Birbhum Violence ಬಿರ್‌ಭೂಮ್​​ನಲ್ಲಿ ಸಜೀವ ದಹನ ಮಾಡುವ ಮುನ್ನ ಥಳಿಸಲಾಗಿತ್ತು: ಮರಣೋತ್ತರ ಪರೀಕ್ಷೆ ವರದಿ

| Updated By: ರಶ್ಮಿ ಕಲ್ಲಕಟ್ಟ

Updated on: Mar 24, 2022 | 3:32 PM

ಮಂಗಳವಾರ ಮುಂಜಾನೆ ಅಪರಿಚಿತರಿಂದ ಬೆಂಕಿ ಹಚ್ಚಲಾಗಿದೆ ಎನ್ನಲಾದ ಮನೆಗಳಲ್ಲಿ ಸುಟ್ಟು ಕರಕಲಾದ ಶವಗಳ ಪರೀಕ್ಷೆಯನ್ನು ನಡೆಸಿದ ವಿಧಿವಿಜ್ಞಾನ ತಜ್ಞರ ಪ್ರಾಥಮಿಕ ಸಂಶೋಧನೆಗಳ ಪ್ರಕಾರ, ಸಂತ್ರಸ್ತರನ್ನು ಮೊದಲು ತೀವ್ರವಾಗಿ ಥಳಿಸಿ ನಂತರ ಜೀವಂತವಾಗಿ ಸುಡಲಾಯಿತು.

Birbhum Violence ಬಿರ್‌ಭೂಮ್​​ನಲ್ಲಿ ಸಜೀವ ದಹನ ಮಾಡುವ ಮುನ್ನ ಥಳಿಸಲಾಗಿತ್ತು: ಮರಣೋತ್ತರ ಪರೀಕ್ಷೆ ವರದಿ
ವಿಧಿವಿಜ್ಞಾನ ತಜ್ಞರು ಪರೀಕ್ಷೆ ನಡೆಸುತ್ತಿರುವುದು
Follow us on

ರಾಮ್‌ಪುರಹತ್: ಪಶ್ಚಿಮ ಬಂಗಾಳದ ಬಿರ್‌ಭೂಮ್ (Birbhum)ಜಿಲ್ಲೆಯ ಬೊಗ್ಟುಯಿ ಗ್ರಾಮದಲ್ಲಿ  ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ ಎಂಟು ಜನರನ್ನು ಸಜೀವ ದಹನ ಮಾಡುವ ಮುನ್ನ ಥಳಿಸಲಾಗಿತ್ತು ಎಂದು ಅವರ ಮರಣೋತ್ತರ ಪರೀಕ್ಷೆಯಿಂದ ತಿಳಿದು ಬಂದಿದೆ.  ಮಂಗಳವಾರ ಮುಂಜಾನೆ ಅಪರಿಚಿತರಿಂದ ಬೆಂಕಿ ಹಚ್ಚಲಾಗಿದೆ ಎನ್ನಲಾದ ಮನೆಗಳಲ್ಲಿ ಸುಟ್ಟು ಕರಕಲಾದ ಶವಗಳ ಪರೀಕ್ಷೆಯನ್ನು ನಡೆಸಿದ ವಿಧಿವಿಜ್ಞಾನ ತಜ್ಞರ ಪ್ರಾಥಮಿಕ ಸಂಶೋಧನೆಗಳ ಪ್ರಕಾರ, ಸಂತ್ರಸ್ತರನ್ನು ಮೊದಲು ತೀವ್ರವಾಗಿ ಥಳಿಸಿ ನಂತರ ಜೀವಂತವಾಗಿ ಸುಡಲಾಯಿತು ಎಂದು ಅಧಿಕಾರಿಯೊಬ್ಬರು ರಾಮ್‌ಪುರಹತ್ (Rampurhat) ಆಸ್ಪತ್ರೆಯಿಂದ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಕನಿಷ್ಠ 20 ಜನರನ್ನು ಬಂಧಿಸಲಾಗಿದೆ. ಸೋಮವಾರ ಸಂಜೆ ಸ್ಥಳೀಯ ತೃಣಮೂಲ ನಾಯಕನ ಹತ್ಯೆಯ ಪ್ರತೀಕಾರ ಇದಾಗಿರಬಹುದು ಎಂದು ಶಂಕಿಸಲಾಗಿದೆ ಮತ್ತು ಹಲವಾರು ಪೊಲೀಸ್ ಸಿಬ್ಬಂದಿ ಮತ್ತು ನಾಗರಿಕ ಸ್ವಯಂಸೇವಕರನ್ನು ನಿರ್ಲಕ್ಷ್ಯದ ಆಧಾರದ ಮೇಲೆ ತೆಗೆದುಹಾಕಲಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಅವರ ಇಂದಿನ ನಿಗದಿತ ಭೇಟಿ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ರಾಮ್‌ಪುರಹತ್​​ನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮುಖ್ಯಮಂತ್ರಿಯವರ ಹೆಲಿಕಾಪ್ಟರ್ ಇಳಿಯುವ ಹೆಲಿಪ್ಯಾಡ್ ಸುತ್ತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಮತಾ ಬ್ಯಾನರ್ಜಿ ಅವರು ಬೊಗ್ಟುಯ್‌ಗೆ ಭೇಟಿ ನೀಡುವ ಮೊದಲು ಪೊಲೀಸ್ ಮಹಾನಿರ್ದೇಶಕ ಮನೋಜ್ ಮಾಳವೀಯ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ನಂತರ, ಅವರು ಗಾಯಾಳುಗಳನ್ನು ಭೇಟಿ ಮಾಡಲು ರಾಮ್‌ಪುರಹತ್ ಆಸ್ಪತ್ರೆಗೆ ಭೇಟಿ ನೀಡಬಹುದು ಎಂದು ಇನ್ನೊಬ್ಬ ಅಧಿಕಾರಿ ತಿಳಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ ಮತ್ತು ಬಿಜೆಪಿಯ ಐದು ಸದಸ್ಯರ ಕೇಂದ್ರ ತಂಡವೂ ಬೊಗ್ಟುಯ್‌ಗೆ ಭೇಟಿ ನೀಡಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಹತ್ಯೆಯನ್ನು “ಘೋರ” ಎಂದು ಹೇಳಿದ್ದಾರೆ. ತಪ್ಪಿತಸ್ಥರನ್ನು ಕ್ಷಮಿಸಬಾರದು ಎಂದು ಹೇಳಿರುವ ಮಮತಾ ಬ್ಯಾನರ್ಜಿ, ಪಕ್ಷ ಯಾವುದೇ ಆಗಿರಲಿ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರತಿಜ್ಞೆ ಮಾಡಿದ್ದಾರೆ.

ಇದನ್ನೂ ಓದಿ: ಕೆ ರೈಲ್ ಯೋಜನೆ ವಿರುದ್ಧ ಸಂಸತ್​​ಗೆ ಮೆರವಣಿಗೆ ನಡೆಸಿದ ಕೇರಳದ ಕಾಂಗ್ರೆಸ್ ಸಂಸದರ ಮೇಲೆ ಪೊಲೀಸರ ಹಲ್ಲೆ; ಆರೋಪ ನಿರಾಕರಿಸಿದ ದೆಹಲಿ ಪೊಲೀಸ್

Published On - 2:33 pm, Thu, 24 March 22