ದೆಹಲಿ: ಕೇಂದ್ರ ಸರ್ಕಾರದ ಎಲ್ಲ ವೆಬ್ಸೈಟ್ಗಳಲ್ಲಿ ಗೃಹ ವ್ಯವಹಾರಗಳ ಸಚಿವಾಲಯ (MHA) ಮೊದಲ ಸ್ಥಾನದಲ್ಲಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಹೇಳಿದೆ. 2021ರಲ್ಲಿ ನಾಸ್ಕಾಂ (NASSCOM)ಮತ್ತು ಕೆಪಿಎಂಜಿ ( KPMG)ಸಹಯೋಗದಲ್ಲಿ ಆಡಳಿತಾತ್ಮಕ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ ನಡೆಸಿದ ರಾಷ್ಟ್ರೀಯ ಇ ಆಡಳಿತ ಸೇವೆ ನಿರ್ವಹಣೆ ಮೌಲ್ಯಮಾಪನದಲ್ಲಿ ಎಂಎಚ್ಎ ಮೊದಲ ಸ್ಥಾನಗಳಿಸಿದೆ. ಈ ಬಗ್ಗೆ ಪ್ರಕಟಣೆ ಬಿಡುಗಡೆ ಮಾಡಿರುವ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೊ (PIB), ಇದು ನಿರ್ದಿಷ್ಟ ಅವಧಿಯ ಮೌಲ್ಯಮಾಪನವಾಗಿದ್ದು ರಾಜ್ಯ , ಕೇಂದ್ರಾಡಳಿತ ಪ್ರದೇಶ ಮತ್ತು ಕೇಂದ್ರ ಸರ್ಕಾರ ನಾಗರಿಕರಿಗೆ ಆನ್ಲೈನ್ ಸೇವೆಗಳನ್ನು ನೀಡುವುದನ್ನು ಉತ್ತಮಗೊಳಿಸುವ ಉದ್ದೇಶವನ್ನು ಹೊಂದಿದೆ. ಮೌಲ್ಯಮಾಪನದ ನಂತರ ಇತ್ತೀಚೆಗೆ ಇದರ ಫಲಿತಾಂಶ ಬಿಡುಗಡೆಯಾಗಿದ್ದು, ಕೇಂದ್ರ ಸಚಿವಾಲಯಗಳ ಪೋರ್ಟಲ್ಗಳ ಪೈಕಿ ಗೃಹ ವ್ಯವಹಾರಗಳ ಸಚಿವಾಲಯದ ವೆಬ್ ಸೈಟ್ ನಂಬರ್ 1 ಸ್ಥಾನದಲ್ಲಿದೆ. ಅದೇ ವೇಳೆ ಕೇಂದ್ರ ಸಚಿವಾಲಯ ಸೇವೆಗಳ ಪೋರ್ಟಲ್ಗಳಲ್ಲಿ ಡಿಜಿಟಲ್ ಪೊಲೀಸ್ ಪೋರ್ಟಲ್ ಎರಡನೇ ಸ್ಥಾನದಲ್ಲಿದೆ ಎಂದು ಪಿಐಬಿ ಹೇಳಿದೆ. ಈ ಪ್ರಕ್ರಿಯೆಯಲ್ಲಿ ಸೇವಾ ಪೋರ್ಟಲ್ ಗಳನ್ನು ಸಚಿವಾಲಯ, ಇಲಾಖೆ ಪೋರ್ಟಲ್ ಗಳೊಂದಿಗೆ ಮೌಲ್ಯಮಾಪನ ಮಾಡಲಾಗಿದೆ.
ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೊದ (NCRB) ಡಿಜಿಟಲ್ ಪೊಲೀಸ್ ಪೋರ್ಟಲ್ನ್ನು https://digitalpolice.gov.in ಸರ್ವೀಸ್ ಪೋರ್ಟಲ್ ಅಡಿಯಲ್ಲಿ ಮೌಲ್ಯಮಾಪನ ಮಾಡಲಾಗಿದೆ, ಅದೇ ರೀತಿ ಸಚಿವಾಲದ ಪೋರ್ಟಲ್ಗಳ ಅಡಿಯಲ್ಲಿ ಗೃಹ ವ್ಯವಹಾರಗಳ ಸಚಿವಾಲಯದ ವೆಬ್ಸೈಟ್ https://mha.gov.in ನ್ನು ಮೌಲ್ಯ ಮಾಪನ ಮಾಡಲಾಗಿದೆ.
ಎಲ್ಲ ಸರ್ಕಾರಿ ಪೋರ್ಟಲ್ ಗಳನ್ನು ಮೌಲ್ಯಮಾಪನಕ್ಕಾಗಿ ಎರಡು ಪ್ರಧಾನ ವಿಭಾಗಗಳಾಗಿ ವರ್ಗೀಕರಿಸಲಾಗಿದೆ. ಅವುಗಳೆಂದರೆ ರಾಜ್ಯ/ಕೇಂದ್ರಾಡಳಿತ ಪ್ರದೇಶ /ಕೇಂದ್ರ ಸಚಿವಾಲಯದ ಪೋರ್ಟಲ್ ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶ /ಕೇಂದ್ರ ಸಚಿವಾಲಯದ ಸೇವಾ ಪೋರ್ಟಲ್ ಗಳು. ಕೇಂದ್ರ ಸಚಿವಾಲಯದ ಪೋರ್ಟಲ್ ಗಳ ಮೌಲ್ಯಮಾಪನಕ್ಕಿರುವ ನಿಯತಾಂಕಗಳೆಂದರೆ ಪ್ರವೇಶ, ವಿಷಯದ ಲಭ್ಯತೆ, ಸುಲಭ ಬಳಕೆ, ಮಾಹಿತಿ ಸುರಕ್ಷೆ ಮತ್ತು ಗೌಪ್ಯತೆ. ಕೇಂದ್ರ ಸಚಿವಾಲಯದ ಸೇವಾ ಪೋರ್ಟಲ್ಗಳ ಮೌಲ್ಯಮಾಪನಕ್ಕೆ ಮೂರು ನಿಯತಾಂಕಗಳನ್ನು ಪರಿಗಣಿಸಲಾಗಿತ್ತು ಅವುಗಳೆಂದರೆ ಸೇವಾ ವಿತರಣೆ, ಇಂಟಗ್ರೇಟೆಡ್ ಸರ್ವೀಸ್ ಡೆಲಿವರಿ, ಸ್ಟೇಟಸ್ ಮತ್ತು ರಿಕ್ವೆಸ್ಟಿಂಗ್ ಟ್ರ್ಯಾಕಿಂಗ್ ಎಂದು ಪಿಐಬಿ ಹೇಳಿದೆ.