ವಾರಣಾಸಿ ಜನವರಿ 31: ವಾರಣಾಸಿಯ (Varanasi) ನ್ಯಾಯಾಲಯವು ಬುಧವಾರದಂದು ಜ್ಞಾನವಾಪಿ ಮಸೀದಿ (Gyanvapi mosque) ಸಂಕೀರ್ಣದಲ್ಲಿರುವ ‘ ವ್ಯಾಸ್ ಜೀ ಕಾ ತಹಖಾನಾ ‘ (Vyasji ka Tehkhana) ಎಂದು ಕರೆಯಲ್ಪಡುವ ದಕ್ಷಿಣ ಭಾಗದಲ್ಲಿರುವ ನೆಲಮಾಳಿಗೆಯಲ್ಲಿ ಪೂಜೆಯನ್ನು ಮಾಡಲು ಅನುಮತಿ ನೀಡಿದೆ. ಮುಂದಿನ ಏಳು ದಿನಗಳಲ್ಲಿ ಫಿರ್ಯಾದಿದಾರರು ಮತ್ತು ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್‌ನಿಂದ ನಾಮನಿರ್ದೇಶನಗೊಂಡ ಪೂಜಾರಿ ಅಥವಾ ಅರ್ಚಕರು ನಡೆಸುವ ವಿಗ್ರಹಗಳ ಪೂಜೆಗೆ ಅಗತ್ಯ ವ್ಯವಸ್ಥೆಗಳನ್ನು ಮಾಡುವಂತೆ ನ್ಯಾಯಾಲಯವು ಜಿಲ್ಲಾಡಳಿತಕ್ಕೆ ನಿರ್ದೇಶಿಸಿದೆ. ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಎ ಕೆ ವಿಶ್ವೇಶ್ ಅವರು ಆದೇಶ ಹೊರಡಿಸಿದ್ದಾರೆ.
ಹಿಂದೂ ಕಡೆಯವರು ‘ವ್ಯಾಸ್ ಕಾ ತಹಖಾನಾ’ದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿದ್ದಾರೆ. ಜಿಲ್ಲಾಡಳಿತವು 7 ದಿನಗಳಲ್ಲಿ ವ್ಯವಸ್ಥೆ ಮಾಡಬೇಕಾಗಿದೆ ಎಂದು ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ. ಮಸೀದಿಯನ್ನು ನಿರ್ವಹಿಸುವ ಅಂಜುಮನ್ ಇಂತೇಝಾಮಿಯಾ ಮಸಾಜಿದ್ ಸಮಿತಿ (ಎಐಎಂಸಿ) ವಿರುದ್ಧ ಶೈಲೇಂದ್ರ ಕುಮಾರ್ ಪಾಠಕ್ ವ್ಯಾಸ್ ಅವರು ಸಲ್ಲಿಸಿದ ಮೊಕದ್ದಮೆಗೆ ಪ್ರತಿಕ್ರಿಯೆಯಾಗಿ ನ್ಯಾಯಾಲಯದ ತೀರ್ಪು ಬಂದಿದೆ.
ಮಸೀದಿಯು ನೆಲಮಾಳಿಗೆಯಲ್ಲಿ ನಾಲ್ಕು ‘ ತಹಖಾನಾ ‘ಗಳನ್ನು (ನೆಲಮಾಳಿಗೆಗಳು) ಹೊಂದಿದೆ. ಅವುಗಳಲ್ಲಿ ಒಂದು ಇಲ್ಲಿ ವಾಸಿಸುತ್ತಿದ್ದ ವ್ಯಾಸ ಕುಟುಂಬದ ವಶದಲ್ಲಿದೆ. ಶೈಲೇಂದ್ರ ಕುಮಾರ್ ಪಾಠಕ್ ವ್ಯಾಸ್ ಅವರು ಮಸೀದಿಯನ್ನು ನಿರ್ವಹಿಸುವ ಅಂಜುಮನ್ ಇಂತೇಜಾಮಿಯಾ ಮಸಾಜಿದ್ ಕಮಿಟಿ ವಿರುದ್ಧ ಮೊಕದ್ದಮೆ ಹೂಡಿದ್ದು, ರಿಸೀವರ್ ಆಗಿ ಜಿಲ್ಲಾಧಿಕಾರಿಯನ್ನು ನೇಮಿಸಬೇಕೆಂದು ನ್ಯಾಯಾಲಯವನ್ನು ಒತ್ತಾಯಿಸಿದರು.
ಅರ್ಜಿಯ ಪ್ರಕಾರ, ಅರ್ಚಕ ಸೋಮನಾಥ ವ್ಯಾಸ್ ಅವರು 1993 ರವರೆಗೆ ಅಧಿಕಾರಿಗಳು ನೆಲಮಾಳಿಗೆಯನ್ನು ಮುಚ್ಚುವವರೆಗೆ ಅಲ್ಲಿ ಪ್ರಾರ್ಥನೆಗಳನ್ನು ನಡೆಸುತ್ತಿದ್ದರು. ಸೋಮನಾಥ ವ್ಯಾಸ್ ಅವರ ಮೊಮ್ಮಗನಾಗಿ, ತಹಖಾನಾವನ್ನು ಪ್ರವೇಶಿಸಲು ಮತ್ತು ಪೂಜೆಯನ್ನು ಪುನರಾರಂಭಿಸಲು ಅವಕಾಶ ನೀಡಬೇಕು ಎಂದು ವ್ಯಾಸ್ ಅರ್ಜಿ ಸಲ್ಲಿಸಿದ್ದರು.
ಮಸೀದಿ ಸಮಿತಿಯ ಜನರು ನೆಲಮಾಳಿಗೆಗೆ ಭೇಟಿ ನೀಡುತ್ತಲೇ ಇರುತ್ತಾರೆ. ಅವರು ಅದನ್ನು ಸ್ವಾಧೀನಪಡಿಸಿಕೊಳ್ಳಬಹುದು ಎಂದು ಅವರು ಆರೋಪಿಸಿದರು, ಎಐಎಂಸಿಯ ವಕೀಲ ಅಖ್ಲಾಕ್ ಅಹ್ಮದ್ ಅವರು ಆಧಾರರಹಿತ ಆರೋಪವನ್ನು ತಳ್ಳಿಹಾಕಿದರು.
ಇದನ್ನೂ ಓದಿ: Gyanvapi mosque case: ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ನಡೆಸಲು ಹಿಂದೂಗಳಿಗೆ ಅನುಮತಿ
ಹಿಂದೂ ಅರ್ಜಿದಾರರು ಪ್ರಾರ್ಥನಾ ಹಕ್ಕುಗಳನ್ನು ಕೋರಿ ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದಂತೆ ಹಲವಾರು ಇತರ ಪ್ರಕರಣಗಳನ್ನು ದಾಖಲಿಸಿದ್ದಾರೆ. ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ (ASI) ದ ವರದಿಯಲ್ಲಿ ವಾರಣಾಸಿಯಲ್ಲಿ ಜ್ಞಾನವಾಪಿ ಮಸೀದಿಯನ್ನು ನಿರ್ಮಿಸುವ ಮೊದಲು ದೊಡ್ಡ ಹಿಂದೂ ದೇವಾಲಯವು ಅಸ್ತಿತ್ವದಲ್ಲಿತ್ತು ಎಂದು ಹೇಳುತ್ತದೆ. ಎಎಸ್ಐಯ ವಿಸ್ತೃತ ವರದಿಯು ಅಸ್ತಿತ್ವದಲ್ಲಿರುವ ರಚನೆಗಳ ಆಳವಾದ ಅಧ್ಯಯನವನ್ನು ಉಲ್ಲೇಖಿಸಿದೆ. 17 ನೇ ಶತಮಾನದಲ್ಲಿ “ಅಸ್ತಿತ್ವದಲ್ಲಿರುವ ರಚನೆಯನ್ನು ನಿರ್ಮಿಸುವ ಮೊದಲು ದೊಡ್ಡ ಹಿಂದೂ ದೇವಾಲಯವು ಅಸ್ತಿತ್ವದಲ್ಲಿತ್ತು” ಎಂದು ತೀರ್ಮಾನಿಸಲು ಸೈಟ್‌ನಿಂದ ಸಿಕ್ಕಿದ ಕಲಾಕೃತಿಗಳನ್ನು ಉಲ್ಲೇಖಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:55 pm, Wed, 31 January 24