ನುಹ್‌ನಲ್ಲಿ ಮೆರವಣಿಗೆಗೆ ಮುನ್ನ ಎರಡು ಸಮುದಾಯದವರ ಸಭೆ ಕರೆಯಲಾಗಿತ್ತು, ಆದರೆ ಯಾತ್ರೆ ವೇಳೆ ಹಿಂಸಾಚಾರ ನಡೆಯಲು ಕಾರಣವೇನು?
ಜುಲೈ 27 ರಂದು ನುಹ್ ಪೊಲೀಸರು ಮತ್ತು ಜಿಲ್ಲಾ ಅಧಿಕಾರಿಗಳು, ವಿಶ್ವ ಹಿಂದೂ ಪರಿಷತ್, ಬಜರಂಗದಳ ಮತ್ತು ಜಮೀಯತ್ ಉಲೇಮಾ-ಇ-ಹಿಂದ್ ಪ್ರತಿನಿಧಿಗಳು ಮತ್ತು ಪ್ರದೇಶದ ನಿವಾಸಿಗಳ ನಡುವೆ ಸಭೆ ನಡೆದಿತ್ತು.
ದೆಹಲಿ ಜುಲೈ 02: ಫೆಬ್ರವರಿಯಲ್ಲಿ ಭಿವಾನಿಯಲ್ಲಿ (Bhiwani) ಇಬ್ಬರು ವ್ಯಕ್ತಿಗಳ ಹತ್ಯೆ ನಂತರದ ಉದ್ವಿಗ್ನತೆಯ ನಡುವೆಯೂ, ಹರ್ಯಾಣದ (Haryana) ನುಹ್‌ನಲ್ಲಿ (Nuh) ಸೋಮವಾರದ ಬ್ರಿಜ್ಮಂಡಲ್ ಜಲಾಭಿಷೇಕ ಯಾತ್ರೆಗೆ ಹರ್ಯಾಣ ಪೊಲೀಸರು ಅನುಮತಿ ನೀಡಿದ್ದರು. ಮೆರವಣಿಗೆಯಲ್ಲಿ ಆಯುಧ ಪ್ರದರ್ಶಿಸುವಂತಿಲ್ಲ ಎಂಬ ಭರವಸೆ ಮೇರೆಗೆ ಈ ಅನುಮತಿ ನೀಡಲಾಗಿತ್ತು.ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶಗಳು ಮತ್ತು ವಿಡಿಯೊ ಹರಿದಾಡಲು ಶುರುವಾದಾಗ ಅಲ್ಲಿನ ವಾತಾವರಣವೇ ಬದಲಾಯಿತು. ಮೋನು ಮಾನೇಸರ್ (Monu Manesar) ಎಂದು ಕರೆಯಲ್ಪಡುವ ಸ್ವಯಂಘೋಷಿತ ಗೋರಕ್ಷಕ ಮೋಹಿತ್ ಯಾದವ್ ಯಾತ್ರೆಯಲ್ಲಿ ಭಾಗವಹಿಸುವುದಾಗಿ ವಿಡಿಯೊವೊಂದರಲ್ಲಿ ಹೇಳಿದ್ದು, ಆಕ್ರೋಶಕ್ಕೆ ಕಾರಣವಾಗಿತ್ತು.
ಭಿವಾನಿಯಲ್ಲಿ ಜುನೈದ್ ಮತ್ತು ನಾಸಿರ್ ಹತ್ಯೆಯ ಆರೋಪಿ ಮೋನು ಜುಲೈ 29 ರಂದು ತನ್ನ ವಾಟ್ಸಾಪ್ ಸ್ಟೇಟಸ್ ಆಗಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ ನಾನು ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ನನ್ನ ಇಡೀ ತಂಡವೂ ಹಾಜರಿರುತ್ತದೆ ಎಂದಿದ್ದ. ಜುಲೈ 27 ರಂದು ನುಹ್ ಪೊಲೀಸರು ಮತ್ತು ಜಿಲ್ಲಾ ಅಧಿಕಾರಿಗಳು, ವಿಶ್ವ ಹಿಂದೂ ಪರಿಷತ್, ಬಜರಂಗದಳ ಮತ್ತು ಜಮೀಯತ್ ಉಲೇಮಾ-ಇ-ಹಿಂದ್ ಪ್ರತಿನಿಧಿಗಳು ಮತ್ತು ಪ್ರದೇಶದ ನಿವಾಸಿಗಳ ನಡುವೆ ಸಭೆ ನಡೆದಿತ್ತು. ಯಾತ್ರೆಯ ಸಮಯದಲ್ಲಿ ಯಾವುದೇ ಶಸ್ತ್ರಾಸ್ತ್ರಗಳನ್ನು ಬಳಸುವುದಾಗಲೀ ಪ್ರದರ್ಶಿಸುವುದಾಗಲೀ ಮಾಡಬಾರದು ಎಂದು ನಾವು ಹೇಳಿದ್ದೆವು ಎಂದು ಉಪ ಆಯುಕ್ತ ಪ್ರಶಾಂತ್ ಪನ್ವಾರ್ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಈ ಯಾತ್ರೆಯನ್ನು ಮೂರು ವರ್ಷಗಳಿಂದ ನಡೆಸಲಾಗುತ್ತಿದೆ. ನಾವು ಶಸ್ತ್ರಾಸ್ತ್ರಗಳ ಬಳಕೆಯನ್ನು ವಿರೋಧಿಸುತ್ತೇವೆ ಎಂದು ಜಮಿಯತ್ ಉಲೇಮಾ-ಐ-ಹಿಂದ್ ಸದಸ್ಯ ಮೌಲಾನಾ ಯಾಹಿಯಾ ಕರೀಮಿ ಹೇಳಿದ್ದರು. ಆದರೆ ಮೋನು ಅವರ ವಿಡಿಯೊವನ್ನು ಪೋಸ್ಟ್ ಮಾಡಿದಾಗ ಪ್ರದೇಶ ಜನರ ಮನಸ್ಥಿತಿ ಬದಲಾಯಿತು. ಜುನೈದ್ ಮತ್ತು ನಾಸಿರ್ ಅವರನ್ನು ಕೊಂದ ಆರೋಪ ಮೋನು ಮೇಲಿದೆ. ಆತ ಮೇವಾತ್‌ಗೆ ಬರುತ್ತಿದ್ದಾನೆ ಎಂದು ಹೇಳಿದ್ದ. ಇದು ನಿವಾಸಿಗಳನ್ನು ಕೆರಳಿಸಿತು ಎಂದು ಜಮಿಯಾತ್ ಸದಸ್ಯ ಮುಫ್ತಿ ಸಲೀಂ ಹೇಳಿದ್ದಾರೆ.
ಬಜರಂಗದಳದ ಸದಸ್ಯರು ಮೋನುವನ್ನು ಸಮರ್ಥಿಸಿಕೊಂಡರು. “ಮೋನು ಈಗಷ್ಟೇ ವಿಡಿಯೊ ಪೋಸ್ಟ್ ಮಾಡಿದ್ದಾರೆ, ಅದು ಜನರನ್ನು ಯಾಕೆ ಕೆರಳಿಸಬೇಕು? ಯಾತ್ರೆಯು ವಿಎಚ್‌ಪಿ ಅಥವಾ ಬಜರಂಗದಳದ ಬಗ್ಗೆ ಅಲ್ಲ, ಅದು ಹಿಂದೂ ಸಮುದಾಯಕ್ಕೆ ಸಂಬಂಧಿಸಿದ್ದು ಎಂದು ಗುರಗಾಂವ್ ಬಜರಂಗದಳದ ಸದಸ್ಯ ಅಮಿತ್ ಹಿಂದೂ ಹೇಳಿದ್ದಾರೆ.
ವಿಡಿಯೊ ಪೋಸ್ಟ್ ಮಾಡಿ ಬರುತ್ತೇನೆ ಎಂದು ಹೇಳಿದ್ದರೂ ಮೋನು ಬರಲಿಲ್ಲ. ವಿಎಚ್‌ಪಿ ಮತ್ತು ಬಜರಂಗದಳದ ನಾಯಕರು ಯಾತ್ರೆಯಲ್ಲಿ ಆತ ಪಾಲ್ಗೊಳ್ಳದಿರುವಂತೆ ಹೇಳಿರುವುದಾಗಿ ಅಮಿತ್ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಹರ್ಯಾಣ ಹಿಂಸಾಚಾರ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, 116 ಜನರ ಬಂಧನ, ದೆಹಲಿಯಿಂದ ಯುಪಿವರೆಗೆ ಕಟ್ಟೆಚ್ಚರ
17 ಎಫ್‌ಐಆರ್‌ಗಳು ದಾಖಲಾಗಿವೆ. 100 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ, ನುಹ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸ್ಥಳೀಯರ ಬಳಿ ಬಂದೂಕುಗಳು, ಕೋಲುಗಳು ಮತ್ತು ಕತ್ತಿಗಳು ಸಹ ಇದ್ದವು. ನಾವು ಈ ಪ್ರದೇಶದಲ್ಲಿ ಬಂದೂಕು ಪರವಾನಗಿಗಳನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಭಿವಾನಿ ನರೇಂದ್ರ ಬಿಜರ್ನಿಯಾ ಹೇಳಿದರು.
ವಿಡಿಯೊ ಮತ್ತು ಎರಡೂ ಸಮುದಾಯಗಳ ಸಂದೇಶಗಳಿಗೆ ಸಂಬಂಧಿಸಿದಂತೆ ಯಾರೂ ಎಚ್ಚರಿಕೆ ನೀಡಿಲ್ಲ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ