Weather Today: ಕರ್ನಾಟಕದಲ್ಲಿ ಮಳೆಯಿಂದ 1 ವಾರದಲ್ಲಿ 34 ಜನ ಸಾವು; ಈ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಣೆ
Rain Updates: ನಿರಂತರವಾಗಿ ಧಾರಾಕಾರ ಮಳೆಯಾಗುತ್ತಿರುವ ಕೊಡಗು ಜಿಲ್ಲೆಯಲ್ಲಿ ಇಂದು ಆರೆಂಜ್ ಅಲರ್ಟ್ ನೀಡಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ ಮತ್ತು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಬೆಂಗಳೂರು: ಕರ್ನಾಟಕದಲ್ಲಿ ಇನ್ನೂ ಮಳೆಯ ಆರ್ಭಟ (Rainfall) ಮುಂದುವರೆದಿದೆ. ರಾಜ್ಯಾದ್ಯಂತ ಕಳೆದೊಂದು ವಾರದಲ್ಲಿ ಮಳೆಯಿಂದ ಮೃತಪಟ್ಟವರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ. ಕರ್ನಾಟಕದ (Karnataka Rain) ಹಲವು ಜಿಲ್ಲೆಗಳಲ್ಲಿ ಇಂದು ಕೂಡ ಆರೆಂಜ್ ಅಲರ್ಟ್ (Orange Alert) ಘೋಷಿಸಲಾಗಿದೆ. ನೆರೆಯ ರಾಜ್ಯಗಳಲ್ಲೂ ವರುಣನ ಅಬ್ಬರ ಮುಂದುವರೆದಿದ್ದು, ಮುಂದಿನ ಕೆಲವು ದಿನಗಳವರೆಗೆ ಮಹಾರಾಷ್ಟ್ರ, ಕೇರಳ, ಒಡಿಶಾ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಲಿದೆ. ಆ. 1ರಿಂದ ರಾಜ್ಯದ ವಿವಿಧೆಡೆ ಮಳೆ ಚುರುಕುಗೊಂಡ ಬಳಿಕ ಶನಿವಾರದವರೆಗೆ ಮಳೆ ಸಂಬಂಧಿ ಅನಾಹುತಗಳಲ್ಲಿ ಒಟ್ಟು 27 ಮಂದಿ ಮೃತಪಟ್ಟಿದ್ದರು. ಭಾನುವಾರ ಮತ್ತೆ 5 ಮಂದಿ ಮೃತಪಟ್ಟಿದ್ದು ಒಟ್ಟು ಮೃತಪಟ್ಟವರ ಸಂಖ್ಯೆ 34ಕ್ಕೇರಿದೆ.
ಕೊಡಗು, ಚಿಕ್ಕಮಗಳೂರು ಜಿಲ್ಲೆಗಲ್ಲಿ ಭಾರೀ ಮಳೆಯಾಗಿದ್ದರೆ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಬೆಳಗಾವಿ ಜಿಲ್ಲೆಗಳಲ್ಲೂ ಉತ್ತಮ ಮಳೆ ಸುರಿದಿದೆ. ಇನ್ನು ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ. ನಿರಂತರವಾಗಿ ಧಾರಾಕಾರ ಮಳೆಯಾಗುತ್ತಿರುವ ಕೊಡಗು ಜಿಲ್ಲೆಯಲ್ಲಿ ಇಂದು ಆರೆಂಜ್ ಅಲರ್ಟ್ ನೀಡಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ ಮತ್ತು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಛತ್ತೀಸ್‌ಗಢ ಮತ್ತು ಒಡಿಶಾದ ಕೆಲವು ಭಾಗಗಳಲ್ಲಿ ಆಗಸ್ಟ್ 9ರಂದು ಅತಿ ಹೆಚ್ಚು ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗೋವಾ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಆಗಸ್ಟ್ 11ರವರೆಗೆ ಇದೇ ರೀತಿಯ ಹವಾಮಾನ ಮುಂದುವರಿಯಬಹುದು. ಆಗಸ್ಟ್ 9ರವರೆಗೆ ರಾಜಸ್ಥಾನದಲ್ಲಿ ಗುಡುಗು, ಮಿಂಚು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ: Karnataka Rain: ರಾಜ್ಯಾದ್ಯಂತ ಮುಂದಿನ 2 ದಿನ ಭಾರೀ ಮಳೆಯಾಗಲಿದೆ; ಹವಾಮಾನ ಇಲಾಖೆ ಮುನ್ಸೂಚನೆ
ಉತ್ತರಾಖಂಡದಲ್ಲಿ ಆಗಸ್ಟ್ 10ರಂದು ಅತಿ ಹೆಚ್ಚು ಮಳೆ ಬೀಳಬಹುದು. ರಾಜಸ್ಥಾನದಲ್ಲಿ ಆಗಸ್ಟ್ 10 ಮತ್ತು 11ರಂದು ಮಳೆ ಹೆಚ್ಚಾಗಲಿದೆ. ಮಧ್ಯಪ್ರದೇಶ ಮತ್ತು ವಿದರ್ಭದಲ್ಲಿ ಆಗಸ್ಟ್ 9 ಮತ್ತು ಆಗಸ್ಟ್ 11ರ ನಡುವೆ ಅತಿ ಹೆಚ್ಚು ಮಳೆ ಬೀಳಬಹುದು. ಮುಂದಿನ ಐದು ದಿನಗಳಲ್ಲಿ ಕೊಂಕಣ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಮಾನ್ಸೂನ್ ಮಳೆ ಜೋರಾಗಲಿದೆ. ಮಹಾರಾಷ್ಟ್ರದ ಥಾಣೆ, ರಾಯಗಢ ಮತ್ತು ಪಾಲ್ಘರ್ ಅಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಕರ್ನಾಟಕದ ಹಲವಾರು ಭಾಗಗಳಲ್ಲಿ ಭಾರೀ ಮಳೆ ಸುರಿದು, ವ್ಯಾಪಕ ಹಾನಿಯನ್ನುಂಟುಮಾಡಿದೆ. ಮಳೆಯಿಂದಾಗಿ ಒಟ್ಟು 3,559 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದರೆ, 3,162 ಕಿ.ಮೀ. ರಸ್ತೆಗಳು, 8,445 ಕಿ.ಮೀ. ಗ್ರಾಮೀಣ ರಸ್ತೆಗಳು, 1,068 ಸೇತುವೆಗಳು ಮತ್ತು ಮೋರಿಗಳು, 4,531 ಶಾಲೆಗಳು ಹಾನಿಗೊಳಗಾಗಿವೆ.
ಇದನ್ನೂ ಓದಿ: ಮಳೆಯಿಂದಾಗಿ ಬೆಂಗಳೂರಿನಲ್ಲಿ ಕುಸಿದು ಬಿದ್ದ ಕಟ್ಟಡ: ಅದೃಷವಶಾತ್ ತಪ್ಪಿದ ಭಾರಿ ಅನಾಹುತ
ಒಡಿಶಾ ಮತ್ತು ಕೊಂಕಣ ಪ್ರದೇಶದ ಕೆಲವು ಭಾಗಗಳಲ್ಲಿ ಭಾನುವಾರ ಅತಿ ಹೆಚ್ಚು ಮಳೆಯಾಗುತ್ತಿದೆ. ಮುಂದಿನ 3ರಿಂದ 4 ದಿನಗಳಲ್ಲಿ ಮಧ್ಯ ಭಾರತದಲ್ಲಿ ಮಳೆ ಹೆಚ್ಚಾಗುತ್ತದೆ ಎಂದು ಐಎಂಡಿ ಮಹಾನಿರ್ದೇಶಕ ಎಂ. ಮಹಾಪಾತ್ರ ಹೇಳಿದ್ದಾರೆ. ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಮಳೆಯ ಪ್ರಮಾಣವು ಕಡಿಮೆಯಾಗಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:39 am, Mon, 8 August 22