
ನವದೆಹಲಿ, ಜುಲೈ 29: ಏಪ್ರಿಲ್ 22ರ ಪಹಲ್ಗಾಮ್ ಹತ್ಯಾಕಾಂಡದ (Pahalgam Terror Attack) ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಿದೆ. ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಸೇರಿದಂತೆ ಈ ದಾಳಿಗೆ ಕಾರಣರಾದ ಮೂವರು ಪಾಕಿಸ್ತಾನಿ ಉಗ್ರರನ್ನು ಕೊಂದಿದ್ದೇವೆ ಎಂದು ಅಮಿತ್ ಶಾ ಇಂದು ಸದನದಲ್ಲಿ ಘೋಷಿಸಿದ್ದಾರೆ. ಈ ವೇಳೆ ಪ್ರಶ್ನೆ ಮಾಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಪಹಲ್ಗಾಮ್ ಭಯೋತ್ಪಾದಕರನ್ನು ಕೊಂದ ಆಪರೇಷನ್ ಮಹಾದೇವ್ ಕಾರ್ಯಾಚರಣೆಯ ಸಮಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅಧಿವೇಶನದಲ್ಲಿ ವಿಪಕ್ಷಗಳ ಬಾಯಿ ಮುಚ್ಚಿಸಬೇಕೆಂಬ ಕಾರಣಕ್ಕೇ ಕಾದು ನಿನ್ನೆ ಆ ಮೂವರು ಉಗ್ರರ ಹತ್ಯೆ ಮಾಡಿದ್ದೀರಾ? ಎಂದು ಅಖಿಲೇಶ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಪಹಲ್ಗಾಮ್ ದಾಳಿ ನಡೆದು ಇಷ್ಟು ತಿಂಗಳಾದರೂ ನಿನ್ನೆಯೇ ಆ ಉಗ್ರರನ್ನು ಹತ್ಯೆ ಮಾಡಿದ್ದು ಏಕೆ? ಆಪರೇಷನ್ ಮಹಾದೇವ್ ಏಪ್ರಿಲ್ 22ರಂದೇ ಆರಂಭವಾಗಿತ್ತು ಎನ್ನುವುದಾದರೆ ಇಷ್ಟು ದಿನ ಕಾದಿದ್ದು ಏಕೆ? ಇದರ ಹಿಂದೆಯೂ ರಾಜಕೀಯ ಷಡ್ಯಂತ್ರವಿದೆ ಎಂಬ ಅನುಮಾನವಿದೆ ಎಂದು ಅವರು ಹೇಳಿದ್ದಾರೆ.
“ಎನ್‌ಕೌಂಟರ್ ನಿನ್ನೆಯೇ ಏಕೆ ಸಂಭವಿಸಿತು? ನೀವು ತಂತ್ರಜ್ಞಾನದ ಬಗ್ಗೆ ಅಷ್ಟೊಂದು ಪರಿಣತರಾಗಿದ್ದರೆ ಪುಲ್ವಾಮಾ ದಾಳಿಯ ಸಮಯದಲ್ಲಿ ಆರ್‌ಡಿಎಕ್ಸ್ ಸಾಗಿಸಲು ಬಳಸಿದ ಕಾರನ್ನು ನೀವು ಏಕೆ ಟ್ರ್ಯಾಕ್ ಮಾಡಿಲ್ಲ? ಪುಲ್ವಾಮಾದಲ್ಲಿ ಇಲ್ಲಿಯವರೆಗೆ ಆರ್‌ಡಿಎಕ್ಸ್ ಸಾಗಿಸುತ್ತಿದ್ದ ವಾಹನವನ್ನು ಏಕೆ ಹಿಡಿಯಲಾಗಿಲ್ಲ? ಇಂದಿಗೂ ಬಿಜೆಪಿ ಬಯಸಿದರೆ ಉಗ್ರರ ವಾಹನವು ಪುಲ್ವಾಮಾಗೆ ಯಾವ ಮಾರ್ಗದಿಂದ ಬಂದಿದೆ ಎಂಬುದನ್ನು ಅವರು ಕಂಡುಹಿಡಿಯಬಹುದು” ಎಂದು ಕನ್ನೌಜ್ ಸಂಸದ ಅಖಿಲೇಶ್ ಯಾದವ್ ಹೇಳಿದ್ದಾರೆ.
ಇದನ್ನೂ ಓದಿ: ಪಹಲ್ಗಾಮ್ ಉಗ್ರರ ಹುಟ್ಟಡಗಿಸಲು ಭಾರತೀಯ ಸೇನೆ ಆಪರೇಷನ್ ಮಹಾದೇವ್ ಎಂದು ಹೆಸರಿಟ್ಟಿದ್ದೇಕೆ?
ಸೋಮವಾರ ಭಾರತೀಯ ಸಶಸ್ತ್ರ ಪಡೆಗಳು ಏಪ್ರಿಲ್ 22ರ ಪಹಲ್ಗಾಮ್ ದಾಳಿಯ ಹಿಂದಿನ ಮೂವರು ಲಷ್ಕರ್ ಭಯೋತ್ಪಾದಕರನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದವು. ಆಪರೇಷನ್ ಮಹಾದೇವ್‌ನಲ್ಲಿ ಕೊಲ್ಲಲ್ಪಟ್ಟವರಲ್ಲಿ ಲಷ್ಕರ್‌ನ ಪ್ರಮುಖ ಕಮಾಂಡರ್ ಸುಲೇಮಾನ್ ಶಾ ಅಲಿಯಾಸ್ ಹಾಶಿಮ್ ಮೂಸಾ ಕೂಡ ಸೇರಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ