ನಮ್ಮನ್ನು ನಂಬಿ ಪ್ಲೀಸ್.. ಫೇಸ್​ಬುಕ್​ನೊಂದಿಗೆ ನಿಮ್ಮ ಡೇಟಾ ಹಂಚಿಕೊಳ್ಳುವುದಿಲ್ಲ; ಸ್ಟೇಟಸ್​ ಮೂಲಕ ಅಂಗಲಾಚಿದ ವಾಟ್ಸ್​ಆ್ಯಪ್​

ತೀವ್ರ ಟೀಕೆಗೆ ಗುರಿಯಾದ ಬಳಿಕ ವಾಟ್ಸ್​ಆ್ಯಪ್​ ನಿನ್ನೆ ಉಲ್ಟಾ ಹೊಡೆದಿತ್ತು. ನಾವು ಫೆ.8ರಿಂದ ಹೊಸ ನಿಯಮವನ್ನು ಅನ್ವಯ ಮಾಡುವುದಿಲ್ಲ. ಯಾರ ಖಾತೆಯನ್ನೂ ರದ್ದುಗೊಳಿಸುವುದಿಲ್ಲ, ಡಿಲೀಟ್ ಕೂಡ ಮಾಡುವುದಿಲ್ಲ ಎಂದೂ ಹೇಳಿತ್ತು.

  • TV9 Web Team
  • Published On - 15:07 PM, 17 Jan 2021
ನಮ್ಮನ್ನು ನಂಬಿ ಪ್ಲೀಸ್.. ಫೇಸ್​ಬುಕ್​ನೊಂದಿಗೆ ನಿಮ್ಮ ಡೇಟಾ ಹಂಚಿಕೊಳ್ಳುವುದಿಲ್ಲ; ಸ್ಟೇಟಸ್​ ಮೂಲಕ ಅಂಗಲಾಚಿದ ವಾಟ್ಸ್​ಆ್ಯಪ್​
ವಾಟ್ಸ್​ಆ್ಯಪ್ ಹಾಕಿರುವ ಸ್ಟೇಟಸ್

ನವದೆಹಲಿ: ಫೇಸ್​ಬುಕ್​ ಮಾಲೀಕತ್ವದ ವಾಟ್ಸ್​ಆ್ಯಪ್​ ತನ್ನ ಗೌಪ್ಯತಾ ನಿಯಮಗಳನ್ನು ಪರಿಷ್ಕರಿಸಿ, ನೂತನ ನಿಯಮಗಳು ಫೆ.8ರಿಂದ ಅನ್ವಯ ಆಗಲಿದೆ ಎಂದು ಹೇಳಿಕೊಂಡ ಮೇಲೆ ಜಾಗತಿಕವಾಗಿ ತೀವ್ರ ಟೀಕೆಗೆ ಗುರಿಯಾಯಿತು. ಅದೆಷ್ಟೋ ಗ್ರಾಹಕರು ಸಿಗ್ನಲ್​, ಟೆಲಿಗ್ರಾಂಗಳನ್ನು ಡೌನ್​ಲೋಡ್ ಮಾಡಿಕೊಳ್ಳಲು ಶುರು ಮಾಡಿದ್ದೂ ಆಯ್ತು.

ಫೆ.8ರಿಂದ ಹೊಸ ಪ್ರೈವಸಿ ಪಾಲಿಸಿ ಅನ್ವಯ ಆಗಲಿದೆ. ಇದನ್ನು ಒಪ್ಪದವರ ಅಕೌಂಟ್​ ಅಮಾನತುಗೊಳ್ಳುತ್ತದೆ ಎಂದು ವಾಟ್ಸ್​ಆ್ಯಪ್​ ಕಂಪನಿ ಹೇಳಿಕೊಂಡಿತ್ತು. ವಾಟ್ಸ್​ಆ್ಯಪ್​ನ ಹೊಸ ಪ್ರೈವೆಸಿ ನೀತಿಯ ಅನ್ವಯ, ಬಳಕೆದಾರರ ಡೇಟಾ ಫೇಸ್​ಬುಕ್​ಗೂ ದೊರೆಯಲಿದೆ ಎಂದು ಆರೋಪಿಸಿ ಬಳಕೆದಾರರು ಕೆಂಡಾಮಂಡಲರಾಗಿದ್ದರು. ತೀವ್ರ ಟೀಕೆಗೆ ಗುರಿಯಾದ ಬಳಿಕ ವಾಟ್ಸ್ಆ್ಯಪ್​ ನಿನ್ನೆ ಉಲ್ಟಾ ಹೊಡೆದಿತ್ತು. ನಾವು ಫೆ.8ರಿಂದ ಹೊಸ ನಿಯಮವನ್ನು ಅನ್ವಯ ಮಾಡುವುದಿಲ್ಲ. ಯಾರ ಖಾತೆಯನ್ನೂ ರದ್ದುಗೊಳಿಸುವುದಿಲ್ಲ, ಡಿಲೀಟ್ ಕೂಡ ಮಾಡುವುದಿಲ್ಲ ಎಂದೂ ಹೇಳಿತ್ತು.

ಅಷ್ಟೇ ಅಲ್ಲ, ವಾಟ್ಸ್​ಆ್ಯಪ್​ನ ಪ್ರೈವಸಿ ಮತ್ತು ಭದ್ರತೆಯ ಬಗ್ಗೆ ಹಲವು ತಪ್ಪು ಮಾಹಿತಿಗಳು ಹರಡುತ್ತಿವೆ. ಇದನ್ನು ಸರಿಪಡಿಸಲು, ಬಳಕೆದಾರರಿಗೆ ನಿಖರವಾಗಿ ಮಾಹಿತಿ ನೀಡಲು ನಾವಿನ್ನೂ ಹೆಚ್ಚೆಚ್ಚು ಕೆಲಸ ಮಾಡಬೇಕು. ಹೊಸ ಪ್ರೈವಸಿ ನೀತಿ ಬಗ್ಗೆ ಮೇ 15ರ ಬಳಿಕ ಯೋಚನೆ ಮಾಡುತ್ತೇವೆ ಎಂದು ಹೇಳಿತ್ತು.

ಅದರ ಬೆನ್ನಲ್ಲೇ ಇಂದು ವಾಟ್ಸ್​ಆ್ಯಪ್​ ಸ್ಟೇಟಸ್​ ಮೂಲಕ ತನ್ನ ಬಳಕೆದಾರರಿಗೆ ಸ್ಪಷ್ಟನೆ ನೀಡಿದೆ. ಇಂದು ಸ್ಟೇಟಸ್​ ಹಾಕುವ ಮೂಲಕ ತನ್ನ ಪ್ರತಿ ಬಳಕೆದಾರನಲ್ಲೂ ವಿಶ್ವಾಸ ಹುಟ್ಟಿಸುವ ಕೆಲಸ ಮಾಡಿದೆ. ಒಟ್ಟು ನಾಲ್ಕು ಸ್ಟೇಟಸ್​ ಅಪ್​ಡೇಟ್​ ಮಾಡಿದ್ದು, ಅವು ಹೀಗಿವೆ..

ನಿಮ್ಮ ಸಂದೇಶಗಳು ಎಂಡ್​ ಟು ಎಂಡ್​ ಎನ್​ಸ್ಕ್ರಿಪ್ಟೆಡ್​ಗೆ ಒಳಪಟ್ಟಿರುತ್ತವೆ. ಹಾಗಾಗಿ ನಿಮ್ಮ ಖಾಸಗಿ ಸಂದೇಶಗಳು, ಚಾಟ್​ಗಳು, ವೈಸ್​ ಮೆಸೇಜ್​ ಯಾವುದನ್ನೂ ವಾಟ್ಸ್​ಆ್ಯಪ್​ ನೋಡಲು ಸಾಧ್ಯವಿಲ್ಲ ಹಾಗೇ, ಕೇಳಲೂ ಸಾಧ್ಯವಿಲ್ಲ.

ನೀವು ಶೇರ್ ಮಾಡಿಕೊಂಡ ಲೊಕೇಶನ್​ನ್ನೂ ವಾಟ್ಸ್​ಆ್ಯಪ್​ಗೆ ನೋಡಲು ಸಾಧ್ಯವಿಲ್ಲ.

ಬಳಕೆದಾರರ ಕಾಂಟಾಕ್ಟ್​ ಸೇರಿ ಇನ್ನಿತರ ಯಾವುದೇ ಮಾಹಿತಿಯನ್ನೂ ನಾವು ಫೇಸ್​ಬುಕ್ ಜತೆ ಹಂಚಿಕೊಳ್ಳುವುದಿಲ್ಲ.

ನಿಮ್ಮ ಖಾಸಗಿ ಬದುಕನ್ನು ಗೌರವಿಸುತ್ತೇವೆ. ಬೆಲೆ ಕೊಡುತ್ತೇವೆ.

ಈ ಮೂಲಕ ವಾಟ್ಸ್​ಆ್ಯಪ್​ ತನ್ನ ಬಳಕೆದಾರರಿಗೆ ಮತ್ತೆ ಹತ್ತಿರವಾಗಲು ಪ್ರಯತ್ನಿಸುತ್ತಿದೆ.

ವಾಟ್ಸ್​ಆ್ಯಪ್ ಇಲ್ಲದೆ ಬದುಕಬಹುದೇ..?: ಇದನ್ನು ಓದಿ ನೀವೇ ಕಂಡುಕೊಳ್ಳಿ ಉತ್ತರ