ಮೊಬೈಲ್ ಉತ್ಪಾದನೆಯಲ್ಲಿ ಚೀನಾವನ್ನು ನಾವು ಹಿಂದಿಕ್ಕಲಿದ್ದೇವೆ: ರವಿಶಂಕರ್ ಪ್ರಸಾದ್
ಸಾಕಷ್ಟು ಕಂಪೆನಿಗಳು ಭಾರತದಲ್ಲಿ ಮೊಬೈಲ್ ನಿರ್ಮಾಣ ಘಟಕ ಸ್ಥಾಪನೆ ಮಾಡಿವೆ. ಇದರ ಪರಿಣಾಮವಾಗಿ, 2017ರಲ್ಲಿ ಭಾರತ ವಿಶ್ವದ ಎರಡನೇ ಅತಿ ಹೆಚ್ಚು ಮೊಬೈಲ್ ಉತ್ಪಾದನಾ ದೇಶವಾಗಿ ಹೊರ ಹೊಮ್ಮಿತ್ತು.
ನವದೆಹಲಿ: ಮೊಬೈಲ್ ಉತ್ಪಾದನೆಯಲ್ಲಿ ಭಾರತ ದಿನದಿಂದ ದಿನಕ್ಕೆ ಮೇಲೇರುತ್ತಲೇ ಇದೆ. ಮುಂದಿನ ವರ್ಷಗಳಲ್ಲಿ ಮೊಬೈಲ್ ಉತ್ಪಾದನೆಯಲ್ಲಿ ನಾವು ಚೀನಾವನ್ನು ಹಿಂದಿಕ್ಕುವ ಗುರಿ ಹೊಂದಿದ್ದೇವೆ ಎಂದು ದೂರ ಸಂಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಇಂದು ಹೇಳಿದರು.
ಉತ್ಪಾದನೆ-ಸಂಬಂಧಿತ ಪ್ರೋತ್ಸಾಹ (ಪಿಎಲ್ಐ) ಯೋಜನೆ ಅಡಿಯಲ್ಲಿ ವಿಶ್ವದ ಪ್ರಮುಖ ಮೊಬೈಲ್ ತಯಾರಿಕಾ ಸಂಸ್ಥೆಗಳನ್ನು ಆಕರ್ಷಣೆ ಮಾಡುವುದು ನಮ್ಮ ಉದ್ದೇಶ. ಈ ಮೂಲಕ ಮೊಬೈಲ್ ಉತ್ಪಾದನೆಯಲ್ಲಿ ಭಾರತವನ್ನು ಮೊದಲ ಸ್ಥಾನಕ್ಕೆ ತೆಗೆದುಕೊಂಡು ಹೋಗಬೇಕು ಅನ್ನೋದು ನಮ್ಮ ಉದ್ದೇಶ ಎಂದು ರವಿಶಂಕರ್ ಪ್ರಸಾದ್ ತಿಳಿಸಿದರು.
ಭಾರತವನ್ನು ಎಲೆಕ್ಟ್ರಾನಿಕ್ ಸಾಧನಗಳ ಹಬ್ ಅನ್ನಾಗಿ ಮಾಡೋದು ನಮ್ಮ ಉದ್ದೇಶ. ಮೊಬೈಲ್ ಉತ್ಪಾದನೆಯಲ್ಲಿ ಎರಡನೇ ಸ್ಥಾನಕ್ಕೇರಬೇಕು ಎಂದು ನಾವು ಅಂದುಕೊಂಡಿದ್ದೆವು. ಅದನ್ನು ಮಾಡಿದ್ದೇವೆ. ಈಗ ಚೀನಾವನ್ನು ಹಿಂದಿಕ್ಕಿ ಮೊದಲ ಸ್ಥಾನದಲ್ಲಿರಬೇಕು ಎನ್ನುವ ಗುರಿ ಹೊಂದಿದ್ದೇವೆ ಎಂದು ರವಿಶಂಕರ್ ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಮೊಬೈಲ್ ಬಳಕೆ ಗಣನೀಯವಾಗಿ ಏರಿಕೆ ಕಂಡಿದೆ. ಹೀಗಾಗಿ, ಸಾಕಷ್ಟು ಕಂಪೆನಿಗಳು ಭಾರತದಲ್ಲಿ ಮೊಬೈಲ್ ನಿರ್ಮಾಣ ಘಟಕ ಸ್ಥಾಪನೆ ಮಾಡಿವೆ. ಇದರ ಪರಿಣಾಮವಾಗಿ, 2017ರಲ್ಲಿ ಭಾರತ ವಿಶ್ವದ ಎರಡನೇ ಅತಿ ಹೆಚ್ಚು ಮೊಬೈಲ್ ಉತ್ಪಾದನಾ ದೇಶವಾಗಿ ಹೊರ ಹೊಮ್ಮಿತ್ತು.
2026ರ ವೇಳೆಗೆ ಎಲೆಕ್ಟ್ರಾನಿಕ್ ಸಾಧನಗಳ ಉತ್ಪಾದನೆಯಿಂದ 26 ಲಕ್ಷ ಕೋಟಿ ರೂಪಾಯಿ ಗಳಿಕೆ ಮಾಡುವ ಉದ್ದೇಶವನ್ನು ಭಾರತ ಇಟ್ಟುಕೊಂಡಿದೆ. ಈ ಪೈಕಿ 13 ಲಕ್ಷ ಕೋಟಿ ರೂಪಾಯಿ ಮೊಬೈಲ್ ಕ್ಷೇತ್ರದಿಂದಲೇ ಬರುವ ಸಾಧ್ಯತೆ ಇದೆ.
ಆ್ಯಪಲ್ ತಂದ ಆಪತ್ತು.. ಮೊಬೈಲ್ ಚಾರ್ಜ್ ಹಾಕಿ ಜಳಕ ಮಾಡಿದ ಮಹಿಳೆ ಸಾವು!