What India Thinks Today: ಟಿವಿ9 ಥಿಂಕ್​ಫೆಸ್ಟ್​ನಲ್ಲಿ ಅಮಿತ್ ಶಾ ದಿಕ್ಸೂಚಿ ಭಾಷಣ, ಡೇವಿಡ್ ಕ್ಯಾಮರೂನ್, ಹಮೀದ್ ಕರ್ಜೈ ಭಾಗಿ

| Updated By: Digi Tech Desk

Updated on: Jun 16, 2022 | 12:37 PM

Vishwa Guru: How Near, How Far: ‘ವಿಶ್ವ ಗುರು: ಎಷ್ಟು ಹತ್ತಿರ, ಎಷ್ಟು ದೂರ’ ಎನ್ನುವುದು ಸಮಾವೇಶದ ಉದ್ಘಾಟನಾ ಸಮಾರಂಭ ಚರ್ಚೆಯ ವಿಷಯವಾಗಿದೆ. ದೆಹಲಿಯ ತಾಜ್ ಪ್ಯಾಲೇಸ್​ನಲ್ಲಿ ಕಾರ್ಯಕ್ರಮ ನಡೆಯಲಿದೆ.

What India Thinks Today: ಟಿವಿ9 ಥಿಂಕ್​ಫೆಸ್ಟ್​ನಲ್ಲಿ ಅಮಿತ್ ಶಾ ದಿಕ್ಸೂಚಿ ಭಾಷಣ, ಡೇವಿಡ್ ಕ್ಯಾಮರೂನ್, ಹಮೀದ್ ಕರ್ಜೈ ಭಾಗಿ
ಡೇವಿಡ್ ಕ್ಯಾಮರೂನ್, ಅಮಿತ್ ಶಾ ಮತ್ತು ಹಮೀದ್ ಕರ್ಜೈ
Follow us on

ದೆಹಲಿ: ಟಿವಿ9 ನೆಟ್​ವರ್ಕ್ ಆಯೋಜಿಸಿರುವ ‘ವಾಟ್​ ಇಂಡಿಯಾ ಥಿಂಕ್ಸ್​ ಟುಡೇ’ (What India Thinks Today – Global Summit) ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೂನ್ 17ರಂದು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕೇಂದ್ರ ರಕ್ಷಣಾ ಸಚಿವ ರಾಜ್​ನಾಥ್ ಸಿಂಗ್ ಜೂನ್ 18ರಂದು ಸಮಾವೇಶ ಉದ್ಘಾಟಿಸಲಿದ್ದಾರೆ. ಸಮಾವೇಶದಲ್ಲಿ 75 ಭಾಷಣಕಾರರು ಇರುತ್ತಾರೆ. ಇದರಲ್ಲಿ ಬ್ರಿಟನ್​ನ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್ ಮತ್ತು ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ಸಹ ಇದ್ದಾರೆ. ‘ವಿಶ್ವ ಗುರು: ಎಷ್ಟು ಹತ್ತಿರ, ಎಷ್ಟು ದೂರ’ (Vishwa Guru: How Near, How Far) ಎನ್ನುವುದು ಸಮಾವೇಶದ ಉದ್ಘಾಟನಾ ಸಮಾರಂಭ ಚರ್ಚೆಯ ವಿಷಯವಾಗಿದೆ. ದೆಹಲಿಯ ತಾಜ್ ಪ್ಯಾಲೇಸ್​ನಲ್ಲಿ ಕಾರ್ಯಕ್ರಮ ನಡೆಯಲಿದೆ.

‘ರಾಜಕಾರಣ, ಆಡಳಿತ, ಆರ್ಥಿಕತೆ, ಆರೋಗ್ಯ ಸೇವೆ, ಸಂಸ್ಕೃತಿ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ವಿಶ್ವದ ಮತ್ತು ದೇಶದ ಪ್ರಭಾವಿಗಳನ್ನು ಒಂದೇ ವೇದಿಕೆಗೆ ಈ ಸಮಾವೇಶವು ಕರೆತರಲಿದೆ. ಎರಡು ದಿನಗಳ ಸಮಾರಂಭದಲ್ಲಿ 75 ಮುಖ್ಯ ಭಾಷಣಕಾರರು ಹತ್ತಾರು ವಿಚಾರಗಳ ಬಗ್ಗೆ ಗಮನ ಸೆಳೆಯಲಿದ್ದಾರೆ’ ಎಂದು ಟಿವಿ9 ಸಮೂಹದ ಪ್ರಕಟಣೆ ತಿಳಿಸಿದೆ. ‘ಭಾರತದ ವಿವಿಧೆಡೆಯಿಂದ ಜನಪ್ರಿಯ ನೀತಿ ನಿರೂಪಕರು, ಹಿರಿಯ ಸಚಿವರು, ಹಿರಿಯ ಮುಖ್ಯಮಂತ್ರಿಗಳು ಸಮಾವೇಶದಲ್ಲಿ ಪಾಲ್ಗೊಂಡು, ಮಾತನಾಡಲಿದ್ದಾರೆ. ‘ವಿಶ್ವದ ಹೊಸ ವ್ಯವಸ್ಥೆಯಲ್ಲಿ ಭಾರತ’ (India In The New International Order) ವಿಷಯದ ಬಗ್ಗೆ ನಡೆಯುವ ಚರ್ಚೆಯಲ್ಲಿ ಬ್ರಿಟನ್​ನ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್ ಪಾಲ್ಗೊಳ್ಳಲಿದ್ದಾರೆ.

‘ಟಿವಿ9 ಸಮೂಹ ಆಯೋಜಿಸಿರುವ ಮೊದಲ ಜಾಗತಿಕ ವಿಚಾರಗೋಷ್ಠಿಯಲ್ಲಿ ಪಾಲ್ಗೊಳ್ಳಲು ಸಂತೋಷವಾಗುತ್ತದೆ. ಭಾರತದ ಅತಿ ಚುರುಕಿನ ವ್ಯಕ್ತಿಗಳು ವಿಶ್ವದ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಗೋಷ್ಠಿಗಳಲ್ಲಿ ಮಾತನಾಡಲಿದ್ದಾರೆ. ನಾನು ಪ್ರಧಾನಿಯಾಗಿದ್ದಾಗ ಇಂಗ್ಲೆಂಡ್ ಮತ್ತು ಭಾರತದ ನಡುವೆ ಉತ್ತಮ ಸಂಬಂಧ ಬೆಳೆಯಲು ನಾನು ಶ್ರಮಿಸಿದ್ದೆ. ಈ ಬಗ್ಗೆ ನನಗೆ ಹೆಮ್ಮೆಯಿದೆ. 2010ರಲ್ಲಿ ಭಾರತಕ್ಕೆ ಮೊದಲ ಬಾರಿಗೆ ಬ್ರಿಟನ್​ನಿಂದ ಟ್ರೇಡ್ ಮಿಷನ್ ಕರೆತಂದಿದ್ದೆ. ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಗಳ ನಡುವೆ ನಿಜವಾದ ಬಾಂಧವ್ಯ ಬೆಸೆಯಲು ಯತ್ನಿಸಿದ್ದೆ. ಎರಡೂ ದೇಶಗಳ ನಡುವೆ ಆಧುನಿಕ ಸಹಭಾಗಿತ್ವವನ್ನು ಜೀವಂತವಾಗಿಡಲು ಯತ್ನಿಸಿದ್ದೆ. ಒಂದು ದಶಕ ನಂತರ ಮತ್ತೆ ಭಾರತಕ್ಕೆ ಭೇಟಿ ನೀಡಲು ಸಂತೋಷ ಎನಿಸುತ್ತದೆ. ಅಂದಿಗೂ ಇಂದಿಗೂ ಸಾಕಷ್ಟು ಬದಲಾಗಿದೆ. ಆದರೆ ಎರಡೂ ದೇಶಗಳ ನಡುವಣ ಬಾಂಧವ್ಯ ಮಾತ್ರ ಇಂದಿಗೂ ಗಟ್ಟಿಯಾಗಿಯೇ ಉಳಿದಿದೆ. ಈ ಸಮಾವೇಶದಲ್ಲಿ ಹತ್ತಾರು ವಿಷಯಗಳು ಚರ್ಚೆಯಾಗಲಿವೆ. ಈ ಕಾರ್ಯಕ್ರಮಕ್ಕಾಗಿ ಕಾತರದಿಂದ ಎದುರು ನೋಡುತ್ತಿದ್ದೇನೆ’ ಎಂದು ಕ್ಯಾಮರೂನ್ ಹೇಳಿದ್ದಾರೆ.

ಈ ಸುದ್ದಿಯಲ್ಲಿ ಇಂಗ್ಲಿಷ್​ನಲ್ಲಿ ಓದಲು ಲಿಂಕ್: TV9’s two-day think-fest

ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ಅವರು ಸಮಾವೇಶದಲ್ಲಿ ‘ಭಯೋತ್ಪಾದನೆ: ಮಾನವೀಯತೆಯ ಶತ್ರು’ (Terrorism: Enemy of Humanity) ಎನ್ನುವ ವಿಷಯ ಕುರಿತು ಮಾತನಾಡುತ್ತಾರೆ. ‘ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಸಕ್ತಿಯಿಂದ ಎದುರು ನೋಡುತ್ತಿದ್ದೇನೆ. ಭಾರತ ಮತ್ತು ಅಫ್ಘಾನಿಸ್ತಾನಕ್ಕೆ ಪರಸ್ಪರ ಸಂಬಂಧಿಸಿರುವ ಹಲವು ವಿಷಯಗಳ ಬಗ್ಗೆ ನಾನು ಚರ್ಚಿಸುತ್ತೇನೆ’ ಎಂದು ಹೇಳಿದ್ದಾರೆ. ‘ಭಾರತವು ವಿಶ್ವ ನಾಯಕನಾಗಲು ಕ್ರಮಿಸಬೇಕಿರುವ ಮಾರ್ಗದ ಬಗ್ಗೆ, ನೀಲನಕ್ಷೆಯ ಬಗ್ಗೆ ವಿಚಾರಗೋಷ್ಠಿಯು ಬೆಳಕು ಚೆಲ್ಲಲಿದೆ’ ಎಂದು ಟಿವಿ9 ಸಮೂಹದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬರುಣ್ ದಾಸ್ ಹೇಳಿದ್ದಾರೆ.

‘ಆಸಕ್ತಿಕರ ಸಂವಾದ, ಚರ್ಚೆ ಮತ್ತು ವಿವರಣೆಗಳ ಮೂಲಕ ಹೊಸ ಜಗತ್ತಿನ ನಾಯಕನಾಗಲು ಭಾರತ ಕ್ರಮಿಸಬೇಕಾದ ಹಾದಿಯ ಬಗ್ಗೆ ಈ ಸಮಾವೇಶದಲ್ಲಿ ಬೆಳಕು ಚೆಲ್ಲಲು ಯತ್ನಿಸುವುದು ನಮ್ಮ ಉದ್ದೇಶವಾಗಿದೆ. ಈ ಪಯಣದ ಹಾದಿಯಲ್ಲಿ ಸವಾಲುಗಳು ಇಲ್ಲದಿಲ್ಲ. ಆದರೆ ಈ ಗುರಿಯು ಪವಿತ್ರವಾದುದು ಅಷ್ಟೇ ಅಲ್ಲ, ಮಹತ್ವಾಕಾಂಕ್ಷೆಯಿಂದ ಕೂಡಿರುವಂಥದ್ದು. ಪ್ರಬಲ ನಾಯಕತ್ವ, ಸಾಮೂಹಿಕ ಇಚ್ಛಾಶಕ್ತಿ ಮತ್ತು ಇಡೀ ದೇಶದ ಬದ್ಧತೆಯನ್ನು ಅಪೇಕ್ಷಿಸುವಂಥದ್ದು. ಭಾರತವು ವಿಶ್ವಗುರು ಆಗಲು ಏನೆಲ್ಲಾ ಮಾಡಬೇಕು ಎನ್ನುವ ಬಗ್ಗೆ ಮುಕ್ತವಾಗಿ ಎಲ್ಲರಿಗೂ ಚಿಂತನೆ ಹಂಚಿಕೊಳ್ಳಲು ಈ ಸಮಾವೇಶವು ಅವಕಾಶ ಒದಗಿಸಿಕೊಡಲಿದೆ’ ಎಂದು ಬರುಣ್ ದಾಸ್ ವಿವರಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸಂಪುಟದ 15 ಸಚಿವರು ತಮ್ಮ ದೃಷ್ಟಿಕೋನ ಹಂಚಿಕೊಳ್ಳಲಿದ್ದಾರೆ. ಕೆಲ ಮುಖ್ಯಮಂತ್ರಿಗಳು ಸಹ ಪಾಲ್ಗೊಳ್ಳಲಿದ್ದಾರೆ. ‘ಹೊಸ ಜಾಗತಿಕ ವ್ಯವಸ್ಥೆಗೆ ಭಾರತ ಹೇಗೆ ಯಶಸ್ವಿಯಾಗಿ ಹೊಂದಿಕೊಂಡಿದೆ? ಹೊಸ ಅವಕಾಶಗಳನ್ನು ಬಳಸಿಕೊಳ್ಳುವುದರ ಜೊತೆಗೆ ಪ್ರತಿಕೂಲ ಪರಿಸ್ಥಿತಿಗಳನ್ನು ಹೇಗೆ ನಿಭಾಯಿಸಿದೆ ಎನ್ನುವ ಬಗ್ಗೆಯೂ ಸಮಾವೇಶ ಬೆಳಕು ಚೆಲ್ಲಲಿದೆ. ವಿಶ್ವದ ಹಲವು ದೇಶಗಳ ಸಮೂಹದಲ್ಲಿ ಯೋಗ್ಯ ಸ್ಥಾನ ಪಡೆಯಲು ಯತ್ನಿಸುತ್ತಿರುವ ಭಾರತವು ಕ್ರಮಿಸಬೇಕಾದ ಹಾದಿಯ ಬಗ್ಗೆ ವಿಚಾರಗೋಷ್ಠಿಯು ಬೆಳಕು ಚೆಲ್ಲಲಿದೆ’ ಎಂದು ಟಿವಿ9 ಸಮೂಹವು ತಿಳಿಸಿದೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:23 am, Sun, 12 June 22