ಕಾಂಗ್ರೆಸ್ ಇತಿಹಾಸವನ್ನೆಲ್ಲ ಹೇಳಿದ್ರಲ್ಲ 11 ವರ್ಷದಿಂದ ನೀವೇನು ಮಾಡಿದ್ರಿ? ಸಂಸತ್ನಲ್ಲಿ ಪ್ರಿಯಾಂಕಾ ಗಾಂಧಿ ಟೀಕೆ
ಸಂಸತ್ ಅಧಿವೇಶನದಲ್ಲಿ ಕಾಂಗ್ರೆಸ್ ನಾಯಕಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ಇಂದು ಮಾಡಿರುವ ದಿಟ್ಟ ಭಾಷಣ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಪಹಲ್ಗಾಮ್ ದಾಳಿಗೆ ಭದ್ರತಾ ವೈಫಲ್ಯವೇ ಕಾರಣ ಎಂದು ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ. ಜನರು ನಿಮ್ಮ ಸರ್ಕಾರವನ್ನು ನಂಬಿ ಪ್ರವಾಸಕ್ಕೆ ಹೋದರು. ಆದರೆ, ನೀವು ಅವರ ನಂಬಿಕೆಯನ್ನು ಉಳಿಸಿಕೊಳ್ಳಲಿಲ್ಲ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ನವದೆಹಲಿ, ಜುಲೈ 29: ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್ (Operation Sindoor) ಕುರಿತ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ (Priyanka Gandhi) ಭಾರತೀಯ ಸಶಸ್ತ್ರ ಪಡೆಗಳ ಶೌರ್ಯವನ್ನು ಶ್ಲಾಘಿಸಿದ್ದಾರೆ. ಭಾರತೀಯ ಸೇನೆ ಪಹಲ್ಗಾಮ್ ದಾಳಿಗೆ (Pahalgam Attack) ಕಾರಣರಾದ ಉಗ್ರರನ್ನು ಹತ್ಯೆ ಮಾಡಿರುವುದು ಮೆಚ್ಚಲೇಬೇಕಾದ ಸಂಗತಿ. ಆದರೆ ಕಾಶ್ಮೀರದ ಬಗ್ಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಪ್ರಿಯಾಂಕಾ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಗುಪ್ತಚರ ವೈಫಲ್ಯವನ್ನು ಪ್ರಶ್ನಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ, “ಇಂತಹ ಭೀಕರ ಭಯೋತ್ಪಾದಕ ದಾಳಿ ನಡೆಯಲಿದೆ ಮತ್ತು ಪಾಕಿಸ್ತಾನದಲ್ಲಿ ಅದಕ್ಕೆ ಸಂಚು ರೂಪಿಸಲಾಗುತ್ತಿದೆ ಎಂದು ಯಾವುದೇ ಸರ್ಕಾರಿ ಸಂಸ್ಥೆಗೆ ತಿಳಿದಿರಲಿಲ್ಲವೇ?” ಎಂದು ಕೇಳಿದ್ದಾರೆ.
“ಜನರು ಈ ಸರ್ಕಾರವನ್ನು ನಂಬಿ ಪಹಲ್ಗಾಮ್‌ಗೆ ಹೋದರು. ಆದರೆ, ಸರ್ಕಾರ ಅವರನ್ನು ದೇವರ ದಯೆಗೆ ಬಿಟ್ಟಿತು. ಈ ಹಿಂದೆ ಡಾ. ಮನಮೋಹನ್ ಸಿಂಗ್ ಅವರ ಸರ್ಕಾರದ ಅವಧಿಯಲ್ಲಿ 26/11 ಮುಂಬೈ ದಾಳಿ ನಡೆದಾಗ ಎಲ್ಲಾ ಭಯೋತ್ಪಾದಕರು ಒಂದೇ ಸಮಯದಲ್ಲಿ ಕೊಲ್ಲಲ್ಪಟ್ಟರು. ಒಬ್ಬನನ್ನು ಹಿಡಿಯಲಾಯಿತು, ನಂತರ ಆತನನ್ನು ಗಲ್ಲಿಗೇರಿಸಲಾಯಿತು. ಆ ದಾಳಿಯ ಬಳಿಕ ನೈತಿಕ ಹೊಣೆ ಹೊತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ರಾಜೀನಾಮೆ ನೀಡಿದರು, ಗೃಹ ಸಚಿವರು ರಾಜೀನಾಮೆ ನೀಡಿದರು. ಏಕೆಂದರೆ ನಾವು ನಮ್ಮ ಜನರಿಗೆ ಮತ್ತು ನಮ್ಮ ಭೂಮಿಗೆ ಜವಾಬ್ದಾರರಾಗಿದ್ದೇವೆ ಎಂಬ ಕಾರಣಕ್ಕೆ. ಆದರೆ, ಪಹಲ್ಗಾಮ್ ದಾಳಿಗೆ ತಮ್ಮ ಭದ್ರತಾ ವೈಫಲ್ಯ ಕಾರಣ ಎಂದು ಕೇಂದ್ರ ಸರ್ಕಾರ ಒಪ್ಪಿಕೊಳ್ಳಲೇ ಇಲ್ಲ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ನೆಹರು ಕಾರಣದಿಂದಲೇ ಪಿಒಕೆ ಅಸ್ತಿತ್ವಕ್ಕೆ ಬಂದಿದ್ದು; ಸದನದಲ್ಲಿ ಕಾಂಗ್ರೆಸ್ ನಾಯಕರ ಬೆವರಿಳಿಸಿದ ಅಮಿತ್ ಶಾ
ಉಗ್ರರಿಂದ ನಾನೂ ಅಪ್ಪನನ್ನು ಕಳೆದುಕೊಂಡೆ:
“ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ನನ್ನ ತಾಯಿಯ ಕಣ್ಣೀರಿನ ಬಗ್ಗೆ ಮಾತನಾಡಿದರು. ನಾನು ಇದಕ್ಕೆ ಉತ್ತರಿಸಲು ಬಯಸುತ್ತೇನೆ. ಭಯೋತ್ಪಾದಕರು ನನ್ನ ತಂದೆಯನ್ನು ಕೊಂದಾಗ ನನ್ನ ತಾಯಿಯ ಕಣ್ಣಲ್ಲಿ ನೀರು ಸುರಿದಿತ್ತು. ಇಂದು, ನಾನು ಪಹಲ್ಗಾಮ್ನಲ್ಲಿ ಮೃತಪಟ್ಟ ಆ 26 ಜನರ ಬಗ್ಗೆ ಮಾತನಾಡುವಾಗ ಅವರ ಕುಟುಂಬದ ನೋವು ನನಗೆ ಅರ್ಥವಾಗುತ್ತದೆ. ಏಕೆಂದರೆ, ನನ್ನ ಅಪ್ಪ ಕೂಡ ಉಗ್ರರ ದಾಳಿಗೆ ಬಲಿಯಾದವರು. ಆ ನೋವು ಏನೆಂಬುದು ನನ್ನ ಕುಟುಂಬಕ್ಕೆ ಚೆನ್ನಾಗಿ ಗೊತ್ತಿದೆ” ಎಂದು ಪ್ರಿಯಾಂಕಾ ಗಾಂಧಿ ಭಾವುಕರಾಗಿದ್ದಾರೆ.
LIVE : Speaking in the Lok Sabha during special discussion on Pahalgam attack and Opration Sindoor. https://t.co/76VP53PXOU
— Priyanka Gandhi Vadra (@priyankagandhi) July 29, 2025
“ನೀವು ಇತಿಹಾಸದ ಬಗ್ಗೆ ಮಾತನಾಡುತ್ತೀರಿ, ನಾನು ವರ್ತಮಾನದ ಬಗ್ಗೆ ಮಾತನಾಡುತ್ತೇನೆ. ನೀವು ಯಾವಾಗಲೂ ಎಲ್ಲದಕ್ಕೂ ಒಂದು ನೆಪವನ್ನು ಹುಡುಕುತ್ತೀರಿ. ನೀವು ಇಡೀ ಗಾಂಧಿ-ನೆಹರು ಕುಟುಂಬದ ತಪ್ಪನ್ನು ಪಟ್ಟಿ ಮಾಡುತ್ತೀರಿ. ಹಾಗಾದರೆ, ನೀವು 11 ವರ್ಷಗಳಿಂದ ಅಧಿಕಾರದಲ್ಲಿದ್ದೀರಿ. ನೀವು ಏನು ಮಾಡಿದಿರಿ? ನಿನ್ನೆ ಗೌರವ್ ಗೊಗೊಯ್ ಗೃಹ ಸಚಿವರೊಂದಿಗೆ ಒಂದು ಪ್ರಶ್ನೆಯನ್ನು ಎತ್ತಿದರು. ಜನರ ರಕ್ಷಣೆ ನಿಮ್ಮ ಜವಾಬ್ದಾರಿಯಲ್ಲವೇ? ಎಂದು. ಆಗ ರಕ್ಷಣಾ ಸಚಿವ ರಾಜನಾಥ್ ತಲೆಯಾಡಿಸುತ್ತಿದ್ದರು, ಆದರೆ ಗೃಹ ಸಚಿವ ಅಮಿತ್ ಶಾ ನಗುತ್ತಿದ್ದರು” ಎಂದು ಕಾಂಗ್ರೆಸ್ ನಾಯಕಿ ತಮ್ಮ ಭಾಷಣದ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Congress MP Priyanka Gandhi Vadra says, “Union Home Minister spoke about my mother’s tears today. I want to answer this. My mother’s tears fell when terrorists killed my father. Today, when I talk about those 26 people (victims of the Pahalgam attack), it is because I understand… pic.twitter.com/ZPwbqgePTe
— ANI (@ANI) July 29, 2025
ಇದನ್ನೂ ಓದಿ: ನಿನ್ನೆಯೇ ಪಹಲ್ಗಾಮ್ ದಾಳಿಯ ಉಗ್ರರನ್ನು ಕೊಂದಿದ್ದೇಕೆ?; ಆಪರೇಷನ್ ಮಹಾದೇವ್ ಬಗ್ಗೆ ಅಖಿಲೇಶ್ ಯಾದವ್ ಪ್ರಶ್ನೆ
“ನಿನ್ನೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಒಂದು ಗಂಟೆ ಭಾಷಣ ಮಾಡಿದರು. ಅದರಲ್ಲಿ ಅವರು ಅನೇಕ ವಿಷಯಗಳ ಬಗ್ಗೆ ಮಾತನಾಡಿದರು. ಆದರೆ ಒಂದು ವಿಷಯವನ್ನು ಮಾತ್ರ ಪ್ರಸ್ತಾಪಿಸಲೇ ಇಲ್ಲ. ಏಪ್ರಿಲ್ 22ರಂದು 26 ಭಾರತೀಯರನ್ನು ಗುಂಡಿಕ್ಕಿ ಕೊಂದಿದ್ದು ಹೇಗೆ? ಈ ದಾಳಿ ಹೇಗೆ ಮತ್ತು ಏಕೆ ಸಂಭವಿಸಿತು? ಎಂಬ ನಮ್ಮ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ” ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.
Congress MP Priyanka Gandhi Vadra says, “Most of the people who are sitting in this House today have a security cover…But on that day in Pahalgam, 26 people were killed in front of their families. All those people who were present in Baisaran Valley on that day did not have any… pic.twitter.com/4icI2Rc82l
— ANI (@ANI) July 29, 2025
“ನಾನು ಈಗಲೂ ಒಂದೇ ಪ್ರಶ್ನೆ ಕೇಳುತ್ತಿದ್ದೇನೆ. ಪಹಲ್ಗಾಮ್ ದಾಳಿ ಹೇಗೆ ಸಂಭವಿಸಿತು? ಕಾಶ್ಮೀರದಲ್ಲಿ ಭಯೋತ್ಪಾದನೆ ಕೊನೆಗೊಂಡಿದೆ ಎಂದು ಸರ್ಕಾರ ಪ್ರಚಾರ ಮಾಡುತ್ತಲೇ ಇತ್ತು. ಹಾಗಾದರೆ ಬೈಸರನ್ ಕಣಿವೆಯಲ್ಲಿ ಭಯೋತ್ಪಾದಕರು ಏನು ಮಾಡುತ್ತಿದ್ದರು? ಅವರು ಕಣಿವೆಯೊಳಗೆ ಬಂದು ಗುಂಡು ಹಾರಿಸುವವರೆಗೂ ಸರ್ಕಾರಕ್ಕೆ ಮಾಹಿತಿಯೇ ಸಿಗಲಿಲ್ಲವೆಂದರೆ ಭದ್ರತಾ ವೈಫಲ್ಯ ಎಷ್ಟರಮಟ್ಟಿಗೆ ಇದೆ, ಗುಪ್ತಚರ ವ್ಯವಸ್ಥೆ ಯಾವ ರೀತಿ ಕೆಲಸ ಮಾಡುತ್ತಿದೆ ಎಂಬುದು ಇದರಲ್ಲೇ ಅರ್ಥವಾಗುತ್ತಿದೆ” ಎಂದು ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ.
ದಾಳಿಯಲ್ಲಿ ಸತ್ತವರು ಭಾರತೀಯರು:
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರಿಗೆ ಕೋಮುವಾದದ ಬಣ್ಣ ನೀಡುವ ಪ್ರಯತ್ನಗಳನ್ನು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಟೀಕಿಸಿದ್ದಾರೆ. ಲೋಕಸಭೆಯಲ್ಲಿ ಕೆಲವು ಸಂಸದ ಪಹಲ್ಗಾಮ್ ದಾಳಿಯ ಬಲಿಪಶುಗಳು “ಹಿಂದೂಗಳು” ಎಂದು ಹೇಳಿದ್ದಕ್ಕೆ “ಅವರು ಭಾರತೀಯರು” ಎಂದು ಪ್ರತಿಕ್ರಿಯಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




