣ್ ರಿಜಿಜು ಮತ್ತು ಅರ್ಜುನ್ ರಾಮ್ ಮೇಘವಾಲ್ ಕೂಡ ರಾಧಾಕೃಷ್ಣನ್ ಅವರ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸುಮಾರು 20 ಪ್ರಸ್ತಾವಕರು ಮತ್ತು 20 ಬೆಂಬಲಿಗರ ಸಮ್ಮುಖದಲ್ಲಿ ರಾಧಾಕೃಷ್ಣನ್ ತಮ್ಮ ನಾಮಪತ್ರ ಸಲ್ಲಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 9:31 pm, Wed, 20 August 25