ಕೊಲ್ಕತ್ತಾ: ಪಶ್ಚಿಮ ಬಂಗಾಳ ಸರ್ಕಾರದ ಧೋರಣೆಯಿಂದ ರಾಜ್ಯದ ರೈತರಿಗೆ PM-Kisan ಯೋಜನೆಯ ಲಾಭ ದೊರೆಯುತ್ತಿಲ್ಲ ಎಂದು ಕಳೆದ ಕೆಲವು ದಿನಗಳ ಹಿಂದೆ ಪ್ರಧಾನಿ ಮೋದಿ ಟೀಕಾ ಪ್ರಹಾರ ನಡೆಸಿದ್ದರು. ಇದರ ಬೆನ್ನಲ್ಲೇ ಇದೀಗ, ಸಿಎಂ ಮಮತಾ ಬ್ಯಾನರ್ಜಿ ರಾಜ್ಯದಲ್ಲಿ ಯೋಜನೆ ಜಾರಿಮಾಡುವ ಸೂಚನೆ ತೋರಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಸಿಎಂ ಬ್ಯಾನರ್ಜಿ ಕೇಂದ್ರ ಸರ್ಕಾರ ಸೃಷ್ಟಿಸಿದ ಪೋರ್ಟಲ್ನಲ್ಲಿ ಸುಮಾರು 20 ಲಕ್ಷ ರೈತರ ಹೆಸರನ್ನು ಸೇರಿಸಲಾಗಿದೆ. ಆದರೆ, ಇತ್ತೀಚೆಗೆ ಕೇಂದ್ರದಿಂದ ನಮಗೆ ಬಂದ ಪತ್ರವೊಂದರಲ್ಲಿ 21.7 ಲಕ್ಷ ರೈತರು ನೋಂದಣಿ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ನೀಡಿದ್ದರು ಎಂದು ಹೇಳಿದರು.
ಹಾಗಾಗಿ, ಕೇಂದ್ರ ಸರ್ಕಾರ ಈ ಕುರಿತು ಪರಿಶೀಲನೆ ನಡೆಸಲು ನಮಗೆ ಸೂಚಿಸಿತ್ತು. ನನಗೆ ಈ ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳುವ ಯಾವ ಉದ್ದೇಶವಿಲ್ಲ. ಯಾಕಂದ್ರೆ ನನ್ನ ರಾಜ್ಯದ ರೈತರ ಬಗ್ಗೆ ನನಗೆ ತುಂಬಾನೇ ಅಭಿಮಾನವಿದೆ. ಹೀಗಾಗಿ, ಪರಿಶೀಲನೆ ಪ್ರಕ್ರಿಯೆಯನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರಕ್ಕೆ ಮಾಹಿತಿ ಹಂಚಿಕೊಳ್ಳಲು ಸೂಚಿಸಿದ್ದೇನೆ ಎಂದು ಸಿಎಂ ಬ್ಯಾನರ್ಜಿ ಹೇಳಿದರು.