ಅತ್ತಲೂ ಇಲ್ಲ, ಇತ್ತಲೂ ಇಲ್ಲ; ಭಾರತದ ಆರೋಗ್ಯ ರಕ್ಷಣೆಯ ಮಿಸ್ಸಿಂಗ್ ಮಿಡಲ್

Santosh Nair's article in 'Your India' series: ಭಾರತದಲ್ಲಿ ಸುಮಾರು 40 ಕೋಟಿ ಜನರು 'ಮಿಸ್ಸಿಂಗ್ ಮಿಡಲ್' ವರ್ಗಕ್ಕೆ ಸೇರಿದ್ದು, ಸರ್ಕಾರಿ ಅಥವಾ ಖಾಸಗಿ ಆರೋಗ್ಯ ವಿಮೆಯ ಪ್ರಯೋಜನಗಳಿಂದ ವಂಚಿತರಾಗಿದ್ದಾರೆ. ಆಯುಷ್ಮಾನ್ ಭಾರತ್‌ಗೆ ಅನರ್ಹರಾದರೂ, ಖಾಸಗಿ ವಿಮೆ ಕಟ್ಟುವಷ್ಟು ಶಕ್ತಿ ಇವರಲ್ಲಿಲ್ಲ. ಇದರಿಂದ ಅನಾರೋಗ್ಯ ಬಂದಾಗ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಸ್ವಂತ ಜೇಬಿನಿಂದಲೇ ಭರಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಸೌಲಭ್ಯ ಕೊರತೆ ಮತ್ತು ಔಷಧ ವೆಚ್ಚವೂ ಈ ಸಮಸ್ಯೆ ಹೆಚ್ಚಿಸುತ್ತದೆ.

ಅತ್ತಲೂ ಇಲ್ಲ, ಇತ್ತಲೂ ಇಲ್ಲ; ಭಾರತದ ಆರೋಗ್ಯ ರಕ್ಷಣೆಯ ಮಿಸ್ಸಿಂಗ್ ಮಿಡಲ್
ಆರೋಗ್ಯ ವಿಮೆ
Image Credit source: Getty Images
Edited By:

Updated on: Oct 18, 2026 | 7:14 PM

ಸಾಮಾನ್ಯ ಆದರೆ ಸ್ಥಿರ ಆದಾಯ ಗಳಿಸುವ ಅಂಗಡಿಯವರೊಬ್ಬರಿಗೆ ತೀವ್ರ ಅನಾರೋಗ್ಯ ಉಂಟಾಗುತ್ತದೆ. ದಾಖಲೆಗಳ ಪ್ರಕಾರ ಅವರು ಕಡು ಬಡವರಲ್ಲದ ಕಾರಣ, ಸರ್ಕಾರದ ಅತಿ ದೊಡ್ಡ ಆರೋಗ್ಯ ವಿಮಾ ಯೋಜನೆಗೆ (ಬಡವರಿಗಾಗಿ ಮೀಸಲಾಗಿರುವ ಯೋಜನೆ) ಅರ್ಹರಾಗುವುದಿಲ್ಲ. ಹಾಗೆಯೇ, ಪ್ರೈವೇಟ್ ಹೆಲ್ತ್ ಇನ್ಶುರೆನ್ಸ್ ಪ್ರೀಮಿಯಂ ಕಟ್ಟುವಷ್ಟು ಶಕ್ತಿ ಅವರ ಬಳಿ ಇರುವುದಿಲ್ಲ. ಆಸ್ಪತ್ರೆಯ ಬಿಲ್ ಬಂದಾಗ, ಅದನ್ನು ಭರಿಸುವವರು ಬೇರೆ ಯಾರೂ ಇರುವುದಿಲ್ಲ, ಸಂಪೂರ್ಣ ಹಣವನ್ನು ಅವರೇ ಸ್ವತಃ ನೀಡಬೇಕಾಗುತ್ತದೆ.

ಈ ಅಂತರಕ್ಕೆ ಸರ್ಕಾರಿ ನೀತಿ ನಿರೂಪಕರು ಒಂದು ಹೆಸರನ್ನು ಇಟ್ಟಿದ್ದಾರೆ: ‘ಮಿಸ್ಸಿಂಗ್ ಮಿಡಲ್’ (Missing Middle).

Loading...

ನೀತಿ ಆಯೋಗದ ವರದಿಯ ಪ್ರಕಾರ, ಭಾರತದ ಜನಸಂಖ್ಯೆಯ ಸುಮಾರು ಶೇ. 30ರಷ್ಟು ಭಾಗ, ಅಂದರೆ ಸುಮಾರು 40 ಕೋಟಿ ಜನರು ಈ ವರ್ಗಕ್ಕೆ ಸೇರುತ್ತಾರೆ. ಇವರಿಗೆ ಯಾವುದೇ ಅನುಕೂಲಕರ ಆರೋಗ್ಯ ವಿಮಾ ರಕ್ಷಣೆ ಇರುವುದಿಲ್ಲ. ಇವರ ಆದಾಯ ತುಸು ಹೆಚ್ಚಿರುವದರಿಂದ ಆಯುಷ್ಮಾನ್ ಭಾರತ್‌ನಂತಹ ಸರ್ಕಾರದ ಯೋಜನೆಗಳ ಲಾಭ ಪಡೆಯಲು ಇವರು ಅರ್ಹರಿರುವುದಿಲ್ಲ; ಆದರೆ ಪ್ರೈವೇಟ್ ವಿಮೆ ಪಡೆಯಲು ಇವರ ಬಳಿ ಸಾಕಷ್ಟು ಹಣವಿರುವುದಿಲ್ಲ. ಹೀಗಾಗಿ, ಇವರು ಬಡವರ ಪಟ್ಟಿಯಲ್ಲಿ ಬಾರದಿದ್ದರೂ, ಅನಾರೋಗ್ಯ ಬಂದಾಗ ಸಂಪೂರ್ಣ ಖರ್ಚನ್ನು ತಮ್ಮ ಸ್ವಂತ ಜೇಬಿನಿಂದಲೇ ಭರಿಸಬೇಕಾಗುತ್ತದೆ.

ಕಳೆದ ಒಂದು ದಶಕದಲ್ಲಿ ಸರ್ಕಾರಿ ಆರೋಗ್ಯ ವಿಮೆಗಳು ಸಾಕಷ್ಟು ವಿಸ್ತಾರಗೊಂಡಿದ್ದರೂ, ಜನರಿಗಾಗುವ ಸ್ವಂತ ಖರ್ಚು ಮಾತ್ರ ಏಕೆ ಕಡಿಮೆಯಾಗುತ್ತಿಲ್ಲ ಎಂಬ ಗೊಂದಲಕ್ಕೆ ಈ ಅಂತರವೇ ಮುಖ್ಯ ಕಾರಣವಾಗಿದೆ. ಸರ್ಕಾರದ ಯೋಜನೆಗಳು ಆದಾಯದ ತೀರ ಕೆಳವರ್ಗ ಮತ್ತು ಮೇಲ್ವರ್ಗವನ್ನು ಗಮನದಲ್ಲಿಟ್ಟುಕೊಂಡು ರೂಪಿಸಲ್ಪಟ್ಟಿರುವುದರಿಂದ, ಮಧ್ಯದಲ್ಲಿರುವ ಈ ದೊಡ್ಡ ವರ್ಗವು ಸಂಪೂರ್ಣವಾಗಿ ರಕ್ಷಣೆ ಇಲ್ಲದೆ ಉಳಿದಿದೆ.

ಇದಕ್ಕೆ ಎರಡನೇ ಪ್ರಮುಖ ಕಾರಣವೆಂದರೆ ಸೌಲಭ್ಯಗಳ ಕೊರತೆ. ಸರ್ಕಾರದ ಆಸ್ಪತ್ರೆಗಳು ಉಚಿತ ಅಥವಾ ಕಡಿಮೆ ವೆಚ್ಚದ್ದಾಗಿದ್ದರೂ, ಬೇಡಿಕೆಗೆ ತಕ್ಕಂತೆ ಅಲ್ಲಿ ಸಿಬ್ಬಂದಿ ಮತ್ತು ಸೌಲಭ್ಯಗಳ ಕೊರತೆ ಇರುತ್ತದೆ. ತುರ್ತು ಸಂದರ್ಭದಲ್ಲಿ ಜನರು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಲು ಸಾಧ್ಯವಾಗದೆ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ. ಅಲ್ಲಿ ಮಾರುಕಟ್ಟೆ ದರದಂತೆ ದುಬಾರಿ ಬಿಲ್ ವಿಧಿಸಲಾಗುತ್ತದೆ.

ಮೂರನೆಯದಾಗಿ, ಆಸ್ಪತ್ರೆ ಖರ್ಚಿಗಿಂತಲೂ ಔಷಧಗಳ ವೆಚ್ಚವೇ ಭಾರತದಲ್ಲಿ ಸ್ವಂತ ಖರ್ಚಿನ ಅತಿ ದೊಡ್ಡ ಭಾಗವಾಗಿದೆ. ಉಚಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ, ವೈದ್ಯರು ಬರೆದುಕೊಡುವ ದೀರ್ಘಕಾಲದ ಮಾತ್ರೆಗಳಿಗೆ ಮತ್ತು ಔಷಧಿಗಳಿಗೆ ಪ್ರತ್ಯೇಕವಾಗಿ ದೊಡ್ಡ ಮೊತ್ತವನ್ನು ಖರ್ಚು ಮಾಡಬೇಕಾಗುತ್ತದೆ.

ಈ ಎಲ್ಲಾ ಕಾರಣಗಳಿಂದಾಗಿ, ಭಾರತದಲ್ಲಿ ಆರೋಗ್ಯ ರಕ್ಷಣೆ ಸುಧಾರಿಸುತ್ತಿದ್ದರೂ, ಸುಮಾರು 40 ಕೋಟಿ ಜನರು ಮಾತ್ರ ಯಾವುದೇ ವಿಮೆ ಅಥವಾ ರಕ್ಷಣೆಯಿಲ್ಲದೆ ಸಂಕಷ್ಟದಲ್ಲೇ ಉಳಿದಿದ್ದಾರೆ.

(ಆಧಾರಗಳು: ನೀತಿ ಆಯೋಗದ “ಭಾರತದ ಮಿಸ್ಸಿಂಗ್ ಮಿಡಲ್​ಗಾಗಿ ಆರೋಗ್ಯ ವಿಮೆ” ವರದಿ; ರಾಷ್ಟ್ರೀಯ ಆರೋಗ್ಯ ಲೆಕ್ಕಪತ್ರಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ; ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ್ ಆರೋಗ್ಯ ಯೋಜನೆ.)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Santosh Nair

Santosh Nair is Editor (Network Coordination), TV9 Network. With over two decades in media, he has played pivotal roles in some of the best newsrooms in the country. He is an avid reader who pens his thoughts after deep-diving into the subject matter.

Read More
Loading...
Unable to load recommendations.
Follow Us