ರಾಬರ್ಟ್ ವಾದ್ರಾಗೆ ಬಿಜೆಪಿಯಿಂದ ಕ್ಲೀನ್ ಚಿಟ್ ಸಿಕ್ಕಿದ್ದು ಹೇಗೆ?; ರಾಹುಲ್ ಗಾಂಧಿಗೆ ಕೇಜ್ರಿವಾಲ್ ತಿರುಗೇಟು

|

Updated on: Jan 28, 2025 | 9:24 PM

ಇಂದು ದೆಹಲಿಯಲ್ಲಿ ಚುನಾವಣಾ ರ್ಯಾಲಿಯಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು. ಶೀಶ್​ ಮಹಲ್​ನಿಂದ ಅಬಕಾರಿ ಹಗರಣದವರೆಗೆ ಅರವಿಂದ್ ಕೇಜ್ರಿವಾಲ್ ಕುರಿತಾದ ಅನೇಕ ವಿಷಯಗಳನ್ನು ಈ ವೇಳೆ ರಾಹುಲ್ ಗಾಂಧಿ ಪ್ರಸ್ತಾಪಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಅರವಿಂದ್ ಕೇಜ್ರಿವಾಲ್, ರಾಬರ್ಟ್ ವಾದ್ರಾಗೆ ಬಿಜೆಪಿಯಿಂದ ಕ್ಲೀನ್ ಚಿಟ್ ಹೇಗೆ ಸಿಕ್ಕಿತು? ನ್ಯಾಷನಲ್ ಹೆರಾಲ್ಡ್ ಪ್ರಕರಣದ ಕತೆಯೇನು? ಎಂದು ಲೇವಡಿ ಮಾಡಿದ್ದಾರೆ.

ರಾಬರ್ಟ್ ವಾದ್ರಾಗೆ ಬಿಜೆಪಿಯಿಂದ ಕ್ಲೀನ್ ಚಿಟ್ ಸಿಕ್ಕಿದ್ದು ಹೇಗೆ?; ರಾಹುಲ್ ಗಾಂಧಿಗೆ ಕೇಜ್ರಿವಾಲ್ ತಿರುಗೇಟು
Kejriwal Aap
Follow us on

ನವದೆಹಲಿ: ಪ್ರಧಾನಿ ಮೋದಿ ಮತ್ತು ಅರವಿಂದ್ ಕೇಜ್ರಿವಾಲ್‌ರಂತಹ ನಾಯಕರು ಬಡವರಿಗೆ ಬಾಗಿಲು ಮುಚ್ಚಿ ಅವರಿಗೆ ಅವಕಾಶಗಳು ಸಿಗದಂತೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದರು. ದೆಹಲಿಯ ಪತ್ಪರ್‌ಗಂಜ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿ ಕೇಜ್ರಿವಾಲ್ ಚುನಾವಣೆಗೂ ಮುನ್ನ ಸಣ್ಣ ಕಾರಿನಲ್ಲಿ ಬರುತ್ತಿದ್ದರು. ನಂತರ “ಶೀಶ್ ಮಹಲ್”ನಲ್ಲಿ ವಾಸಿಸುತ್ತಿದ್ದರು ಎಂದು ಟೀಕಿಸಿದ್ದರು. ಇದಕ್ಕೆ ಅರವಿಂದ್ ಕೇಜ್ರಿವಾಲ್ ತಿರುಗೇಟು ನೀಡಿದ್ದಾರೆ.

ದೆಹಲಿ ವಿಧಾನಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ನ್ಯಾಷನಲ್ ಹೆರಾಲ್ಡ್ ಪ್ರಕರಣದ ಕತೆಯೇನು? ರಾಬರ್ಟ್ ವಾದ್ರಾಗೆ ಬಿಜೆಪಿಯಿಂದ ಹೇಗೆ ಕ್ಲೀನ್ ಚಿಟ್ ಸಿಕ್ಕಿತು? ಎಂದು ರಾಹುಲ್ ಗಾಂಧಿಯನ್ನು ಪ್ರಶ್ನಿಸಿದ್ದಾರೆ. ವಿಶೇಷವೆಂದರೆ, ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಇಂಡಿಯಾ ಬ್ಲಾಕ್‌ನ ಭಾಗವಾಗಿವೆ. ಆದರೂ ದೆಹಲಿ ಚುನಾವಣೆಯಲ್ಲಿ ಆಪ್ ಮತ್ತು ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿವೆ.

ಇದನ್ನೂ ಓದಿ: ಸಣ್ಣ ಕಾರಿನಲ್ಲಿ ಬಂದ ಕೇಜ್ರಿವಾಲ್ ಶೀಶ್ ಮಹಲ್‌ನಲ್ಲಿ ವಾಸಿಸತೊಡಗಿದರು; ರಾಹುಲ್ ಗಾಂಧಿ ವಾಗ್ದಾಳಿ

“ಮೋದಿ ಅಬಕಾರಿ ಹಗರಣದಂತಹ ನಕಲಿ ಪ್ರಕರಣಗಳನ್ನು ಸೃಷ್ಟಿಸುವ ಮೂಲಕ ಜನರನ್ನು ಜೈಲಿಗೆ ಹಾಕುತ್ತಾರೆ. ಆದರೆ, ನ್ಯಾಷನಲ್ ಹೆರಾಲ್ಡ್‌ನಂತಹ ದೊಡ್ಡ ಪ್ರಕರಣಗಳಲ್ಲಿ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಏಕೆ ಬಂಧಿಸಿಲ್ಲ? ರಾಬರ್ಟ್ ವಾದ್ರಾಗೆ ಬಿಜೆಪಿಯಿಂದ ಕ್ಲೀನ್ ಚಿಟ್ ಹೇಗೆ ಸಿಕ್ಕಿತು? ಭಯ ಮತ್ತು ಧೈರ್ಯದ ಬಗ್ಗೆ ನೀವು ಬೋಧಿಸದಿರುವುದು ಉತ್ತಮ. ಯಾರು ಹೇಡಿ ಮತ್ತು ಯಾರು ಧೈರ್ಯಶಾಲಿ ಎಂದು ದೇಶಕ್ಕೆ ತಿಳಿದಿದೆ.” ಎಂದು ಅರವಿಂದ್ ಕೇಜ್ರಿವಾಲ್ ರಾಹುಲ್ ಗಾಂಧಿ ವಿರುದ್ಧ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.


“ಅರವಿಂದ್ ಕೇಜ್ರಿವಾಲ್ ಅವರು ಅಧಿಕಾರಕ್ಕೆ ಬಂದ ಮೇಲೆ ಬೇರೆಯವರಿಗಿಂತಲೂ ವಿಭಿನ್ನವಾಗಿ ರಾಜಕೀಯ ಮಾಡುವುದಾಗಿ ಹೇಳಿದರು. ಮೊದಲು ಸಣ್ಣ ಕಾರಿನಲ್ಲಿ ಬಂದರು. ಆದರೆ, ಶೀಶ್ ಮಹಲ್‌ನಲ್ಲಿ ವಾಸಿಸುತ್ತಿದ್ದರು. ದೆಹಲಿ ಹಿಂಸಾಚಾರ ನಡೆದಾಗ ಅರವಿಂದ್ ಕೇಜ್ರಿವಾಲ್ ಎಲ್ಲೂ ಕಾಣಿಸಲಿಲ್ಲ. ಬಡವರಿಗೆ ಅಗತ್ಯವಿದ್ದಾಗ ಮತ್ತು ದೆಹಲಿ ಹಿಂಸಾಚಾರವನ್ನು ಎದುರಿಸಿದಾಗ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಎಂದಿಗೂ ನೋಡಲು ಸಾಧ್ಯವಾಗಲಿಲ್ಲ.” ಎಂದು ರಾಹುಲ್ ಗಾಂಧಿ ಹೇಳಿದ್ದರು.

70 ಸದಸ್ಯರ ದೆಹಲಿ ವಿಧಾನಸಭೆ ಚುನಾವಣೆ ಫೆಬ್ರವರಿ 5ರಂದು ನಡೆಯಲಿದೆ. ಮತ ಎಣಿಕೆ ಫೆಬ್ರವರಿ 8ರಂದು ನಡೆಯಲಿದೆ. 2020ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿ 62 ಸ್ಥಾನಗಳೊಂದಿಗೆ ಚುನಾವಣೆಯಲ್ಲಿ ಜಯ ಗಳಿಸಿತು. ಕಾಂಗ್ರೆಸ್ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಿರಲಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ