ಸನಾತನ ಧರ್ಮ ಕರ್ತವ್ಯಗಳ ಗುಚ್ಛ, ಆದರೆ ಜಾತೀಯತೆ-ಅಸ್ಪೃಶ್ಯತೆಯನ್ನೇ ವೈಭವೀಕರಿಸಲಾಗುತ್ತಿದೆ; ಮದ್ರಾಸ್ ಹೈಕೋರ್ಟ್
ಸಂವಿಧಾನದ 19(1)(ಎ) ಪರಿಚ್ಛೇದವು ವಾಕ್ ಸ್ವಾತಂತ್ರ್ಯಕ್ಕೆ ಮೂಲಭೂತ ಹಕ್ಕನ್ನು ನೀಡಿರುವುದು ನಿಜ. ಆದರೂ, ಮಾತನಾಡುವ ವಿಷಯಕ್ಕೆ ಮೌಲ್ಯ ಇರಬೇಕು ಎಂಬುದನ್ನೂ ಗಮನಿಸಬೇಕಿದೆ. ಧರ್ಮಕ್ಕೆ ಸಂಬಂಧಿಸಿದ ವಾಕ್ ಸ್ವಾತಂತ್ರ್ಯದ ವಿಚಾರದಲ್ಲಿ, ಯಾರ ಭಾವನೆಗಳಿಗೂ ಧಕ್ಕೆಯಾಗದಂತೆ, ಯಾರಿಗೂ ನೋವಾಗದಂತೆ ನೋಡಿಕೊಳ್ಳುವುದು ಅವಶ್ಯಕ ಎಂದು ಪೀಠ ಹೇಳಿದೆ.
ಚೆನ್ನೈ, ಸೆಪ್ಟೆಂಬರ್ 16: ಸನಾತನ ಧರ್ಮ (Sanatana Dharma) ಎಂಬುದು ಕರ್ತವ್ಯಗಳ ಗುಚ್ಛ. ಆದರೆ, ಜಾತೀಯತೆ ಹಾಗೂ ಅಸ್ಪೃಶ್ಯತೆ ಎಂಬ ಅಂಶಗಳನ್ನಷ್ಟೇ ವೈಭವೀಕರಿಸಲಾಗುತ್ತಿದೆ ಎಂದು ಮದ್ರಾಸ್ ಹೈಕೋರ್ಟ್ (Madras High Court) ಅಭಿಪ್ರಾಯಪಟ್ಟಿದೆ. ಅರ್ಜಿಯೊಂದರ ವಿಚಾರಣೆ ವೇಳೆ ಈ ವಿಚಾರ ಉಲ್ಲೇಖಿಸಿದ ನ್ಯಾಯಮೂರ್ತಿ ಎನ್ ಶೇಷಸಾಯಿ ಅವರು, ಸನಾತನ ಧರ್ಮ ಎಂಬುದು ಕರ್ತವ್ಯಗಳ ಗುಚ್ಛವಾಗಿದೆ. ಅದರಲ್ಲಿ ದೇಶದ ಕರ್ತವ್ಯ, ರಾಜನ ಕರ್ತವ್ಯ, ಪೋಷಕರ ಕರ್ತವ್ಯ, ಗುರುವಿನ ಕರ್ತವ್ಯ ಹೀಗೆ ಹಲವು ಅಂಶಗಳು ಸೇರಿವೆ. ಅದೇ ರೀತಿ ಸನಾತನ ಧರ್ಮದ ವಿರೋಧವು ಈ ಎಲ್ಲಾ ಕರ್ತವ್ಯಗಳನ್ನು ನಾಶಪಡಿಸುತ್ತದೆ ಎಂದು ಅರ್ಥ ಎಂದು ಹೇಳಿದರು.
ತಮಿಳುನಾಡು ಮಾಜಿ ಸಿಎಂ ಅಣ್ಣಾದೊರೈ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಸನಾತನ ಧರ್ಮದ ವಿರುದ್ಧದ ಅಂಶಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ತಿರು ವಿ ಕಾ ಗವರ್ನಮೆಂಟ್ ಆರ್ಟ್ಸ್ ಕಾಲೇಜಿನ ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲರು ಸುತ್ತೋಲೆ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎನ್ ಶೇಷಸಾಯಿ ಅವರಿದ್ಧ ಪೀಠ ನಡೆಸಿತು.
ಸನಾತನ ಧರ್ಮವು ಜಾತಿಪದ್ಧತಿ ಮತ್ತು ಅಸ್ಪೃಶ್ಯತೆಯನ್ನು ಉತ್ತೇಜಿಸುತ್ತದೆ ಎಂಬುದೇ ಪ್ರಸ್ತುತ ಕಾಣಿಸಿಕೊಳ್ಳುತ್ತಿರುವ ಕಲ್ಪನೆ ಎಂಬುದನ್ನು ನ್ಯಾಯಾಲಯವು ಗಮನಿಸಿದೆ. ಸಂವಿಧಾನದ 15ನೇ ಪರಿಚ್ಛೇದದ ಅಡಿಯಲ್ಲಿ ರದ್ದುಪಡಿಸಲಾದ ಅಸ್ಪೃಶ್ಯತೆಯನ್ನು ಸನಾತನ ಧರ್ಮದ ಒಳಗೆ ಅಥವಾ ಹೊರಗೆ ಸಹ ಸಹಿಸಬಾರದು ಎಂಬುದನ್ನು ನ್ಯಾಯಾಲಯ ಒತ್ತಿ ಹೇಳುತ್ತದೆ ಎಂದು ಪೀಠ ಹೇಳಿದೆ.
ಇದನ್ನೂ ಓದಿ: ಇಂಡಿಯಾ ಮೈತ್ರಿಕೂಟ ಸನಾತನ ಧರ್ಮ ಮತ್ತು ಹಿಂದೂ ವಿರೋಧಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಸಂವಿಧಾನದ 19(1)(ಎ) ಪರಿಚ್ಛೇದವು ವಾಕ್ ಸ್ವಾತಂತ್ರ್ಯಕ್ಕೆ ಮೂಲಭೂತ ಹಕ್ಕನ್ನು ನೀಡಿರುವುದು ನಿಜ. ಆದರೂ, ಮಾತನಾಡುವ ವಿಷಯಕ್ಕೆ ಮೌಲ್ಯ ಇರಬೇಕು ಎಂಬುದನ್ನೂ ಗಮನಿಸಬೇಕಿದೆ ಎಂದು ನ್ಯಾಯಾಲಯವು ಹೇಳಿದೆ. ವಾಕ್ ಸ್ವಾತಂತ್ರ್ಯವು ಸಂಪೂರ್ಣ ಮೂಲಭೂತ ಹಕ್ಕಲ್ಲ. ಧರ್ಮಕ್ಕೆ ಸಂಬಂಧಿಸಿದ ವಾಕ್ ಸ್ವಾತಂತ್ರ್ಯದ ವಿಚಾರದಲ್ಲಿ, ಯಾರ ಭಾವನೆಗಳಿಗೂ ಧಕ್ಕೆಯಾಗದಂತೆ, ಯಾರಿಗೂ ನೋವಾಗದಂತೆ ನೋಡಿಕೊಳ್ಳುವುದು ಅವಶ್ಯಕ ಎಂದು ಪೀಠ ಹೇಳಿದೆ.
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಮತ್ತು ಕೊರೋನಾಗೆ ಹೋಲಿಸಿದ್ದಲ್ಲದೆ ಅದನ್ನು ನಿರ್ಮೂಲನೆ ಮಾಡಬೇಕು ಎಂದು ಇತ್ತೀಚೆಗೆ ಕರೆ ನೀಡಿದ್ದರು. ಇದು ವ್ಯಾಪಕ ವಿರೋಧಕ್ಕೆ ಗುರಿಯಾಗಿತ್ತು. ಸ್ಟಾಲಿನ್ ಹೇಳಿಕೆಗೆ ದೇಶದಾದ್ಯಂತ ಹಿಂದೂ ಸಂಘಟನೆಗಳು, ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಸಹ ಸನಾತನ ಧರ್ಮದ ವಿರುದ್ಧ ಮಾತನಾಡುವವರಿಗೆ ಸೂಕ್ತ ತಿರುಗೇಟು ನೀಡುವಂತೆ ಸಂಪುಟ ಸಹೋದ್ಯೋಗಿಗಳಿಗೆ ಸೂಚನೆ ನೀಡಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ