ತೃಣಮೂಲ ಕಾಂಗ್ರೆಸ್ ರಾಜ್ಯಸಭೆ ಸಂಸದೆ ಅರ್ಪಿತಾ ಘೋಷ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅರ್ಪಿತಾ ಘೋಷ್ ನಿನ್ನೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದು, ಅವರು ಅದನ್ನು ಅಂಗೀಕಾರ ಮಾಡಿದ್ದಾರೆ. 2020ರ ಏಪ್ರಿಲ್ 3ರಂದು ಅವರು ರಾಜ್ಯಸಭೆಗೆ ಚುನಾಯಿತರಾಗಿದ್ದು, ಇನ್ನೂ 5ವರ್ಷಗಳ ಕಾಲ ಅಧಿಕಾರದ ಅವಧಿ ಬಾಕಿ ಇತ್ತು. ಆದರೆ ಅದಕ್ಕೂ ಮೊದಲೇ ರಾಜೀನಾಮೆ ಸಲ್ಲಿಸಿದ್ದಾರೆ. ಅದಕ್ಕೂ ಮೊದಲು 2014ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಬಾಲುರ್ಘಾಟ್ ಕ್ಷೇತ್ರದಿಂದ ಗೆದ್ದು ಸಂಸದರಾಗಿ ಕಾರ್ಯನಿರ್ವಹಿಸಿದ್ದಾರೆ. ಅದರೊಂದಿಗೆ ಅವರು ಥಿಯೇಟರ್ ಆರ್ಟಿಸ್ಟ್. ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.
ಇನ್ನು ಅರ್ಪಿತಾ ಘೋಷ್ ಪಕ್ಷದ ಇಚ್ಛೆಗೆ ಅನುಗುಣವಾಗಿಯೇ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಪಕ್ಷದ ಮೂಲಗಳಿಂತ ತಿಳಿದುಬಂದಿದೆ. ಹಾಗಂತ ಅವರ ರಾಜೀನಾಮೆಗೆ ಕಾರಣವೇನು ಎಂಬುದಿನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಟಿಎಂಸಿ ಕಾರ್ಯಕಾರಿ ಅಧಿಕಾರಿಯೊಬ್ಬರು, ಬೇರೆ ಹೊಸಬರಿಗಾಗಿ ಯಾರಾದರೂ ಜಾಗ ಬಿಟ್ಟುಕೊಡಲೇಬೇಕಾಗಿತ್ತು ಎಂದು ಹೇಳಿದ್ದಾರೆ.
ಇತ್ತೀಚೆಗೆ ಅಮಾನತಾಗಿದ್ದರು
ರಾಜ್ಯಸಭೆಯಲ್ಲಿ ನಡೆಯುವ ಪ್ರತಿಭಟನೆಗಳಲ್ಲಿ ಸದಾ ಮುಂಚೂಣಿಯಲ್ಲಿ ಇರುತ್ತಿದ್ದ ಅರ್ಪಿತಾ ಘೋಷ್ರನ್ನು ಇತ್ತೀಚೆಗೆ ಆಕೆಯ ಮೂವರು ಸಹೋದ್ಯೋಗಿಗಳೊಂದಿಗೆ ಅಮಾನತುಗೊಳಿಸಲಾಗಿತ್ತು. ಅದಾದ ಮೇಲೆ ಕೂಡ ಅವರೆಲ್ಲ ಸದನದ ಹೊರಗೆ ಪ್ರತಿಭಟನೆ ನಡೆಸಿದ್ದರು. ಅಂದು ಸದನದ ಕೊನೆಯಲ್ಲಿ, ತಮ್ಮ ತಮ್ಮ ಬ್ಯಾಗ್ಗಳನ್ನು ತೆಗೆದುಕೊಳ್ಳಲು ಒಳಗೆ ಬಂದಾಗಲೂ ಕೂಡ ಭದ್ರತಾ ಸಿಬ್ಬಂದಿಯೊಂದಿಗೆ ಜಗಳ ಮಾಡಿದ್ದರು. ಟೇಬಲ್ಗೆ ಹಾಕಿದ್ದ ಗಾಜಿನ ಹಲಗೆಗಳನ್ನು ಮುರಿದು ಹಾಕಿದ್ದರು. ಈ ಗಲಾಟೆಯಲ್ಲಿ ಮಹಿಳಾ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ದೂರು ನೀಡಿದ್ದರು.
ಇದನ್ನೂ ಓದಿ: ಹೈದರಾಬಾದ್: ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಪ್ರಕರಣದ ಆರೋಪಿಯ ಮೃತದೇಹ ರೈಲ್ವೆ ಹಳಿಯಲ್ಲಿ ಪತ್ತೆ